ಸಿಪಾಯಿ ಮತ್ತು ಗರುಡ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಾಯಕ ನಟ ಸಿದ್ದಾರ್ಥ್ ಮಹೇಶ್ ಅವರೀಗ ನಿರ್ದೇಶನದತ್ತ ಗಮನ ಹರಿಸಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನವೇ ಸಿದ್ದಾರ್ಥ್ ಮಹೇಶ್ ಅವರು ತಮ್ಮ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿರುವ ಸಿದ್ದಾರ್ಥ್ ಮಹೇಶ್ ಅವರು ಚಿತ್ರದ ನಿರ್ದೇಶಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಬಹಳ ವರ್ಷದಿಂದಲೂ ಸಿದ್ದಾರ್ಥ್ ಮಹೇಶ್ ಅವರಿಗೆ ಡೈರೆಕ್ಟರ್ ಕ್ಯಾಪ್ ತೊಡಬೇಕೆಂಬ ಕನಸಿತ್ತು. ಆದರೆ ಅದಕ್ಕೆ ಕಾಲ ಕೂಡಿಬಂದಿರಲಿಲ್ಲ. ಈಗವರು ತಮ್ಮದೇ ಬ್ಯಾನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಹಿಂದೆ ಸಿಪಾಯಿ ಸಿನಿಮಾದ ಕಥೆಯಲ್ಲಿ ಸಿದ್ಧಾರ್ಥ್ ಕೂಡ ಕೆಲಸ ಮಾಡಿದ್ದರು. ಅಲ್ಲದೆ ಗರುಡ ಸಿನಿಮಾಗೆ ಕಥೆಯನ್ನೂ ಬರೆದಿದ್ದರು. ಈಗ ಅವರ ನಿರ್ದೇಶನದ ಚಿತ್ರಕ್ಕೂ ಕಥೆ, ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಅತಶ್ರೀ ಮೀಡಿಯಾ ಕ್ರಿಯೇಶನ್ಸ್ ಮತ್ತು ಆರೇಂಜ್ ಪಿಕ್ಸೆಲ್ ಬ್ಯಾನರ್ ಅಡಿ ಸಿದ್ದಾರ್ಥ್ ಮಹೇಶ್ ಅವರ ಸ್ನೇಹಿತ ಎಸ್.ಚಂದನ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.ಈಗಾಗಲೇ ತಮಿಳು ಸಿನಿಮಾ ನಿರ್ಮಿಸಿದ್ದ ಚಂದನ್ ಗೆ ಕನ್ನಡದಲ್ಲಿದು ಮೊದಲಚಿತ್ರ. ಕಥೆ, ಚಿತ್ರಕಥೆ ಹೆಣೆಯುವ ಕೆಲಸ ಕೊನೇ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತಷ್ಟು ಅಪ್‌ಡೇಟ್ ನೀಡಲು ಚಿತ್ರತಂಡ ಸಜ್ಜಾಗಿದೆ. ಅಂದಹಾಗೆ ಸಿದ್ದಾರ್ಥ್ ಮಹೇಶ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರವು ಪ್ರೇಮಕಥೆಯ ಜೊತೆಗೆ ಆಕ್ಷನ್ ಕಥಾಹಂದರವನ್ನು ಒಳಗೊಂಡಿದೆ. ಮಲ್ಟಿ ಮೀಡಿಯಾ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ಸಿದ್ದಾರ್ಥ ಅವರ ನಿರ್ದೇಶನಕ್ಕೆ ಅದು ಸಹಾಯಕಾರಿಯಾಗಿದೆ. ಬಹಳ ವರ್ಷಗಳಿಂದ ನಿರ್ದೇಶಕನಾಗಬೇಕು ಎಂಬ ಸಿದ್ದಾರ್ಥ್ ಮಹೇಶ್ ಕನಸು ಈಗ ಸಾಕಾರವಾಗುತ್ತಿದೆ.