ನಿರ್ಮಾಪಕ ಕೆ.ಮಂಜು ಅವರು ಬಹುತೇಕ ಕನ್ನಡದ ಎಲ್ಲಾ ಸ್ಟಾರ್‌ಗಳ ಜೊತೆ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಕೆ.ಮಂಜುಗೆ ವಿಷ್ಣುವರ್ಧನ್ ಅವರ ಮೇಲೆ ಅಪಾರ ಗೌರವ. ತಮ್ಮ ಪುತ್ರ ಶ್ರೇಯಸ್ ಅವರನ್ನು ವಿಷ್ಣು ಅಭಿನಯದ ಪಾತ್ರದ ಮೂಲಕವೇ ಚಿತ್ರರಂಗಕ್ಕೆ ಪರಿಚಯಿಸುದ್ದರು.
ರಾಣಾ ನಂತರ ಶ್ರೇಯಸ್ ಅಭಿನಯದ ಮತ್ತೊಂದು ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಚಿತ್ರದ ಶೀರ್ಷಿಕೆ ವಿಷ್ಣು ಪ್ರಿಯಾ. ಇಲ್ಲಿ ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ತೊಂಭತ್ತರ ದಶಕದ ಪ್ರೇಮಕಥೆವನ್ನು ಹೇಳುವ ಈ ಚಿತ್ರವನ್ನು ಕೆ.ಮಂಜು ಅವರೇ ನಿರ್ಮಾಣ ಮಾಡಿದ್ದಾರೆ. ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅವರು ಈ ಚಿತ್ರದ ಮೂಲಕ ನಾಯಕಿಯಾಗಿ ಅವರು ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮಲಯಾಳಂನ ವಿ.ಕೆ.ಪ್ರಕಾಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಂಗೀತ ನಿರ್ದೇಶಕ ಗೋಪಿಸುಂದರ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿಯ ಗೀತಾ ಗೋವಿಂದಂಗೆ ಇವರು ಮ್ಯೂಸಿಕ್ ಮಾಡಿದ್ದರು ಇನ್ನು ವಿ.ಕೆ.ಪ್ರಕಾಶ್ ಮಲಯಾಳಂ, ತೆಲುಗು, ತಮಿಳಿನಲ್ಲಿ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ, ಎರಡು ನ್ಯಾಷನಲ್ ಅವಾರ್ಡ್ ಕೂಡ ಗಳಿಸಿದ್ದಾರೆ. ನಾಯಕ ಶ್ರೇಯಸ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಹೊಸ ಟೀಸರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಚಿತ್ರದ ಕುರಿತಂತೆ ನಿರ್ಮಾಪಕ ಕೆ.ಮಂಜು ಮಾತನಾಡಿ ಪಡ್ಡೆಹುಲಿ ನಂತರ ಒಳ್ಳೆ ಕಥೆಗಾಗಿ ಹುಡುಕುತ್ತಿದ್ದೆ. ರೀಮೇಕ್ ಮಾಡಲು ನನ್ನ ಮಗ ಒಪ್ಪಲಿಲ್ಲ, ಒಳ್ಳೆ ಕಥೆಯಿದ್ದರೆ ತನ್ನಿ ಅಂತ ಪೇಪರ್ ಆಡ್ ಕೊಟ್ಟೆ. ಆಗ ೬೫ ಕಥೆಗಳು ಬಂದವು. ಅದರಲ್ಲಿ ಧಾರವಾಡದ ಸಿಂಧುಶ್ರೀ ಅವರಕಥೆ ತುಂಬಾ ಚೆನ್ನಾಗಿತ್ತು. ಅದರ ಒಂದು ಲೈನ್ ತಗೊಂಡು ಈ ಸ್ಕ್ರಿಪ್ಟ್ ಮಾಡಿದ್ದೇವೆ. ವಿಕೆ ಪ್ರಕಾಶ್, ಗೋಪಿಸುಂದರ್ ಅವರಂಥ ತಂತ್ರಜ್ಞರನ್ನು ಒಪ್ಪಿಸಿದೆ. ನಾಗೇಂದ್ರ ಪ್ರಸಾದ್ ಒಳ್ಳೆ ಲಿರಿಕ್ ಕೊಟ್ಟಿದ್ದಾರೆ. ಮೊದಲು ಮಾಡಿದ ಚಿತ್ರದ ಕ್ಲೈಮ್ಯಾಕ್ಸ್ ತೃಪ್ತಿಯಾಗಲಿಲ್ಲ. ಹಾಗಾಗಿ ಅದನ್ನು ಮತ್ತೆ ರೀಶೂಟ್ ಮಾಡಿದ್ದೇವೆ. ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯ ಅಂತ ಚಿತ್ರದಲ್ಲಿ ತೋರಿಸಿದ್ದೇವೆ. ನಿರ್ದೇಶಕ ಮಹೇಶ್, ಅನಿಲ್ ಸಿನಿಮಾನೋಡಿ ಕಣ್ಣಲ್ಲಿ ನೀರು ತಂದುಕೊಂಡರು. ಶ್ರೇಯಸ್ ಬರ್ತ್ ಡೇಗೆ ರಿಲೀಸ್ ಮಾಡಬೇಕಿತ್ತು. ಎಲೆಕ್ಷನ್ ಅಡ್ಡ ಬಂತು.ಹಾಗಾಗಿ ಜೂನ್ ಮೊದಲವಾರ ಪ್ಲಾನ್ ಮಾಡಿದ್ದೇವೆ. 15 ದಿನದಲ್ಲಿ ಆಡಿಯೋ ಕಾರ್ಯಕ್ರಮ ಗ್ರ್ಯಾಂಡ್ ಆಗಿ ನಡೆಯುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ನಾಯಕ ಶ್ರೇಯಸ್ ತೊಂಬತ್ತರ ದಶಕದ ಲವ್ ಸ್ಟೋರಿ ಇರುವ ಈ ಚಿತ್ರದಲ್ಲಿ ಫ್ಯಾಮಿಲಿ ವ್ಯಾಲ್ಯೂಸ್‌ಗೆ ಹೆಚ್ಚಿನ ಮಹತ್ವವಿದೆ. ವಿಷ್ಣು ಒಬ್ಬ ಸಿಂಪಲ್ ಹುಡುಗ, ಎನಿಥಿಂಗ್ ಫಾರ್ ಲವ್ ಎನ್ನುವ ಹಾಗೆ ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕ. ಅದೇ ಕಾಲದ ಕಾಸ್ಟೂಮ್ಸ್ ಜೊತೆಗೆ ಆಗಿನ ಕಾಲದ ಬೈಕ್‌ಗಳನ್ನು ರೀಕ್ರಿಯೇಟ್ ಮಾಡಿ ಚಿತ್ರಕ್ಕೆ ಬಳಸಿಕೊಂಡಿದ್ದೇವೆ. ನನ್ನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅವರು ಅಭಿನಯಿಸಿದ್ದಾರೆ. ಇಂಥ ಒಳ್ಳೆ ಪ್ರಯತ್ನಗಳು ಗೆದ್ದರೆ ಉಳಿದವರಿಗೆ ಪ್ರಧರಣೆಯಾಗುತ್ತದೆ. ನಿಹಾಲ್ ನನ್ನ ಜೊತೆ ಬಹುತೇಕ ಸೀನ್ ಗಳಲ್ಲಿದ್ದಾರೆ. ಇದು ಬೈಲಾಂಗ್ಯುಯಲ್ ಮೂವೀ ಆಗಿದ್ದು ಮಲಯಾಳಂನಲ್ಲೂ ರಿಲೀಸಾಗುತ್ತದೆ. ಸ್ವಲ್ಪ ಕಷ್ಟ ಆದರೂ ನಾನು ಖಂಡಿತ ರೀಮೇಕ್ ಸಿನಿಮಾ ಮಾಡಲ್ಲ, ೬೦ % ರಿಯಲ್ ಕಥೆ ಚಿತ್ರದಲ್ಲಿದೆ.6 ತಿಂಗಳು ಪ್ರಿಪೇರ್ ಆಗಿ ೩ ದಿನ ಕ್ಲೈಮ್ಯಾಕ್ಸ್ ಶೂಟ್ ಮಾಡಿದ್ದೇವೆ ಎಂದರು. ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ.