ನಟ ದಳಪತಿ ವಿಜಯ್ ಮತ್ತು ನಿರ್ದೇಶಕ ಲೋಕೇಶ್ ಕನಗರಾಜ್, ಚಿತ್ರಕ್ಕೆ ‘ಲಿಯೋ’ ಶೀರ್ಷಿಕೆ ಅಂತಿಮವಾಗಿದೆ. ಶೀರ್ಷಿಕೆ ಟೀಸರ್ ಬಿಡುಗಡೆ ಆಗಿದ್ದು, ಚಾಕಲೇಟ್ ತಯಾರಕನಾಗಿ ವಿಜಯ್ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಬದಿಯಲ್ಲಿ ಕೈಯಲ್ಲಿ ಕತ್ತಿ ಹಿಡಿದು ಶತ್ರುಗಳ ಸಂಹಾರಕ್ಕೂ ಸಜ್ಜಾಗಿದ್ದಾರೆ.
ಮಾಸ್ಟರ್ ಸಿನಿಮಾ ಬಳಿಕ ಲೋಕೇಶ್ ಕನಗರಾಜ್ ಮತ್ತು ವಿಜಯ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿದ್ದು, ಈಗಾಗಲೇ ಚಿತ್ರದ ಬಹುತೇಕ ಸ್ಟಾರ್ ಕಾಸ್ಟ್ ಸಹ ಬಹಿರಂಗವಾಗಿದೆ. ತ್ರಿಷಾ ಕೃಷ್ಣನ್ ಈ ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾದರೆ, ಪ್ರಿಯಾ ಆನಂದ್ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.
ಫೆ. 2ರಂದು ಚೆನ್ನೈನಲ್ಲಿ ‘ಲಿಯೋ’ ಚಿತ್ರದ ಅದ್ದೂರಿ ಮುಹೂರ್ತ ನೆರವೇರಿತ್ತು. ಆದರೆ, ಶೀರ್ಷಿಕೆ ಮಾತ್ರ ಘೋಷಣೆ ಆಗಿರಲಿಲ್ಲ. ಮುಹೂರ್ತ ಮುಗಿದ ಒಂದು ದಿನದ ಬಳಿಕ ಅಂದರೆ ಫೆ. 3ರಂದು ಶೀರ್ಷಿಕೆ ಟೀಸರ್ ರಿಲೀಸ್ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದರು.
7 ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ‘ಲಿಯೋ’ ಚಿತ್ರಕ್ಕೆ ಅನಿರುದ್ಧ ರವಿಚಂದ್ರನ್ ಸಂಗೀತ ನೀಡಲಿದ್ದಾರೆ. ಈ ಹಿಂದೆ ವಿಜಯ್ ಅವರ ಕೈದಿ, ಮಾಸ್ಟರ್ ಮತ್ತು ಬೀಸ್ಟ್ ಸಿನಿಮಾಗಳಿಗೆ ಅನಿರುದ್ಧ ಸಂಗೀತ ನೀಡಿದ್ದರು. ಲಿಯೋ ಮೂಲಕ ನಾಲ್ಕನೇ ಬಾರಿ ಒಂದಾಗಿದ್ದಾರೆ.
ಮನೋಜ್ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್ ರಾಜ್ ಸಂಕಲನ, ಸತೀಸ್ ಕುಮಾರ್ ಕಲೆ, ದಿನೇಶ್ ನೃತ್ಯ ನಿರ್ದೇಶನ, ಸಂಭಾಷಣೆ ಲೋಕೇಶ್ ಕನಗರಾಜ್, ರತ್ನ ಕುಮಾರ್, ಧೀರಜ್ ವೈದ್ಯ, ರಾಮಕುಮಾರ್ ಬಾಲಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.