ಅಪರೂಪದ ಲವ್ ಸ್ಟೋರಿ - 3/5 ***
Posted date: 15 Sat, Jul 2023 b 09:33:22 AM
ನಿಜವಾದ ಪ್ರೀತಿಗೆ ಯಾವತ್ತೂ ಗೆಲುವಿದೆ ಎಂಬುದನ್ನು ನಿರ್ದೇಶಕ ಮಹೇಶ್‌ಬಾಬು ಅವರು ಅಪರೂಪ ಚಿತ್ರದಲ್ಲಿ ಮತ್ತೊಮ್ಮೆ ಹೇಳಿದ್ದಾರೆ. 
 
ಮದ್ಯಮ ವರ್ಗದ ಕುಟುಂಬದ  ಹುಡುಗ ಹಾಗೂ ಶ್ರೀಮಂತರ ಮನೆತನದ ಹುಡುಗಿ ನಡುವೆ ನಡೆಯುವ ಅಪರೂಪದ ಪ್ರೇಮಕಥೆಯಿದಾಗಿದ್ದು  ನಿರ್ದೇಶಕರು  ತಮ್ಮದೇ ಆದ ಶೈಲಿಯಲ್ಲಿ ನಿರೂಪಣೆ ಮಾಡಿದ್ದಾರೆ.  ನಾಯಕ ವಿಜಯ್(ಸುಘೋಷ್) ಪಕ್ಕಾ ಲೋಕಲ್ ಹುಡುಗ, ನಡವಳಿಕೆಯಲ್ಲಿ ಸ್ವಲ್ಪ ಒರಟನಾದರೂ ಒಳ್ಳೆಯ ಮನಸಿರುತ್ತದೆ. ಸ್ನೇಹಿತರ ಸಹವಾಸ, ಕುಡಿತ, ಹುಡುಗಾಟಿಕೆ ಎಲ್ಲಾ ಇರುತ್ತದೆ. ನಾಯಕಿ ಹಾಸಿನಿ(ಹೃತಿಕಾ) ಬ್ಯುಸಿನೆಸ್‌ ಮ್ಯಾನ್(ಅವಿನಾಶ್)ಗೆ ಒಬ್ಬಳೇ ಮಗಳು. ಎಲ್ಲಾ ಲವ್ ಸ್ಟೋರಿಗಳಂತೆ ಕಲಹದಿಂದಲೇ ಪ್ರಾರಂಭವಾಗುವ ಇವರಿಬ್ಬರ ಪ್ರೇಮಕಥೆಗೆ ಮನೆಯವರರಿಂದ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಒಂದು ಸಣ್ಣ ತಪ್ಪುಕಲ್ಪನೆ  ಇಬ್ಬರನ್ನೂ ದೂರವಾಗುವಂತೆ ಮಾಡುತ್ತದೆ. ವ್ಯವಹಾರದಲ್ಲೇ ಮುಳುಗಿದ ತಂದೆಯ ಪ್ರೀತಿ ಅಕ್ಕರೆ ಅನುಭವಿಸದ ಹಾಸಿನಿಯ ಜೀವನದಲ್ಲಿ ತಂಗಾಳಿಯಂತೆ ಬರುವ ನಾಯಕ ವಿಜಯ್ ಪ್ರೇಮದ ಸಿಂಚನ ಸುರಿಸುತ್ತಾನೆ, ಒಮ್ಮೆ ಹಾಸಿನಿಯ ತಂದೆ ಅವಿನಾಶ್ ಇವರಿಬ್ಬರೂ ಜೊತೆ ಇರುವುದನ್ನು ಕಂಡು ಆತಂಕಕ್ಕೊಳಗಾಗುತ್ತಾನೆ. ಒಂದು ಘಟನೆಯಲ್ಲಿ ಆತನಿಗೆ ವಿಜಯ್ ಪುಂಡತನದ ಪರಿಚಯವಾಗಿರುತ್ತದೆ. ತನ್ನ ಪ್ರೀತಿಯ ಕೊರತೆಯೇ ಮಗಳು ವಿಜಯ್‌ಗೆ ಹತ್ತಿರವಾಗಲು ಕಾರಣ ಎಂಬುದನ್ನರಿತ ತಂದೆ ಒಮ್ಮೆ  ಬಿಡುವು ಮಾಡಿಕೊಂಡು ಮಗಳನ್ನು ಸಿಟಿ ಸುತ್ತಾಡಿಸಿಕೊಂಡು ಶಾಪಿಂಗ್ ಮಾಡಿಸುತ್ತಾನೆ, ಈ ಸಮಯದಲ್ಲಿ ನಾಯಕಿ ತನ್ನ ಫೋನ್ ಮನೆಯಲ್ಲೇ ಬಿಟ್ಟು ಹೋಗಿರುತ್ತಾಳೆ. ಇದೇ ಇವರಿಬ್ಬರ ನಡುವೆ ಬಿರುಕು ಮೂಡಲು  ಕಾರಣವಾಗುತ್ತದೆ. ಹಲವಾರು ಬಾರಿ ಕಾಲ್ ಮಾಡಿ ಮಾಡಿ ಸಿಟ್ಟಾಗಿದ್ದ ವಿಜಯ್  ಕೋಪದಿಂದ  ಆಕೆಯ ಮೇಲೆ ಸಿಟ್ಟಾಗಿ ಯಾರಜೊತೆ ಹೋಗಿದ್ದೆ ಎಂದು  ಬಯ್ಯುತ್ತಾನೆ. ಇದನ್ನು ಸಹಿಸದ ನಾಯಕಿ ನಿನ್ನಂಥವನ ಸಹವಾಸ ನನಗೂ ಬೇಡ ಎಂದು ಆತನಿಂದ ದೂರಾಗುತ್ತಾಳೆ. ಇಬ್ಬರ ನಡುವಿನ ಇಗೋಯಿಸಂ ಇವರ ಪ್ರೇಮಕಥೆಗೆ ಮುಳ್ಳಾಗುತ್ತದೆ, ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದೂ ಇವರು ದೂರಾಗಲು ಕಾರಣವಾಗುತ್ತದೆ, ಗಂಡಸರು ಸಾಮಾನ್ಯವಾಗಿ ಮುಂಗೋಪಿಗಳಾಗಿರುತ್ತಾರೆ.
 
ಒಮ್ಮೆಮ್ಮೆ ಸಮಯ ಸಂದರ್ಭಗಳೂ ಅವರು ಕೆಟ್ಟದಾಗಿ ನಡೆದುಕೊಳ್ಳಲು ಕಾರಣವಾಗುತ್ತವೆ. ಅದನ್ನು ಹೆಣ್ಣು ಅರ್ಥ ಮಾಡಿಕೊಂಡರೆ ಯಾವುದೇ ಸಂಬಧಗಳು ಕ್ಷುಲ್ಲುಕ ಕಾರಣಕ್ಕೆ ಒಡೆದು ಹೋಗುವುದಿಲ್ಲ, ಇಲ್ಲಿ ನಾಯಕಿಯೂ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ನಾಯಕನನ್ನು ತಾನಾಗೇ ದೂರ ಮಾಡಿಕೊಳ್ಳುತ್ತಾಳೆ, ಹಾಸಿನಿಯನ್ನು ಮರೆಯಲಾಗದೆ ನಾಯಕ ವಿಜಯ್ ಕುಡಿತವನ್ನು ಜಾಸ್ತಿ ಮಾಡಿಕೊಳ್ಳುತ್ತಾನೆ. ಇತ್ತ ಹಾಸಿನಿ ಅರೆ ಮನಸಿನಿಂದಲೇ ತಂದೆ ತೋರಿಸಿದ ಹುಡುಗನನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾಳೆ.
 
ಹಾಸಿನಿ ತನ್ನ ಮದುವೆ  ಆಮಂತ್ರಣ ಪತ್ರಿಕೆಯನ್ನು ಮೊದಲು ವಿಜಯ್ ಮನೆಗೇ ಬಂದು ಕೊಡುತ್ತಾಳೆ. ಮುಂದೆ ಏನಾದರೂ ಮಿರಾಕಲ್ ನಡೆಯಿತೇ, ಅಥವಾ ವಿಜಯ್ ಹಾಸಿನಿ  ದೂರಾಗೇ ಉಳಿದರೇ, ಈ ಎಲ್ಲ ಪ್ರಶ್ನೆಗಳಿಗೆ  ಉತ್ತರ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿದೆ. ಚಿತ್ರದ ಎಲ್ಲಾ ಹಾಡುಗಳು ಕೇಳಲು ಇಂಪಾಗಿವೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅವರ ಕಂಠದಲ್ಲಿ ಮೂಡಿಬಂದಿರುವ ಹೇಯ್ ಬೇಬಿ, ಬಾಬಿ ಡಾಲು ಎಂಬ ಟಪಾಂಗುಚಿ ಹಾಡು ಅದ್ಭುತವಾಗಿ ಮೂಡಿಬಂದಿದೆ. ನಿಜಕ್ಕೂ ಅಪರೂಪ  ಒಂದು ಫೀಲ್‌ಗುಡ್ ಮೂವೀ ಅಂತ ನಿಸ್ಸಂದೇಹವಾಗಿ ಹೇಳಬಹುದು.  ಪ್ರೇಕ್ಷಕರಿಗೆ ಯಾವ ಹಂತದಲ್ಲೂ ಬೋರಾಗದಂತೆ ಮಹೇಶ್‌ಬಾಬು ಅವರು ಅಚ್ಚುಕಟ್ಟಾಗಿ ಕಥೆಯನ್ನು ಹೇಳುತ್ತಾ ಹೋಗಿದ್ದಾರೆ. ಯಾವುದೇ ಟ್ವಿಸ್ಟ್ ಅಂಡ್ ಟರ್ನ್ ಇಲ್ಲದೆ ನೇರವಾಗಿ ಕಥೆಯನ್ನು ಹೇಳುತ್ತಲೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಹುದು ಎಂದು ಅವರು ತೋರಿಸಿಕೊಟ್ಟಿದ್ದಾರೆ. ಸುಘೋಷ್ ಹಾಗೂ  ಹೃತಿಕಾ ಪಾತ್ರಗಳು ನೋಡುಗರಿಗೆ ಇಷ್ಟವಾಗುತ್ತದೆ,  ಜವಾಬ್ದಾರಿಯುತ ತಂದೆಯಾಗಿ ಅವಿನಾಶ್, ಮಮತಾಮಯಿ ತಾಯಿಯಾಗಿ ಅರುಣಾ ಬಾಲರಾಜ್  ಉತ್ತಮ ಅಭಿನಯ ನೀಡಿದ್ದಾರೆ. ನಾಯಕನ ಗೆಳೆಯನಾಗಿ ವಿಜಯ್ ಚೆಂಡೂರು ಅಭಿನಯ ಗಮನ ಸೆಳೆಯುತ್ತದೆ. ಒಂದೇ ಸೀನ್‌ನಲ್ಲಿ ಬಂದುಹೋಗುವ ಕುರಿಪ್ರತಾಪ್ ಸಖತ್ ನಗಿಸುತ್ತಾರೆ. ಪ್ರಜ್ವಲ್‌ಪೈ ಅವರ ಸಂಗೀತ ಸಂಯೋಜನೆಯ  ಹಾಡುಗಳು ಕಿವಿಗಿಂಪಾಗಿದ್ದು ನೆನಪಲ್ಲುಳಿಯುತ್ತವೆ. ಸೂರ್ಯಕಾಂತ್ ಅವರ ಕ್ಯಾಮೆರಾ ಕೈಚಳಕ ಈ ಸಿನಿಮಾದ ಹೈಲೈಟ್.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed