ಶ್ರೀನಿಧಿ ಬೆಂಗಳೂರು ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸೈನ್ಸ್ ಫಿಕ್ಷನ್ ಸಿನಿಮಾ `ಬ್ಲಿಂಕ್`. ಈಗಾಗಲೇ ಟೀಸರ್ ಮೂಲಕ ಬ್ಲಿಂಕ್ ಸಿನಿಮಾ ಗಮನ ಸೆಳೆದಿದೆ. ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಚೈತ್ರಾ ಜೆ ಆಚಾರ್ ಹಾಗೂ ಮಂದಾರ ಬಟ್ಟಲಹಳ್ಳಿ ನಾಯಕಿಯರಾಗಿ ನಟಿಸಿದ್ದಾರೆ. ಇಂದು ನಾಯಕಿ ಚೈತ್ರಾ ಜೆ ಆಚಾರ್ ಹುಟ್ಟುಹಬ್ಬ ಆ ಪ್ರಯುಕ್ತ `ಬ್ಲಿಂಕ್` ಚಿತ್ರತಂಡ ಚಿತ್ರದಲ್ಲಿನ ಚೈತ್ರಾ ಜೆ ಆಚಾರ್ ಪಾತ್ರದ ಸಣ್ಣ ಝಲಕ್ ರಿಲೀಸ್ ಮಾಡಿ ಹುಟ್ಟುಹಬ್ಬದ ಶುಭ ಹಾರೈಸಿದೆ.
`ಮಹಿರಾ`, `ಆ ದೃಶ್ಯ`, ತಲೆದಂಡ ಸಿನಿಮಾದಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ `ಬ್ಲಿಂಕ್` ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ 90ರ ದಶಕದ ಸೆಮಿ ಮಾಡ್ರೆನ್ ಹಳ್ಳಿ ಹುಡುಗಿಯಾಗಿ ದೇವಕಿ ಅರಸ್ ಪಾತ್ರ ನಿಭಾಯಿಸಿದ್ದಾರೆ. ದೇವಕಿ ಅರಸ್ ಚಿತ್ರದಲ್ಲಿ ತುಂಬಾ ಮಾತನಾಡುವ, ಎಲ್ಲರೊಂದಿಗೆ ಬಹಳ ಬೇಗ ಕನೆಕ್ಟ್ ಆಗುವ ಪಾತ್ರ ಎಂದು ಚಿತ್ರದ ನಿರ್ದೇಶಕ ಶ್ರೀನಿಧಿ ತಿಳಿಸಿದ್ದಾರೆ. ದೇವಕಿ ಅರಸ್ ಪಾತ್ರದ ಸಣ್ಣ ಝಲಕ್ ಜನನಿ ಪಿಚ್ಚರ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಗಾಯಕಿ ಹಾಗೂ ನಟಿಯಾಗಿರುವ ಚೈತ್ರಾ ಜೆ ಆಚಾರ್ ರಕ್ಷಿತ್ ಶೆಟ್ಟಿ ನಟನೆಯ `ಸಪ್ತ ಸಾಗರದಾಚೆ ಎಲ್ಲೋ` ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. `ಸ್ಟ್ರಾಬೆರಿ` ಸೇರಿದಂತೆ ಹಲವು ಸಿನಿಮಾ ಅವಕಾಶಗಳು ಇವರ ಕೈಯಲ್ಲಿವೆ. `ಗರುಡ ಗಮನ ವೃಷಭ ವಾಹನ` ಚಿತ್ರದ ಸೋಜುಗಾದ ಸೂಜಿಮಲ್ಲಿಗೆ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.
`ಬ್ಲಿಂಕ್`ಸೈನ್ಸ್ ಫಿಕ್ಷನ್ ಚಿತ್ರವಾಗಿದ್ದು, ಹೊಸ ಪ್ರತಿಭೆ ನಿರ್ದೇಶಕ ಶ್ರೀನಿಧಿ ಬೆಂಗಳೂರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿ ಐದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಭರವಸೆ ಮೂಡಿಸಿದೆ. ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನನಿ ಪಿಕ್ಚರ್ಸ್ ಬ್ಯಾನರ್ ನಡಿ ರವಿಚಂದ್ರ ಎ.ಜೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ಆರು ಪ್ರಮುಖ ಪಾತ್ರಗಳು ಟ್ರಾವೆಲ್ ಮಾಡಲಿದ್ದು, ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ, ವಜ್ರದೀರ್ ಜೈನ್, ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಗೋಪಾಲ ಕೃಷ್ಣ ದೇಶಪಾಂಡೆ, ಯಶಸ್ವಿನಿ ರಾವ್, ಕಿರಣ್ ನಾಯ್ಕ್, ಸುರೇಶ್ ಅನಗಳ್ಳಿ ಮುಖ್ಯ ತಾರಾಗಣದಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಾಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ಸಂಜೀವ್ ಜಗೀರ್ದಾರ್ ಸಂಕಲನ ಚಿತ್ರಕ್ಕಿದೆ. ಸಿನಿಮಾ ಕೆಲಸಗಳು ಕೊನೆಯ ಹಂತದಲ್ಲಿದ್ದು ಸದ್ಯದಲ್ಲೇ ಸಿನಿಮಾ ಬಿಡುಗಡೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಳ್ಳಲಿದೆ.