ಅಕ್ಷಿ ಚಿತ್ರ ಪ್ರಶಸ್ತಿಗೆ ವರನಟ ಡಾ. ರಾಜ್‌ ಕುಮಾರ್‌ ಅವರೇ ಕಾರಣ
Posted date: 28 Sun, Mar 2021 05:42:01 PM
ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌ ಸಖತ್ ಖುಷಿಯಲ್ಲಿದ್ದಾರೆ. ಇದೇ ಮೊದಲು ಅವರು ನಿರ್ಮಾಣ ಮಾಡಿದ್ದ `ಅಕ್ಷಿ` ಚಿತ್ರ ಪ್ರಾದೇಶಿಕ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿದೆ.  ಅವರಂತೆಯೇ ಇಡೀ ತಂಡ ಕೂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಅ ಖುಷಿ ಹಂಚಿಕೊಳ್ಳುವುದಕ್ಕಾಗಿಯೇ ಚಿತ್ರ ತಂಡವು ನಿರ್ದೇಶಕ ಮನೋಜ್‌ ಕುಮಾರ್‌ ನೇತೃತ್ವದಲ್ಲಿ ಬುಧುವಾರ ಮಾಧ್ಯಮದ ಮುಂದೆ ಹಾಜಾರಾಗಿತ್ತು. ತಂಡಕ್ಕೆ ಅಂದು ಲವ್ಲೀ ಸ್ಟಾರ್‌ ಪ್ರೇಮ್‌ ಸಾಥ್‌ ಕೊಟ್ಟರು. 
ನಿರೂಪಕ ಕಮ್‌ ನಿರ್ಮಾಪಕ ಕಲಾದೇಗುಲ ಶ್ರೀನಿವಾಸ್‌ ಮೊದಲು ಮಾತು ಶುರು ಮಾಡಿದರು. ಆರಂಭದಲ್ಲಿ ನಮಗೆ ಒಂದು ಸದಭಿರುಚಿಯ ಚಿತ್ರ ಮಾಡ್ಬೇಕು ಅನ್ನೊದಷ್ಟೇ ಇತ್ತು. ಅದಕ್ಕೊಂದು ಒಳ್ಳೆಯ ಕಥೆ ಕೂಡ ಬೇಕು ಅಂತ ಯೋಚಿಸುತ್ತಿದ್ದಾಗ ಗೆಳೆಯರು ಆದ ನಿರ್ದೇಶಕ ಮನೋಜ್‌ ಕುಮಾರ್‌ ತಾವೇ ಬರೆದಿದ್ದ ಒಂದು ಕಥೆ ತಂದ್ರು. ಈ ಕಥೆ ಸಿನಿಮಾ ಮಾಡಿದ್ರೆ ಹೇಗೆ ಅಂತ ಹೇಳಿದ್ರು. ನನ್ನ ನಿರ್ಮಾಣದ ಮೊದಲ ಸಾಹಸಕ್ಕೆ ಇದೇ ಕಥೆ ಸೂಕ್ತ ಎನಿಸಿತು. ಆಗ ಶುರುವಾಗಿದ್ದು `ಅಕ್ಷಿ` ಚಿತ್ರ. ಇವತ್ತು ಅದೇ ಕಥೆಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ಇದಕ್ಕೆ ನಿಜಕ್ಕೂ ಕಾರಣರು ನಾವಲ್ಲ. ಆ ಕಥೆ. ಆ ಕಥೆಯ ಪ್ರೇರಕರು ವರನಟ ಡಾ. ರಾಜ್‌ ಕುಮಾರ್.‌ ಅವರೇ ಈ ಪ್ರಶಸ್ತಿಗೆ ಕಾರಣ ಅಂದ್ರು ` ನಿರ್ಮಾಪಕ ಶ್ರೀನಿವಾಸ್.‌
ಅದು ಸರಿ, ರಾಜ್‌ಕುಮಾರ್‌ ಇಲ್ಲಿ ಹೇಗೆ ಪ್ರಶಸ್ತಿಗೆ ಕಾರಣರಾದ್ರು   ಸುದ್ದಿಗೋಷ್ಟಿಯಲ್ಲಿ ಅದಕ್ಕೆ ಕಾರಣ ಕೊಟ್ಟರು ನಿರ್ದೇಶಕ ಮನೋಜ್‌ ಕುಮಾರ್.`` ಈ ಕಥೆ ಹುಟ್ಟಿದ್ದಕ್ಕೆ  ಕಾರಣವೇ ರಾಜ್‌ ಕುಮಾರ್‌ ಅವರು. ನಂದು ಊರು ಹಾಸನ ಜಿಲ್ಲೆ ಬೇಲೂರು.  ವರನಟ ರಾಜ್‌ ಕುಮಾರ್‌ ಅವರು ನಿಧನರಾದ ದಿನಗಳಲ್ಲಿ ನಾನಾಗ ಊರಲ್ಲಿದ್ದೆ. ಅವರು ಇನ್ನಿಲ್ಲ ಅಂತ ಜನ್ರು ದುಃಖ ಪಡುತ್ತಿದ್ದ ಹೊತ್ತಲೇ ಅವರು, ಕಣ್ಣನ್ನು ದಾನ ಮಾಡಿದ್ರಂತೆ ಅಂತ ಅಚ್ಚರಿ ವ್ಯಕ್ತಪಡಿಸುತ್ತಿದ್ರು.  ಆ ಸಂಬಂಧ ಸಾಕಷ್ಟು ಸುದ್ದಿಗಳು ಬಂದಿದ್ದವು. ಅದು ನಂಗೆ ಒಂಥರ ಕಾಡ ತೊಡಗಿತು. ನೇತ್ರ ದಾನ ಅನ್ನೋದು ಹೇಗೆ ಇನ್ನೊಬ್ಬರ ಬದುಕಲ್ಲಿ ಬೆಳಕು ನೀಡುತ್ತದೆ ಅಂತ ಕುತೂಹಲ ಮೂಡಿಸಿತು. ಅದನ್ನೇ ಇಟ್ಟುಕೊಂಡು ನಾನು ಈ ಕಥೆ ಬರೆದೆ.  ಮುಂದೆ ಶ್ರೀನಿವಾಸ್‌ ಅವರು ಒಂದೊಳ್ಳೆಯ ಸಿನಿಮಾ ಮಾಡೋಣ ಅಂತ ಹೊರಟಾಗ ಅವರಿಗೆ ಈ ಕಥೆ ಹೇಳಿದೆ. ಅವರಿಗೂ ಇಷ್ಟ ಆಯ್ತು` ಅಂತ ಪ್ರಶಸ್ತಿಗೆ ಅಣ್ಣಾವ್ರು ಕಾರಣವಾಗಿದ್ದರ ಹಿಂದಿನ ಸಂಗತಿ ರಿವೀಲ್‌ ಮಾಡಿದರು ಮನೋಜ್.‌
ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಕಿರಿತೆರೆಯ ಜನಪ್ರಿಯ ನಟಿ ಇಳಾ ವಿಟ್ಲಾ, ಬಾಲ ನಟರಾದ ಮಿಥುನ್‌, ನಾಗರಾಜ್‌ , ಕಸ್ತೂರಿ ಸೇರಿದಂತೆ ಮತ್ತಿತರರು ಚಿತ್ರದಲ್ಲಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಹಾಜರಿದ್ದ ಗೋವಿಂದೇಗೌಡ, ಇಳಾ ವಿಟ್ಲಾ  ತಮ್ಮ ಪಾತ್ರಗಳ ಜತೆಗೆ ಚಿತ್ರೀಕರಣ ಅನುಭವ ಹಂಚಿಕೊಂಡರು. ನಾವು ಪಾತ್ರದಲ್ಲಿ ಅಭಿನಯಿಸಿದೆವು ಎನ್ನುವುದಕ್ಕಿಂತ ನಿರ್ದೇಶಕರು ಪಾತ್ರಕ್ಕೆ ನಮ್ಮಿಂದ ಅಭಿನಯ ತೆಗೆಸಿದರು ಅಂತ ಇಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೆಯೇ ರಾಷ್ಟ್ರ ಪ್ರಶಸ್ತಿ ಬಂದಿದ್ದು ತುಂಬಾನೆ ಖುಷಿ ಕೊಟ್ಟಿದೆ.ಹಾಗೆಯೇ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ ಅಂತಂದ್ರು.  ಚಿತ್ರಕ್ಕೆ ಮುಕಲ್‌ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಶ್ರೀನಿವಾಸ್‌ ಜತೆಗೆ ರವಿ ಹಾಗೂ ರಮೇಶ್‌  ಬಂಡವಾಳ ಹಾಕಿದ್ದಾರೆ. ಅವರಿಗೂ ಈಗ ರಾಷ್ಟ್ರ ಪ್ರಶಸ್ತಿ ಬಂದಿರೋದು ಹೊಸ ಉತ್ಸಾಹ ತಂದಿದೆ. ಚಿತ್ರವನ್ನು ಇಷ್ಟರಲ್ಲಿಯೇ ಚಿತ್ರಮಂದಿರಕ್ಕೆ ತರಲು ಚಿತ್ರ ತಂಡ ಮುಂದಾಗಿದೆ. ಶ್ರೀನಿವಾಸ್‌ ಜತೆಗಿನ ಸ್ನೇಹದ ಕಾರಣಕ್ಕೆ ನಟ ನೆನಪಿರಲಿ ಪ್ರೇಮ್‌ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದು , ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed