ದೇಹಬದಲಾವಣೆ ಹಾಗೂ ಮದ್ಯಪಾನದ ಅಡ್ಡಪರಿಣಾಮಗಳ ಕುರಿತ ಕಥಾಹಂದರ ಒಳಗೊಂಡ ಚಿತ್ರ ಸುರಾರಿ ಇದೇ ತಿಂಗಳ ೧೪ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶಾಲಜಯ ಅವರ ನಿರ್ದೇಶನವಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಒಂದೇ ಮುಖದ ಹಲವು ಭಾವಗಳು, ಒಂದೇ ದೇಹದ ಕೆಲವು ರೂಪಗಳು ಎಂಬ ಟ್ಯಾಗ್ಲೈನ್ ಹೊಂದಿದ, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಇನ್ವೆಸ್ಟಿಗೇಶನ್ ಕಥಾಹಂದರ ಒಳಗೊಂಡ ಮನರಂಜನಾತ್ಮಕ ಚಿತ್ರ ಇದಾಗಿದ್ದು, ಕನ್ನಡ ಅಲ್ಲದೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲೂ ಸಹ ಈ ಚಿತ್ರ ತೆರೆಗೆ ಬರುತ್ತಿದೆ. ಚಿತ್ರದ ನಾಯಕ ವಿಶಾಲಜಯ ಅವರು ಕೇವಲ ೧೦೦ ದಿನಗಳಲ್ಲಿ ತನ್ನ ಡೊಳ್ಳು ಹೊಟ್ಟೆಯನ್ನು ದಂಡಿಸಿ ಸಿಕ್ಸ್ ಪ್ಯಾಕ್ ಆಗಿ ಪರಿವರ್ತಿಸಿಕೊಳ್ಳುವ ವಿಷಯ ಕೂಡ ಈ ಚಿತ್ರದ ಹಾಡೊಂದರಲ್ಲಿದೆ. ಈ ಚಿತ್ರಕ್ಕೆ ನಿರ್ದೇಶಕ ವಿಶಾಲಜಯ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಾಯಕನಾಗೂ ಅಭಿನಯಿಸಿದ್ದಾರೆ. ಚಿತ್ರದ ನಿರ್ಮಾಣದ ಜವಬ್ದಾರಿಯನ್ನು ಐರಿಸ್ ಸ್ಟುಡಿಯೋದ ಕೃಷ್ಣನ್ ಹೊತ್ತುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ವಿಶಾಲಜಯ ಆರಂಭದಲ್ಲಿ ನಾನು ರಂಗಭೂಮಿಯಲ್ಲಿ ಅಭಿನಯಿಸುತ್ತಲೇ ಕೆಲವು ಕಿರುಚಿತ್ರಗಳನ್ನು ಮಾಡಿದೆ. ಈಗ ಸುರಾರಿ ಚಿತ್ರ ನಿರ್ದೇಶಿಸಿದ್ದೇನೆ. ಪ್ರಮುಖವಾಗಿ ಎರಡು ವಿಷಯದ ಮೇಲೆ ಈ ಕಥೆ ನಡೆಯುತ್ತದೆ. ಸಮಾಜದಲ್ಲಿ ೨೦ ವರ್ಷಗಳ ಹಿಂದೆ ಎಲ್ಲೋ ಒಂದುಕಡೆ ಬಾರ್ ಇರುತ್ತಿತ್ತು, ಈಗ ರಸ್ತೆಗೆರಡರಂತೆ ತಲೆಯೆತ್ತಿವೆ. ನನ್ನ ಜೊತೆ ಆಡಿದ ಗೆಳೆಯರೆಲ್ಲ ಈಗ ಇಲ್ಲ, ಇದಕ್ಕೆ ಮದ್ಯಪಾನವೇ ಕಾರಣ. ಕುಡಿಯುವುದನ್ನು ಹವ್ಯಾಸ ಮಾಡಿಕೊಂಡರೆ ಜೀವನವನ್ನು ಹಾಗೆ ಹಾಳು ಮಾಡಿಕೊಳ್ತಾರೆ ಎಂಬುದನ್ನು ನಮ್ಮ ಸಿನಿಮಾದಲ್ಲಿ ತೋರಿಸಿದ್ದೇವೆ. ಆ ದಾರಿಯಲ್ಲಿ ಹೇದರೆ ಏನೇನಾಗುತ್ತೆ ಎಂಬುದೂ ಚಿತ್ರದಲ್ಲಿದೆ. ಅಲ್ಲದೆ ಸೋಮಾರಿಯೊಬ್ಬ ಸುರಾರಿಯಾಗುವ ಕಥೆಯೂ ಇದೆ, ಚಿತ್ರದಲ್ಲಿ ನಾನು ಗರಡಿ ಪೈಲ್ವಾನನ ಪಾತ್ರ ಮಾಡಿದ್ದೇನೆ. ತಂದೆ ತಾಯಿಗೆ ಹೇಗೆ ಒಳ್ಳೇ ಮಗನಾಗಿರಬೇಕು, ಒಬ್ಬ ಪತ್ನಿಗೆ ಹೇಗೆ ಗಂಡನಾಗಿರಬೇಕು ಎನ್ನುವುದೂ ಚಿತ್ರದಲ್ಲಿದೆ. ನಾನು ದಪ್ಪ ಆಗಲು ಸುಮಾರು ೯ ತಿಂಗಳನ್ನು ತೆಗೆದುಕೊಂಡೆ, ಆದರೆ ದೇಹದ ತೂಕವನ್ನು ಕೇವಲ 100 ದಿನಗಳಲ್ಲಿ ಇಳಿಸಿಕೊಂಡಿದ್ದೃನೆ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು.
ನಾಯಕಿ ಅರ್ಚನಾಸಿಂಗ್ ಮಾತನಾಡಿ ನಾನು ಲಕ್ಷಣ ಎಂಬ ಕುಂದಾಪುರದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಫಾರೆಸ್ಟ್ನಲ್ಲೇ ಹೆಚ್ಚಿನ ಶೂಟಿಂಗ್ ನಡೆದಿದೆ ಎಂದರು. ಮತ್ತೊಬ್ಬ ನಾಯಕಿ ರತನ್ಯ ಮಾತನಾಡಿ ನಾನು ಒಬ್ಬ ಸಿಬಿಐ ಆಫೀಸರ್ ಪಾತ್ರ ಮಾಡಿದ್ದೇನೆ. ಅಲ್ಲದೆ ವಿಶಾಲಜಯ ಅವರು ಈ ಚಿತ್ರಕ್ಕಾಗಿ ತುಂಬಾ ಎಫರ್ಟ್ ಹಾಕಿದ್ದಾರೆ ಎಂದರು. ನಟ ಗಂಗಾಧರ್ ಮಾತನಾಡಿ ಚಿತ್ರಕ್ಕೆ ನಾನು ಆಸೋಸಿಯೇಟ್ ಡೈರೆಕ್ಟರ್ ಆಗಿದ್ದು, ಜೊತೆಗೆ ಸಿಬಿಐ ಆಫೀಸರ್ ಪಾತ್ರವನ್ನೂ ಮಾಡಿದ್ದೇನೆ ಎಂದರು. ಮತ್ತೊಬ್ಬನಟಿ ಚಿತ್ರಾಲ್ ರಂಗಸ್ವಾಮಿ ನಾಯಕನ ಜಿಮ್ ತರಬೇತುದಾರಳಾಗಿ ನಟಿಸಿದ್ದಾರೆ. ವಿಶಾಲಜಯ ಅವರ ಜಿಮ್ ಟ್ರೈನರ್ ಮೊಹಮ್ಮದ್ ರಫಿ ಮಾತನಾಡಿ ವಿಶಾಲಜಯ ಅವರು ಚಿತ್ರಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ಚಿತ್ರದ ಕಂಟೆಂಟ್ ಜೊತೆಗೆ ಅವರು ಹಾಕುವ ಎಫರ್ಟ್ ಕೂಡ ಮುಖ್ಯವಾಗುತ್ತದೆ ಎಂದರು. ಹಿರಿಯನಟ ಗಣೇಶ ರಾವ್ ಮಾತನಾಡಿ ಮನುಷ್ಯನಲ್ಲಿರುವ ರಾಕ್ಷಸ ಗುಣಗಳನ್ನು ಮೆಟ್ಟಿನಿಲ್ಲುವವನೇ ಸುರಾರಿ. ಮೂರು ತಿಂಗಳಲ್ಲಿ ದೇಹ ಕರಗಿಸಿಕೊಳ್ಳುವುದು ಸುಲಭದ ಕೆಲಸವಲ್ಲ, ಇಂಥ ಚಿತ್ರಗಳಿಗೆ ಮಾದ್ಯಮದವರ ಪ್ರೋತ್ಸಾಹ ಬೇಕು ಎಂದರು. ಸಂಗೀತ ನಿರ್ದೇಶಕ ಅನಂತ ಆರ್ಯನ್ ಮಾತನಾಡಿ ಚಿತ್ರದಲ್ಲಿ ೬ ಹಾಡು, ೩ ಫೈಟ್ಸ್ ಇದ್ದು, ವಿಶಾಲ್ ಅವರು ಒನ್ ಮ್ಯಾನ್ ಆರ್ಮಿ ಆಗಿ ಇಡೀ ಚಿತ್ರವನ್ನು ನಡೆಸಿಕೊಂಡು ಬಂದಿದ್ದಾರೆ. ಬಾಡಿ ಟ್ರಾನ್ಸ್ ಫಾರ್ಮೇಷನ್ ಕಾನ್ಸೆಪ್ಟ್ ಹಾಡಿಗಷ್ಟೇ ಸೀಮಿತಗೊಳಿಸಿದ್ದಾರೆ. ಇದಲ್ಲದೆ ಚಿತ್ರದಲಿ ಲವ್, ಎಮೋಷನ್ಸ್ ಹೀಗೆ ಎಲ್ಲಾ ರೀತಿಯ ಮನರಂಜನಾತ್ಮಕ ಅಂಶಗಳೂ ಇದೆ ಎಂದರು.
ಇನ್ನು ಚಿತ್ರದ ಛಾಯಾಗ್ರಹಣವನ್ನು ಮನೋಹರ್ ಹಾಗೂ ವೀರೇಶ್ ಸೇರಿ ನಿರ್ವಹಿಸಿದ್ದಾರೆ. ಸತೀಶ್ ಚಂದ್ರಯ್ಯ, ನಿಶಿತಾ ಪೂಜಾರಿ ಅವರ ಸಂಕಲನ, ಕೌರವ ವೆಂಕಟೇಶ್-ಚಂದ್ರು ಬಂಡೆ ಅವರ ಸಾಹಸ ಸಂಯೋಜನೆ, ಬಾಲ-ಸೂರಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಇನ್ನು ಈ ಚಿತ್ರಕ್ಕೆ ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಮಾಗಡಿ ಹಾಗೂ ಚಿಂತಾಮಣಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.