`ಹಾಫ್` ಚಿತ್ರದ ಅದ್ಧೂರಿ ಫೋಟೋಶೂಟ್!
Posted date: 23 Mon, Nov 2020 09:52:46 PM

2018ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದ ಚಿತ್ರ ಅಟ್ಟಯ್ಯ v/s ಹಂದಿ ಕಾಯೋಳು. ಈ ಚಿತ್ರವನ್ನು ನಿರ್ದೇಶಿಸಿ, ನಟಿಸಿದ್ದವರು ಲೋಕೇಂದ್ರ ಸೂರ್ಯ. ಈ ಚಿತ್ರ ವಿಮರ್ಶಕರ ಮನಸ್ಸು ಗೆದ್ದು, ಫಿಲಂ ಫೆಸ್ಟಿವಲ್ ನಲ್ಲಿ ಆಯ್ಕೆಯಾಗಿದ್ದರ ಜೊತೆಗೆ 2019ರ ಮಾಧ್ಯಮಗಳ ಭರವಸೆಯ ನಿರ್ದೇಶಕರ ಪಟ್ಟಿಯಲ್ಲಿ ಲೋಕೇಂದ್ರ ಸ್ಥಾನ ಪಡೆದಿದ್ದರು. ಅಟ್ಟಯ್ಯ ನಂತರ ಚೆಡ್ಡಿ ದೋಸ್ತ್ ಚಿತ್ರದಲ್ಲೂ ಪಾತ್ರ ನಿರ್ವಹಿಸಿದ್ದ ಲೋಕೇಂದ್ರ ಈಗ ತಮ್ಮ ನಿರ್ದೇಶನದ ಎರಡನೇ ಚಿತ್ರವನ್ನು ಆರಂಭಿಸುತ್ತಿದ್ದಾರೆ. ಈ ಚಿತ್ರಕ್ಕೆ ʻಹಾಫ್ʼ ಎಂಬ ಶೀರ್ಷಿಕೆ ಇಡಲಾಗಿದ್ದು, ಚಿತ್ರೀಕರಣದ ಪೂರ್ವಭಾವಿಯಾಗಿ ಅದ್ಧೂರಿ ಫೋಟೋ ಶೂಟ್ ಕೂಡಾ ಮಾಡಿದ್ದಾರೆ.
ಆರ್.ಡಿ. ಎಂಟರ್ ಪ್ರೈಸಸ್, ರಾಜು ಕಲ್ಕುಣಿ ಅವರ ಬ್ಯಾನರ್ ಅಡಿಯಲ್ಲಿ ಡಾ. ಆರ್. ಪವಿತ್ರ ರೆಡ್ಡಿ ನಿರ್ಮಿಸುತ್ತಿರುವ ʻಹಾಫ್ʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ನಾಯಕನಟನಾಗಿಯೂ ಅಭಿನಯಿಸುತ್ತಿದ್ದಾರೆ. ಮಲ್ಲಿಕಾರ್ಜುನ್ ಬಿ ಛಾಯಾಗ್ರಹಣ, ಯುಡಿವಿ ವೆಂಕಿ ಸಂಕಲನ, ರಾಕಿ ಸೋನು ಸಂಗೀತ, ಹಿನ್ನೆಲೆ ಸಂಗೀತ,  ಡಾ. ಥ್ರಿಲ್ಲರ್ ಮಂಜು ಸಾಹಸ, ಋತು ಚೈತ್ರ ಅವರ ವಸ್ತ್ರಾಲಂಕಾರ ಹಾಫ್ ಚಿತ್ರಕ್ಕಿದೆ. ಆಸಿಯಾ, ಅಥಿರಾ, ರಾಜು ಕಲ್ಕುಣಿ, ಡಾ. ಆರ್. ಪವಿತ್ರಾ ರೆಡ್ಡಿ, ರಕ್ಷಾ, ರೆಡ್ ಅಂಡ್ ವೈಟ್ ಸವೆನ್ ರಾಜ್, ಸಿವಿಜಿ ಚಂದ್ರು, ರೋಹಿಣಿ ಕೆ. ರಾಜ್ ಮುಂತಾದವರ ತಾರಾಗಣವಿದೆ. ಕೃಷ್ಣ ಸಹ ನಿರ್ದೇಶನ, ಶ್ರೀವತ್ಸ, ಭರತ್, ಧೃವಿನ್, ಶಂಕರ್, ನವೀನ್ ಚಲ, ಮನೋಜ್ ಆರ್, ಪುನೀತ್ ಎಲ್, ವಿಜಯ್ ಚಂದ್ರ ಸಹಾಯಕ ನಿರ್ದೇಶನ, ಪ್ರಚಾರಕಲೆ : ಮಾಬಸಕಿ (ಕಿರಣ್), ಎಂ.ಜಿ. ಕಲ್ಲೇಶ್ ಪತ್ರಿಕಾಸಂಪರ್ಕವಿದೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಇತರ ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ನೆರವೇರಲಿದೆ.
ʻಈ ವರೆಗೆ ಭಾರತೀಯ ಚಿತ್ರರಂಗದಲ್ಲೇ ಯಾರೂ ಮುಟ್ಟಿರದ ಕಥಾವಸ್ತು ನಮ್ಮ ʻಹಾಫ್ʼ ಚಿತ್ರದ್ದು. ಶೀರ್ಷಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸೂರ್ಯ ಚಂದ್ರ ಮೆಲೋಡೀಸ್ ತಂಡ ಕಟ್ಟಿಕೊಂಡು ಆರ್ಕೆಸ್ಟ್ರಾಗಳನ್ನು ನಡೆಸುತ್ತಿದ್ದೆ. ನನ್ನ ಮೊದಲ ಸಿನಿಮಾ ಅಂತಾರಾಷ್ಟ್ರೀಯ ಚಿತ್ತೋತ್ಸವಗಳಲ್ಲಿ ಆಯ್ಕೆಯಾಗಿ ಹೆಸರು ಮಾಡಿತು. ಈಗ ʻಹಾಫ್ʼ ಸಿನಿಮಾವನ್ನು ಆರಂಭಿಸಿದ್ದೇನೆ. ಹಾಫ್ ಚಿತ್ರದ ಕಥಾವಸ್ತು ಏನು? ಯಾಕಾಗಿ ಈ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ? ಎಂಬಿತ್ಯಾದಿ ವಿವರಗಳನ್ನು ಸದ್ಯದಲ್ಲೇ ನೀಡಲಿದ್ದೇನೆ. ಸದ್ಯ ಮೂವರು ನಾಯಕಿಯರೊಂದಿಗೆ ಫೋಟೋಶೂಟ್ ನೆರವೇರಿದೆ. ನನ್ನ ಮೊದಲ ಸಿನಿಮಾದ ಲಿಮಿಟೆಡ್ ಬಜೆಟ್ ಹೊಂದಿತ್ತು. ಈ ಬಾರಿ ದೊಡ್ಡ ಬಜೆಟ್ಟಿನಲ್ಲಿ, ಪಕ್ಕಾ ಕಮರ್ಷಿಯಲ್ ಫಾರ್ಮುಲಾಗಳನ್ನು ಅಳವಡಿಸಿಕೊಂಡು ಸಿನಿಮಾ ರೂಪಿಸುತ್ತಿದ್ದೇನೆ. ʼ ಎನ್ನುವುದು ನಿರ್ದೇಶಕ ಮತ್ತು ನಟ ಲೋಕೇಂದ್ರ ಸೂರ್ಯ ಅವರ ವಿವರಣೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಹಾಫ್` ಚಿತ್ರದ ಅದ್ಧೂರಿ ಫೋಟೋಶೂಟ್! - Chitratara.com
Copyright 2009 chitratara.com Reproduction is forbidden unless authorized. All rights reserved.