`ಕಬಂಧ` ಚಿತ್ರದ ಟ್ರೇಲರ್‍ ಬಿಡುಗಡೆ
Posted date: 11 Tue, Jun 2024 06:21:43 PM
ಕುಂಜರ ಫಿಲಂಸ್‍ ಬ್ಯಾನರ್‍ ಅಡಿ ಪ್ರಸಾದ್‍ ವಸಿಷ್ಠ ಮತ್ತು ಮಿತ್ರರು ಜೊತೆಯಾಗಿ ನಿರ್ಮಿಸಿರುವ ‘ಕಬಂಧ’ ಚಿತ್ರದ ಟ್ರೇಲರ್‍ ಬಿಡುಗಡೆ ಸಮಾರಂಭ ಭಾನುವಾರ ಸಂಜೆ ಕಲಾವಿದರ ಸಂಘದ ಡಾ. ಅಂಬರೀಷ್‍ ಆಡಿಟೋರಿಯಂನಲ್ಲಿ ನೆರವೇರಿತು. ಖ್ಯಾತ ನಿರ್ಮಾಪಕಿ ಶೈಲಜಾ ನಾಗ್‍ ಚಿತ್ರದ ಟ್ರೇಲರ್‍ ಬಿಡುಗಡೆ ಮಾಡಿದರು.
 
`ಕಬಂಧ` ಚಿತ್ರಕ್ಕೆ ಸತ್ಯನಾಥ್‍ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಸಾದ್ ವಸಿಷ್ಠ, ಕಿಶೋರ್‍, ಅವಿನಾಶ್‍, ಪ್ರಿಯಾಂಕಾ ಮಳಲಿ, ಯೋಗರಾಜ್‍ ಭಟ್‍, ಪ್ರಶಾಂತ್‍ ಸಿದ್ದಿ, ಛಾಯಾಶ್ರೀ, ಶ್ರುತಿ ನಾಯಕ್‍ ಮುಂತಾದವರು ನಟಿಸಿದ್ದಾರೆ. ರಘೋತ್ತಮ ಎನ್‍.ಎಸ್ ಮತ್ತು ಶ್ರೇಯಸ್‍ ಬಿ. ರಾವ್‍ ಅವರ ಸಂಗೀತ, ವಿಷ್ಣುಪ್ರಸಾದ್‍ ಛಾಯಾಗ್ರಹಣ, ಸತ್ಯಜಿತ್‍ ಸಿದ್ಧಕಟ್ಟಿ ಅವರ ಸಂಕಲನವಿದೆ.
ಟ್ರೇಲರ್‍ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯ ಅತಿಥಿ ಶೈಲಜಾ ನಾಗ್‍, ಟ್ರೇಲರ್ ಬಹಳ ಆಸಕ್ತಿಕರವಾಗಿದೆ. ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಇವತ್ತಿನ ಚಿತ್ರರಂಗದ ಪ್ರತಿಸ್ಥಿತಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇವತ್ತು ಸಿನಿಮಾ ಮಾಡುವುದು ದೊಡ್ಡ ಸವಾಲಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವುದು ನಿಜವಾದ ಸವಾಲು. ಅದರಲ್ಲಿ ಹೇಗೆ ಗೆಲ್ಲುವುದು ಎಂಬುದು ಬಹಳ ಮುಖ್ಯ ಮತ್ತು ಆ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಿ, ಜನರಿಗೆ ಚಿತ್ರವನ್ನು ತಲುಪಿಸುವ ಕೆಲಸ ಮಾಡಿ  ಎಂದು ಚಿತ್ರತಂಡದವರಿಗೆ ಕಿವಿಮಾತು ಹೇಳಿದರು.
 
ನಿರ್ದೇಶಕ ಸತ್ಯನಾಥ್‍ ಮಾತನಾಡಿ,  ಎರಡು ವರ್ಷಗಳ ಹಿಂದೆ ಶುರುವಾದ ಚಿತ್ರವಿದು. ಮೊದಲು ಕಿಶೋರ್‍ ಅವರನ್ನು ಭೇಟಿ ಮಾಡಿ ಅವರಿಗೆ ಕಥೆ ಹೇಳಿದೆವು. ಅವರು ಒಪ್ಪಿದ ಮೇಲೆ ಎಲ್ಲವನ್ನೂ ಸಿದ್ಧ ಮಾಡಿಕೊಂಡು ತುಮಕೂರು ಮತ್ತು ದೇವರಾಯನದುರ್ಗ ಸುತ್ತ 55 ದಿನಗಳ ಚಿತ್ರೀಕರಣ ಮಾಡಿದ್ದೇವೆ. ಶೇ. 80ರಷ್ಟು ರಾತ್ರಿ ಭಾಗದ ಚಿತ್ರೀಕರಣವಾಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯುತ್ತಾ ಬಂದಿವೆ. ಇನ್ನೆರಡು ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದರು.
 
ಇದೊಂದು ವ್ಯವಸಾಯದ ಸುತ್ತ ನಡೆಯುವ ಕಥೆ ಎನ್ನುವ ಅವರು, ಇವತ್ತಿನ ವೇಗದ ಜೀವನಶೈಲಿಯಲ್ಲಿ ಪ್ಲಾಸ್ಟಿಕ್‍ ಮತ್ತು ಟಾಕ್ಸಿಕ್‍ ಅಂಶಗಳು ನಮ್ಮ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಆದರೆ, ನಾವು ಆ ವಿಷಯವಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ವಿಷಯವಾಗಿ ಕಥೆ ಮಾಡಿಕೊಂಡಿದ್ದೇವೆ. ಕಬಂಧ, ರಾಮಾಯಣದಲ್ಲಿ ಬರುವ ಒಬ್ಬ ರಾಕ್ಷಸನ ಹೆಸರು. ಅವನ ಬಾಹುಗಳಿಂದ ಬಿಡಿಸಿಕೊಳ್ಳುವುದು ಕಷ್ಟ. ಅದಕ್ಕೇ ಕಬಂಧ ಬಾಹು ಎನ್ನಲಾಗುತ್ತದೆ. ಅದೇ ರೀತಿ ಈ ವಿಷಕಾರಿ ವಸ್ತುಗಳೆಂಬ ಕಬಂಧ ಬಾಹುಗಳಿಗೆ ಹೇಗೆ ಸಿಕ್ಕಿಕೊಂಡಿದ್ದೇವೆ ಎಂದು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದು. ಇದನ್ನು ಸೈಕಲಾಜಿಕಲ್‍ ಹಾರರ್‍ ಚಿತ್ರ ಎನ್ನಬಹುದು’ ಎಂದರು.
 
ಚಿತ್ರದ ನಾಯಕ ಪ್ರಸಾದ್‍ ವಸಿಷ್ಠ ಮಾತನಾಡಿ,  ಇಂತಹ ಕಥೆಗಳನ್ನು ಸಿನಿಮಾಗೆ ಅಳವಡಿಸುವುದು ಕಷ್ಟ. ಈ ಚಿತ್ರದಲ್ಲಿ ನಾನು ನಚಿಕೇತ ಎಂಬ ಜಮೀನ್ದಾರಿ ಕುಟುಂಬದ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ಅವನ ಸುತ್ತಮುತ್ತ ನಡೆಯುವ ಕಥೆ ಇದು ಎಂದರು.
ಸಮಾರಂಭದಲ್ಲಿ ನಟ ಪ್ರಶಾಂತ್ ಸಿದ್ದಿ, ಪ್ರಿಯಾಂಕಾ ಮಳಲಿ, ಛಾಯಾಗ್ರಾಹಕ ವಿಷ್ಣುಪ್ರಸಾದ್‍, ಸಂಕಲನಕಾರ ಸತ್ಯಜಿತ್‍ ಸಿದ್ಧಕಟ್ಟಿ ಮುಂತಾದವರು ಹಾಜರಿದ್ದು ಚಿತ್ರ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed