ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ವತಿಯಿಂದ `ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ` ಆರಂಭಿಸಲಾಗಿದೆ.
ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಈ ಬಾರಿ ‘ಅಪ್ಪು ಮಕ್ಕಳ ಚಲನಚಿತ್ರೋತ್ಸವ’ ಎಂಬ ಹೆಸರಿನಿಂದ ಪ್ರಾರಂಭವಾಗಿದೆ.
ಇತ್ತೀಚೆಗೆ "ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ"ದ ಉದ್ಘಾಟನೆ ಅದ್ದೂರಿಯಾಗಿ ನಡೆಯಿತು. ಸಚಿವ ವಿ.ಸೋಮಣ್ಣ, ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಅನೇಕ ಗಣ್ಯರು, ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು.
ಪುನೀತ್ ರಾಜಕುಮಾರ್ ತಾವು ಮಾಡಿರುವ ಉತ್ತಮ ಕೆಲಸಗಳಿಂದ ಎಲ್ಲರ ಮನಸ್ಸಿನಲ್ಲೂ ಇದ್ದಾರೆ. ಅವರು ಮಾಡಿರುವ ಸತ್ಕಾರ್ಯಗಳು ಎಲ್ಲರಿಗೂ ಸ್ಪೂರ್ತಿಯಾಗಬೇಕು. ಅಂತಹ ಪುನೀತ್ ರಾಜಕುಮಾರ್ ಅವರ ಹೆಸರಿನಿಂದ ಈ ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ(ಅಪ್ಪು ಮಕ್ಕಳ ಚಲನಚಿತ್ರೋತ್ಸವ) ಆರಂಭವಾಗಿರುವುದು ನಿಜಕ್ಕೂ ಖುಷಿಯಾಗಿದೆ. ಇದಕ್ಕೆ ನಾನು ಚಲನಚಿತ್ರೋತ್ಸವದ ರುವಾರಿ ಉಲ್ಲಾಸ್ ಅವರನ್ನು ಅಭಿನಂದಿಸುತ್ತೇನೆ. ಸದಾ ಅವರ ಜೊತೆ ನಾನು ಇರುತ್ತೇನೆ ಎಂದರು ಸಚಿವ ವಿ.ಸೋಮಣ್ಣ.
ಅಶ್ವಿನಿ ಪುನೀತ್ ರಾಜಕುಮಾರ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಮುಂತಾದ ಗಣ್ಯರು ಬೆಂಗಳೂರು ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಶುಭ ಕೋರಿದರು.
ನಾನು `ನಿರ್ಮಲ`ಎಂಬ ಮಕ್ಕಳ ಸಿನಿಮಾ ಮಾಡಿದ್ದೆ. ಆ ಚಿತ್ರ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಬಿಟ್ಟು ಬೇರೆ ಯಾವ ಚಲನಚಿತ್ರೋತ್ಸವದಲ್ಲೂ ಪ್ರದರ್ಶನವಾಗಲು ಅವಕಾಶ ಸಿಗಲಿಲ್ಲ. ಆಗ ನಾನು ಯೋಚಿಸಿ, ಮಕ್ಕಳ ಚಿತ್ರಕ್ಕೆ ವೇದಿಕೆ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಈ ಚಲನಚಿತ್ರೋತ್ಸವ ಪ್ರಾರಂಭಿಸಿದ್ದೇನೆ. ಬೆಂಗಳೂರಿನಲ್ಲಿ ಈ ವರ್ಷದಿಂದ ಈ ಮಕ್ಕಳ ಚಲನಚಿತ್ರೋತ್ಸವ, ಅಪ್ಪು ಮಕ್ಕಳ ಚಲನಚಿತ್ರೋತ್ಸವ ಎಂಬ ಹೆಸರಿನಿಂದ ಆರಂಭವಾಗಿದೆ. ಮುಂದೆ ಸಹ ಅದೇ ಹೆಸರಿನಲ್ಲಿ ಮುಂದುವರೆಸಿಕೊಂಡು ಹೋಗಲಾಗುತ್ತದೆ ಎಂದು ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ನ ಉಲ್ಲಾಸ್ ತಿಳಿಸಿದರು.
ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ವತಿಯಿಂದ ಪ್ರತಿವರ್ಷ ನಾಟಕಗಳನ್ನು ಮಾಡಲಾಗುತ್ತಿದೆ. ಈ ಬಾರಿ ಮಕ್ಕಳ ಚಲನಚಿತ್ರೋತ್ಸವ ಮಾಡೋಣ ಎಂದು ಉಲ್ಲಾಸ್ ಹೇಳಿದರು. ಮಕ್ಕಳ ಚಿತ್ರಕ್ಕೆ ಹೆಚ್ಚು ವೇದಿಕೆಗಳು ಇಲ್ಲ. ಮಕ್ಕಳ ಚಿತ್ರಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಈ ಮಕ್ಕಳ ಚಲನಚಿತ್ರೋತ್ಸವ ಆರಂಭಿಸಲಾಗುತ್ತಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಹೇಳಿದರು.
ವಿವಿಧ ಭಾಷೆಗಳ 60ಕ್ಕೂ ಹೆಚ್ಚು ಚಿತ್ರಗಳ ಪೈಕಿ 12 ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಯ್ಕೆಯಾಗಿರುವ ಚಿತ್ರಗಳು
ಫೆಬ್ರವರಿ 22ರಿಂದ 26ವರೆಗೆ ಐದು ದಿನಗಳ ಕಾಲ`ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ` ದಲ್ಲಿ ಪ್ರದರ್ಶನವಾಗಲಿದೆ. ಆಯ್ದ ಚಿತ್ರಗಳಿಗೆ ಬೇರೆ ಬೇರೆ ವಿಭಾಗದಲ್ಲಿ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗುತ್ತದೆ.