ಗುಡ್ವೀಲ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಮಂಜುನಾಥ್ಗೌಡ ಬಿ.ಆರ್.(ಶಬರಿ ಮಂಜು) ಅವರು ನಿರ್ಮಿಸಿರುವ ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್ ಚಿತ್ ಲಾಂಗ್ ಡ್ರೈವ್ ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈಗಿನ ಕಾಲದ ಬಹುತೇಕ ಯುವಕ, ಯುವತಿಯರಲ್ಲಿ ಲಾಂಗ್ ಡ್ರೈವ್ ಹೋಗೋ ಕ್ರೇಜ್ ಇದ್ದೇ ಇರುತ್ತದೆ. ಇಂಥದೇ ಕಂಟೆಂಟ್ ಇಟ್ಟುಕೊಂಡು ಯುವನಿರ್ದೇಶಕ ಶ್ರೀರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಅರ್ಜುನ್ ಯೋಗಿ, ಸುಪ್ರೀತಾ ಸತ್ಯನಾರಾಯಣ್, ತೇಜಸ್ವಿನಿ ಪ್ರಕಾಶ್ ಹಾಗೂ ನಿರ್ಮಾಪಕ ಶಬರಿ ಮಂಜು ಈ ನಾಲ್ಕು ಪ್ರಮುಖ ಪಾತ್ರಗಳ ಸುತ್ತ ೨೪ ಗಂಟೆಗಳಲ್ಲಿ ನಡೆಯುವ ಕಥೆ ಇದಾಗಿದ್ದು, ಯಾವುದೇ ಪೂರ್ವತಯಾರಿ ಇಲ್ಲದೆ ಲಾಂಗ್ಡ್ರೈವ್ ಹೋದಾಗ ಏನೆಲ್ಲಾ ತೊಂದರೆ, ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ನಿರ್ದೇಶಕ ಶ್ರೀರಾಜ್ ಹೇಳಹೊರಟಿದ್ದಾರೆ.
ಬೆಂಗಳೂರು, ತಾವರೆಕೆರೆ, ಮೈಸೂರು ಹಾಗೂ ರಾಮನಗರದ ಸುತ್ತಮುತ್ತ ೩೫ರಿಂದ ೪೦ ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಚಿತ್ರಕ್ಕೆ ಯು/ಎ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ೨ ಹಾಡನ್ನು ಮಾತ್ರವೇ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ವಿಕಾಸ್ ವಸಿಷ್ಠ ಅವರ ಸಂಗೀತ ಸಂಯೋಜನೆ, ರಾಮಿ ಶೆಟ್ಟಿ ಪವನ್ ಅವರ ಸಂಕಲನ, ಕಿಟ್ಟಿ ಕೌಶಿಕ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ, ಹಾಡುಗಳಿಗೆ ವಿಕಾಸ ವಸಿಷ್ಠ, ಶರತ್ ಆಸ್ಕರ್, ಜೀವನ್ ಅವರ ಸಾಹಿತ್ಯವಿದ್ದು, ರಾಜೇಶ್ ಕೃಷ್ಣನ್, ಮಾನಸ ಹೊಳ್ಳ, ಸ್ಪರ್ಶ ಆರ್.ಕೆ, ದನಿಯಾಗಿದ್ದಾರೆ. ಚಿತ್ರದ ಉಳಿದ ತಾರಾಗಣದಲ್ಲಿ ಬಲ ರಾಜ್ವಾಡಿ, ಮಹೇಶ್ ಗುರು, ಮೋಹನ್ ಅನ್ನಳ್ಳಿ ಮುಂತಾದವರಿದ್ದಾರೆ.