ಮರ್ಡರ್ ಮಿಸ್ಟ್ರಿ ಕ್ರೈಂ ಜೊತೆಗೆ ಇನ್ ವೆಸ್ಟಿಗೇಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ 4 n 6. ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿಪ್ರೀತಿ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ, ಬಾಕಿ ಉಳಿದಿದ್ದ ವಿಶಿಷ್ಟ ಶೈಲಿಯ, ಆಂಗ್ಲ ಸಾಹಿತ್ಯವಿರುವ ಹಾಡನ್ನು ಚಿತ್ರೀಕರಿಸುವುದರೊಂದಿಗೆ ಕುಂಬಳಕಾಯಿ ಒಡೆಯಲಾಯಿತು,
ಲವ್ ಮಾಕ್ಟೇಲ್ ಹಾಗೂ ಲವ್ 360 ಚಿತ್ರಗಳ ಖ್ಯಾತಿಯ ರಚನಾ ಇಂದರ್ ಹಾಗೂ ನವೀನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ "4 n 6" ಚಿತ್ರಕ್ಕೆ ದರ್ಶನ್ ಶ್ರೀನಿವಾಸ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಕೊಲೆಯೊಂದರ ತನಿಖೆಯ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರ ಇದಾಗಿದ್ದು, ನಟಿ ರಚನಾ ಇಂದರ್ ಅವರು ಮೊದಲ ಬಾರಿಗೆ ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ನಟಿಸಿದ್ದಾರೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಮುಂದಿನ ತಿಂಗಳು ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರೊಮೋಷನ್ ಕಾರ್ಯಗಳಿಗೆ ಚಾಲನೆ ನೀಡಲಿದೆ.
ಇನ್ನು ಈ ಚಿತ್ರಕ್ಕೆ ನಿರ್ದೇಶಕರೇ ಎಡಿಟರ್ ಆಗಿದ್ದು ಮುತ್ತುರಾಜ್ ಸಾಥ್ ನೀಡಿದ್ದಾರೆ. ಚರಣ್ ತೇಜ್ ಅವರ ಛಾಯಾಗ್ರಹಣ, ಸತ್ಯಕಹಿ ಅವರ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಅವರ ಸಂಗೀತ ನಿರ್ದೇಶನವಿದೆ. ಭವಾನಿಪ್ರಕಾಶ್, ಮೇಘನಾ, ಸಂಜಯ್ ನಾಯಕ್, ಸೌರವ್, ಸತ್ಯ ಹಾಗೂ ರೇಣುಕಾ ಹಾಗೂ ಇತರರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಒಂದೆರಡು ತಿಂಗಳಲ್ಲಿ ಚಿತ್ರ ಥೇಟರಿಗೆ ಬರುವ ನಿರೀಕ್ಷೆಯಲ್ಲಿದೆ.