ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ನೀಡಿದ ಸುಮಲತಾ ಅಂಬರೀಶ್
Posted date: 31 Tue, Mar 2020 07:25:18 PM

ಕೊರೊನಾ ಮಹಾಮಾರಿ ತಡೆಗಟ್ಟುವ ನಿಟ್ಟಿನಲ್ಲಿ ನಟಿ, ಸಂಸದೆ ಸುಮಲತಾ ಅಂಬರೀಶ್, ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ನೀಡಿದ್ದಾರೆ. ಮಂಡ್ಯ ಜಿಲ್ಲಾ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಹಣವನ್ನು ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದಾರೆ.

"ದೇಶವನ್ನೇ ಕೊರೋನಾ ಆತಂಕಕ್ಕೀಡು ಮಾಡಿದೆ. ಸಾವು ನೋವುಗಳು ಸಂಭವಿಸುತ್ತಿವೆ. ಹಾಗಾಗಿ ಈ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈ ಹೊತ್ತಿನಲ್ಲಿ ಜನರ ಸಂಕಷ್ಟಗಳಿಗೆ ಮಿಡಿಯಬೇಕಾಗಿದ್ದು ನಮ್ಮ ಜವಾಬ್ದಾರಿ ಕೂಡ. ಒಬ್ಬ ಸಂಸದೆಯಾಗಿ ಸರಕಾರದ ಜತೆ ಕೈ ಜೋಡಿಸಿದ್ದೇನೆ. ಮಂಡ್ಯ ಜಿಲ್ಲಾ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂಪಾಯಿಯನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದಿದ್ದಾರೆ ಸುಮಲತಾ ಅಂಬರೀಶ್.

ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಜತೆ ಜತೆಗೆ ವಾರದ ಹಿಂದೆಯಷ್ಟೇ ವೈಯಕ್ತಿಕವಾಗಿ ಸುಮಲತಾ ಅವರು ತಮ್ಮ ಎರಡು ತಿಂಗಳ ವೇತನ ಎರಡು ಲಕ್ಷ ರೂಪಾಯಿಯನ್ನೂ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಮತ್ತು ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಕೂಡ ಎರಡು ತಿಂಗಳ ಮಾಸಿಕ ವೇತನ ಎರಡು ಲಕ್ಷ ರೂಪಾಯಿ ನೀಡಿದ್ದರು. ಅಲ್ಲದೇ, ಮಂಡ್ಯ ನಗರದಲ್ಲಿ ಮಂಡ್ಯದ ಮಿಮ್ಸ್ ಬೋಧಕ ಆಸ್ಪತ್ರೆಗೆ ಮೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳ ಖರೀದಿಗಾಗಿ ಸಂಸದರ ನಿಧಿಯಿಂದ ಈಗಾಗಲೇ ಐವತ್ತು ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲು ಸೂಚಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿಯ ನಿರಾಶ್ರಿತರು, ಕೂಲಿ ಕಾರ್ಮಿಕರು ಮತ್ತು ಆಹಾರದ ಅಗತ್ಯ ಇರುವವರಿಗಾಗಿ ನಿತ್ಯವೂ ಅಗತ್ಯ ವಸ್ತುಗಳನ್ನು ನೀಡುವಲ್ಲೂ ಸುಮಲತಾ ಮುಂದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ನೀಡಿದ ಸುಮಲತಾ ಅಂಬರೀಶ್ - Chitratara.com
Copyright 2009 chitratara.com Reproduction is forbidden unless authorized. All rights reserved.