ಅಪಾರ ಜನಸಾಗರದ ನಡುವೆ ಶಿಡ್ಲಘಟ್ಟದಲ್ಲಿ ನಡೆಯಿತು `ಕಬ್ಜ` ಹಬ್ಬ ರಿಲೀಸ್ ಆಯ್ತು ಚಿತ್ರದ ‘ಚುಮ್ ಚುಮ್ ಚಳಿ ಚಳಿ ...’ ಮಾಸ್ ಸಾಂಗ್
Posted date: 28 Tue, Feb 2023 12:22:45 PM
ಸದ್ಯ ಪ್ಯಾನ್ ಇಂಡಿಯಾ ಹಂತದಲ್ಲಿ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ ಎಂದರೆ `ಕಬ್ಜ`. ಈಗಾಗಲೇ ತನ್ನ ಟೀಸರ್, ಎರಡು ಹಾಡುಗಳಿಂದ ಜನರ ಮನ ಗೆದ್ದಿರುವ `ಕಬ್ಜ` ಚಿತ್ರದಿಂದ ಇದೀಗ ಪಡ್ಡೆ ಹುಡುಗರ ಹೃದಯಕ್ಕೆ ಹತ್ತಿರವಾಗುವ ಹಾಡೊಂದು ಬಿಡುಗಡೆಯಾಗಿದೆ.  ಹೌದು ಇತ್ತೀಚೆಗೆ ಆರ್.ಚಂದ್ರು ಅವರ ತವರು ಶಿಡ್ಲಘಟ್ಟದಲ್ಲಿ "ಕಬ್ಜ" ಚಿತ್ರದ ‘ಚುಮ್ ಚುಮ್ ಚಳಿ ಚಳಿ . ತಬ್ಕೊ ಚಳುವಳಿ’ ಎಂಬ ಮಾಸ್ ಹಾಡು ಅಪಾರ ಜನಸಾಗರದ ನಡುವೆ ಬಿಡುಗಡೆಯಾಯಿತು. ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು  ಐರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ಹಾಡಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.  
 
ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ನೆಹರು ಮೈದಾನದಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ಆರೋಗ್ಯ ಸಚಿವ ಡಾಕ್ಟರ್ ಕೆ. ಸುಧಾಕರ್, ಶಿಡ್ಲಘಟ್ಟದ ಶಾಸಕರಾದ. ಮುನಿಯಪ್ಪ, ಸಮಾಜ ಸೇವಕ ರಾಮಚಂದ್ರ ಗೌಡರು, ಹೆಚ್.ಎಂ. ರೇವಣ್ಣ, ವಿತರಕ ಆನಂದ್ ಪಂಡಿತ್ ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು.  

ದೊಡ್ಡ ಪರದೆಯಲ್ಲಿ ಚಿತ್ರದ ಟೀಸರ್ ಗೀತೆಗಳನ್ನು ನೋಡಿದ ಜನಸಾಗರ ಮತ್ತೊಮ್ಮೆ ಮಗದೊಮ್ಮೆ ಕೇಳಿ, ನೋಡಿ ಸಂಭ್ರಮಿಸಿದರು. ಜೊತೆಗೆ ಗುರುಕಿರಣ್ ಗಾಯನ, ರೋಬೋ ಗಣೇಶ್ ಡ್ಯಾನ್ಸ್ ಮುಂತಾದ ಮನೋರಂಜನಾ ಕಾರ್ಯಕ್ರಮಗಳಿಗೆ ಜನ‌ ಚಪ್ಪಾಳೆಯ ಮಳೆ ಕರೆದರು. 

ಹಾಡು ಬಿಡುಗಡೆ ಮಾಡಿ ಮಾತನಾಡಿದ ಶಿವರಾಜಕುಮಾರ್ ಅವರು,  ನಾನು ಉಪೇಂದ್ರ ಅಭಿಮಾನಿ.  ಅವರು `ಓಂ` ಸಿನಿಮಾ ಮೂಲಕ ಇಡೀ ಭಾರತಕ್ಕೆ ರೌಡಿಸಂ ಚಿತ್ರ ನೀಡಿದವರು. ಅವರ ಜೊತೆ ಕೆಲಸ ಮಾಡುವುದೆ ಖುಷಿ. ಆರ್.ಚಂದ್ರು ಕೂಡ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ  ಎಂದು ತಂಡಕ್ಕೆ ಶುಭ ಹಾರೈಸಿ ಓಂ ಸಿನಿಮಾ ಡೈಲಾಗ್ ಹೇಳಿ,  "ಕಬ್ಜ"ದ "ಚುಮ್ ಚುಮ್" ಗೀತೆಗೆ ಹೆಜ್ಜೆ ಹಾಕಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಸಚಿವ ಕೆ. ಸುಧಾಕರ್ ಮಾತನಾಡಿ,  ಇದು `ಕಬ್ಜ`ಸಿನಿಮಾದ ಹಬ್ಬ. ಈ ಹಾಡು ಬಿಡುಗಡೆ ಸಮಾರಂಭವನ್ನು ಚಂದ್ರು ಅವರಿಗೆ ನಮ್ಮ ಚಿಕ್ಕಬಳ್ಳಾಪುರದಲ್ಲಿ ಮಾಡೋಣ ಎಂದಿದ್ದೆ. ಆದರೆ, ಅವರು ತಮ್ಮ ತವರಲ್ಲಿ ಮಾಡಿದ್ದಾರೆ. ಈ ಮೊದಲು ನಾನು "ಆರ್ ಆರ್ ಆರ್" ಚಿತ್ರದ ಆಡಿಯೋ ಲಾಂಚ್ ಮಾಡಿದ್ದೆ. ಅದು ಹಿಟ್ ಆಯ್ತು. ಅದಕ್ಕಿಂತ ದೊಡ್ಡ ಮಟ್ಟದಲ್ಲಿ`ಕಬ್ಜ` ಗೆಲ್ಲಬೇಕು. ಇದೊಂದು ಸದಭಿರುಚಿಯ ಯುವಕರ ಸಿನಿಮಾ ಎನ್ನಬಹುದು. ಸಿನಿಮಾ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲಿ. ಇಂದು ಎಲ್ಲಾ ಕಡೆ ಕನ್ನಡ ಸಿನಿಮಾಗಳನ್ನು ಜನ ನೋಡಿ,‌ ಮೆಚ್ಚಿಕೊಳ್ಳುತ್ತಿದ್ದಾರೆ ಎಂದರು.

ಈಗಾಗಲೇ ನಾವು ಎರಡು ಗೀತೆಗಳನ್ನು ಹೈದರಾಬಾದ್, ಚೆನೈನಲ್ಲಿ ಬಿಡುಗಡೆ ಮಾಡಿದ್ದು. ಈ  ಹಾಡನ್ನು ನಮ್ಮೂರು ಶಿಡ್ಲಘಟ್ಟದಲ್ಲಿ ಬಿಡುಗಡೆ ಮಾಡಿದ್ದೇವೆ. ಎಲ್ಲಾ ಅಥಿತಿಗಳು ಬಂದಿರುವುದು ತುಂಬಾ ಖುಷಿಯಾಗಿದೆ. ಅದರಲ್ಲೂ ಗೀತಕ್ಕ ಅವರು ನಮ್ಮ `ಶ್ರೀ ಸಿದ್ದೇಶ್ವರ ಎಂಟರ್‌ ಪ್ರೈಸಸ್` ಬ್ಯಾನರ್‌ ಅನ್ನು ಬಿಡುಗಡೆ ಮಾಡಿದ್ದರು. ಅವರು ಇಂದು ಈ ಸಮಾರಂಭಕ್ಕೆ ಬಂದಿರುವುದು ವಿಶೇಷ. ದೊಡ್ಡ ಮಟ್ಟದಲ್ಲಿ ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ `ಕಬ್ಜ`ಸದ್ದು ಮಾಡುತ್ತಿದೆ. ಬಾಲಿವುಡ್‌ನಲ್ಲಿ ಸುಮಾರು 1800 ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ನಮ್ಮ `ಕಬ್ಜ` ಬಿಡುಗಡೆ ಆಗಲಿದೆ’ ಎಂದು ನಿರ್ದೇಶಕ - ನಿರ್ಮಾಪಕ ಆರ್ ಚಂದ್ರು ಹೇಳಿದರು.

ನಂತರ ಚಿತ್ರದ ನಾಯಕ ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ `ಆದಷ್ಟು ಬೇಗ ಶಿವಣ್ಣನ ಜೊತೆ ಸಿನಿಮಾ ಮಾಡುತ್ತೇನೆ. ಅಪ್ಪುಗೆ ಆ್ಯಕ್ಷನ್-ಕಟ್ ಹೇಳುವ ಆಸೆ ಇತ್ತು. ಅದು ಇಡೇರಲಿಲ್ಲ. "ಕಬ್ಜ" ಬಗ್ಗೆ ಹೇಳುವುದಾದರೆ, ಇಂದಿನ ಹೀರೋ ಸಂಗೀತ ನಿರ್ದೇಶಕ ರವಿ ಬಸ್ರೂರ್. ಈ ಚಿತ್ರದಲ್ಲಿ ಅವರು ಮಾಸ್, ಕ್ಲಾಸಿಕ್ ಹಾಗೂ ಮೆಲೋಡಿ ಗೀತೆಗಳನ್ನು ಕೊಟ್ಟಿದ್ದಾರೆ. ಚಂದ್ರು ಈ ಸಿನಿಮಾ ಮೂಲಕ ಪ್ರತಿಯೊಬ್ಬರ ಹೃದಯ "ಕಬ್ಜ" ಮಾಡಲಿದ್ದಾರೆ. ಚಿತ್ರದಲ್ಲಿ ತುಂಬಾ ಅದ್ಭುತಗಳಿದ್ದು, ಪ್ರೇಕ್ಷಕರಿಗೆ ನಿಜಕ್ಕೂ ಹಬ್ಬ .  ಚಂದ್ರು ಕಥೆಯನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ. ಕಥೆಯೇ ಚಿತ್ರದ ಹೈಲೈಟ್ ಎನ್ನಬಹುದು` ಎಂದರು. 

ಇಡೀ ತಂಡ ಶ್ರಮದಿಂದ ಸಿನಿಮಾ ಮಾಡಿದ್ದು, "ಕಬ್ಜ"ದಲ್ಲಿ ನನಗೊಂದು ಒಳ್ಳೆ ಪಾತ್ರವಿದೆ’ ಎಂದು ಎನ್ನುತ್ತಾರೆ ನಾಯಕಿ ಶ್ರೇಯಾ ಶರಣ್. 
 ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅನೂಪ್ ರೇವಣ್ಣ ಸಹ "ಕಬ್ಜ" ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
 
ಅಂದ ಹಾಗೆ ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ" ಇದೇ ಮಾರ್ಚ್ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.  ಈ ಚಿತ್ರದ ಮುಖ್ಯವಾದ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಅಭಿನಯ ಮಾಡಿದ್ದಾರೆ.  ಕಾರ್ಯಕಾರಿ ನಿರ್ಮಾಪಕರಾಗಿ ಅಲಂಕಾರ್ ಪಾಂಡ್ಯನ್ ಸಾಥ್ ನೀಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed