`ಪಠಾಣ್` ಚಿತ್ರದ ದೊಡ್ಡ ಯಶಸ್ಸಿನ ನಂತರ ಶಾರುಖ್ ಖಾನ್, `ಜವಾನ್` ಎಂಬ ಇನ್ನೊಂದು ಆಕ್ಷನ್ ಪ್ಯಾಕ್ಡ್ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ `ಜವಾನ್` ಚಿತ್ರವನ್ನು ತಮಿಳಿನಲ್ಲಿ ಮಾಸ್ ಚಿತ್ರಗಳಿಗೆ ಹೆಸರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಜನ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟು, ಬಹಳ ಕುತೂಹಲದಿಂದ ಕಾಯುತ್ತಿರುವ ಈ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ, ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯ ಪೋಸ್ಟರ್ ಬಿಡುಗಡೆಯಾಗಿದೆ.
`ಜವಾನ್` ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ಶಾರುಖ್ ಖಾನ್ ತಮ್ಮ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಆಸ್ಕ್ ಎಸ್ಆರ್ಕೆ ಎಂಬ ಸಂವಾದ ನಡೆಸಿದ್ದಾರೆ. ಈ ಸಂವಾದದಲ್ಲಿ ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
`ಜವಾನ್` ಚಿತ್ರದ ಬಿಡುಗಡೆ ತಡವಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಒಂದೊಳ್ಳೆಯ ಚಿತ್ರ ಕೊಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಪ್ರತಿಯೊಬ್ಬರೂ ಬ್ರೇಕ್ ತೆಗೆದುಕೊಳ್ಳದೆ ಕಷ್ಟಪಟ್ಟು ಮತ್ತು ತಮ್ಮ ಶಕ್ತಿಮೀರಿ ದುಡಿದಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ಚಿತ್ರ ಬಹಳ ಚೆನ್ನಾಗಿ ಬಂದಿದೆ. ಚಿತ್ರ ಸ್ವಲ್ಪ ನಿಧಾನವಾದರೂ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ ಶಾರುಖ್.
ತಮ್ಮ ಮಟ್ಟಿಗೆ ಇದೊಂದು ಹೊಸ ಜಾನರ್ನ ಚಿತ್ರ ಎಂದಿರುವ ಶಾರುಖ್, ಈ ಚಿತ್ರ ನಾನು ಒಪ್ಪಿಕೊಳ್ಳಲು ಕಾರಣವೇನು ಎಂದು ಬಹಳಷ್ಟು ಜನ ಕೇಳಿದ್ದಾರೆ. ಪ್ರಮುಖವಾಗಿ, ಈ ಜಾನರ್ನ ಚಿತ್ರ ನನಗೆ ಬಹಳ ಹೊಸದು. ಇನ್ನು, ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಅಟ್ಲಿ ಮತ್ತು ಅವರ ತಂಡ ಸಹ ಪ್ರಮುಖ ಕಾರಣ. ಕ್ಲಾಸ್ ಮತ್ತು ಮಾಸ್ ಅಂಶಗಳನ್ನು ಬೆರೆಸಿ ಕಥೆ ಹೇಳುವ ಅಟ್ಲಿ ಅವರ ಶೈಲಿ ನನಗೆ ಬಹಳ ಇಷ್ಟವಾಯ್ತು. ಈ ಎಲ್ಲ ಕಾರಣಗಳಿಂದ `ಜವಾನ್` ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ ಎಂದು ಉತ್ತರಿಸಿದ್ದಾರೆ ಶಾರುಖ್.
ಇತ್ತೀಚೆಗೆ ಬಿಡುಗಡೆಯಾದ ಹೊಸ ಪೋಸ್ಟರ್ನಲ್ಲಿ ಶಾರುಖ್ ಮುಖ ಕಾಣುವುದೇ ಇಲ್ಲ. ಪೋಸ್ಟರ್ನಿಂದ ಶಾರುಖ್ ಅವರನ್ನು ಚಿತ್ರತಂಡ ದೂರ ಇಟ್ಟಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಚಿತ್ರಮಂದಿರಕ್ಕೆ ಜನರನ್ನು ಸೆಳೆಯಲು ನನ್ನ ಮುಖಕ್ಕಿಂತ ಹೆಸರೇ ಸಾಕು ಎಂದು ನಿರ್ಮಾಪಕರಿಗೆ ಅನಿಸಿರಬಹುದು. ಹಾಗಾಗಿ, ಪೋಸ್ಟರ್ನಲ್ಲಿ ನನ್ನ ಮುಖ ತೋರಿಸಿಲ್ಲ ಎಂದಿದ್ದಾರೆ.
ತಮ್ಮ ಸಹನಟರಾದ ನಯನತಾರಾ ಮತ್ತು ವಿಜಯ್ ಸೇತುಪತಿ ಅವರನ್ನು ಹಾಡಿಹೊಗಳಿರುವ ಕಿಂಗ್ ಖಾನ್, ನಯನತಾರಾ ಒಬ್ಬ ಅದ್ಭುತ ನಟಿ. ಅವರೊಂದಿಗೆ ಕೆಲಸ ಮಾಡಿದ್ದು ಬಹಳ ಖುಷಿ ನೀಡಿತು. ಇನ್ನು, ವಿಜಯ್ ಸೇತುಪತಿ ಬಹಳ ಒಳ್ಳೆಯ ಮನುಷ್ಯ. ಒಬ್ಬ ಪ್ರತಿಭಾವಂತ ನಟ. ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ’ ಎಂದು ಹೇಳಿದ್ದಾರೆ.
ತಮಿಳು ನಿರ್ದೇಶಕರು ಮತ್ತು ತಮಿಳು ತಂತ್ರಜ್ನರ ಜೊತೆಗೆ ಕೆಲಸ ಮಾಡಿದ್ದರಿಂದ ತಮಿಳು ಕಲಿಯುವ ಅವಕಾಶವೇನಾದರೂ ಸಿಕ್ಕಿತಾ ಎಂದರೆ, ಅಟ್ಲಿ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್, ಹಾಡಿನ ಕೆಲವು ತಮಿಳು ಸಾಲುಗಳಿಗೆ ಲಿಪ್ ಸಿಂಕ್ ಮಾಡಿಸಿದರು. ಅದು ಸರಿಯಾಗಿ ಬಂದಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
`ಜವಾನ್` ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಶಾರುಖ್ ಪತ್ನಿ ಗೌರಿ ಖಾನ್ ನಿರ್ಮಿಸಿದ್ದಾರೆ.