ಉಂಡೆನಾಮ ವೆಂಕಿಯ ಮದುವೆ ಹಂಬಲಕ್ಕೆ ಕೋವಿಡ್ ಬ್ರೇಕ್ ! -3.5/ 5 ****
Posted date: 15 Sat, Apr 2023 07:28:37 PM
ನಟ ಕೋಮಲ್ ಬಹಳ ದಿನಗಳ ನಂತರ ನವಿರಾದ ಕಾಮಿಡಿ ಕಥಾಹಂದರ ಇರುವ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ವಾರ ತೆರೆಕಂಡಿರುವ ಉಂಡೆನಾಮ ಕೋಮಲ್ ಅವರಿಗಾಗಿಯೇ ಹೇಳಿ ಮಾಡಿಸಿದಂಥ ಕಥೆಯೇನೋ ಎನ್ನುವಷ್ಟು ಪರಿಣಾಮಕಾರಿಯಾಗಿದೆ. ಅಷ್ಟು ಚೆನ್ನಾಗಿ ಅವರ ಪಾತ್ರ ಮೂಡಿಬಂದಿದೆ. ವೆಂಕಿ ಎಂಬ  ಟೆಕ್ಕಿಯಾಗಿ ಕಾಣಿಸಿಕೊಂಡಿರುವ ಕೋಮಲ್ ಎಲ್ಲರಹಾಗೆ ತಾನೂ ಸಹ  ಮದುವೆಯಾಗಿ ಸಂಸಾರದ ಸುಖ ಕಾಣಬೇಕೆಂಬ ಬಯಕೆ ಇಟ್ಟುಕೊಂಡಿರುವ ವ್ಯಕ್ತಿ. ಆದರೆ ಆತನಿಗೆ ತಕ್ಕನಾದ  ಹುಡುಗಿಯನ್ನು ಹುಡುಕುವುದು ಆತನ  ತಂದೆ-ತಾಯಿಗೆ ದೊಡ್ಡ ಸವಾಲಾಗಿರುತ್ತದೆ. 
 
ಇನ್ನೇನು  ತಾನು ನೋಡಿಕೊಂಡು ಬಂದ  ಹುಡುಗಿ ಒಪ್ಪಿ, ಮದುವೆ ಆಗಬೇಕು ಅನ್ನುವಷ್ಟರಲ್ಲಿ ಆ ಮದುವೆ ಕ್ಯಾನ್ಸಲ್ ಆಗಿರುತ್ತದೆ. 
 
ಹೀಗೆ ಹತ್ತಾರು ಹುಡುಗಿಯರನ್ನು ನೋಡುವುದು, ಒಪ್ಪಿಕೊಳ್ಳುವುದು, ನಂತರ ಏನಾದರೂ ಒಂದು ಕಾರಣದಿಂದ  ಕಾರಣದಿಂದ ಮದುವೆ ಮುರಿದು ಬೀಳುವುದು  ಇದನ್ನೆಲ್ಲ ನೋಡಿ, ನೋಡಿ ಸಾಕಾಗಿ ಹೋದ  ವೆಂಕಿ, ಅದಕ್ಕಾಗಿ `ಅಡ್ಡದಾರಿ`ಯೊಂದನ್ನು ಕಂಡುಕೊಳ್ಳುತ್ತಾಾನೆ. ಇನ್ನೇನು  ಆ `ದಾರಿ`ಯಲ್ಲಿ ತಾನು  ಸವಾರಿ ಹೋಗಬೇಕು ಎನ್ನುವಷ್ಟರಲ್ಲಿ, ಅಲ್ಲಿ ನಡೆಯಬಾರದ ಘಟನೆಯೊಂದು ನಡೆದುಹೋಗುತ್ತದೆ. 
 
ಅದೇ ಸಂದರ್ಭದಲ್ಲಿ  ಎಲ್ಲಾಕಡೆ ಕೋವಿಡ್ ವ್ಯಾಪಿಸಿ  ಲಾಕ್‌ಡೌನ್ ಕೂಡ ಜಾರಿಯಾಗುತ್ತದೆ. ಆನಂತರ ಎಲ್ಲೂ ಹೋಗದಂತಾಗಿ  ಮನೆಯೊಳಗೇ ಲಾಕ್ ಆಗುವ ವೆಂಕಿ, ಏನೇನೆಲ್ಲ  ಪರಿಪಾಟಲುಗಳನ್ನು ಅನುಭವಿಸುತ್ತಾಾನೆ ಎನ್ನುವುದೇ `ಉಂಡೆನಾಮ` ಚಿತ್ರದ ಸಾರಾಂಶ. ಕೊನೆಗೂ ವೆಂಕಿಯ ಮದುವೆ ಆಯಿತೇ, ಆತನಿಗೆ ಎಂಥ ಹುಡುಗಿ ಸಿಗುತ್ತಾಳೆ ಎಂಬುದನ್ನು ಈ ಚಿತ್ರದ ಮೂಲಕ ನಿರ್ದೇಶಕ  ರಾಜಶೇಖರ್ ಹೇಳಿದ್ದಾರೆ. ಹೆಸರೇ ಹೇಳುವ ಹಾಗೆ ಇದೊಂದು ಪಕ್ಕಾ  ಕಾಮಿಡಿ ಶೈಲಿಯ ಸಿನಿಮಾ. ಹಾಸ್ಯದ  ಜೊತೆಗೆ ಸಣ್ಣದೊಂದು ಸಸ್ಪೆೆನ್ಸ್ , ಥ್ರಿಲ್ಲರ್ ಕಂಟೆಂಟ್ ಮೂಲಕ  ನಿರ್ದೇಶಕ ರಾಜಶೇಖರ್ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿದ್ದಾರೆ.   ಚಿತ್ರದ  ಮೊದಲರ್ಧದಲ್ಲಿ ಸರಾಗವಾಗಿ ಸಾಗುವ ಕಥೆ, ಸೆಕೆಂಡ್ ಹಾಫ್ ನಲ್ಲಿ ಬೇರೆಯದೇ ತಿರುವು ತೆರೆದುಕೊಳ್ಳುತ್ತದೆ. ಒಂದಷ್ಟು ಟ್ವಿಸ್ಟ್  ಅಂಡ್ ಟರ್ನ್ ಮೂಲಕ  ಮತ್ತೊಂದು ಆಯಾಮಕ್ಕೆೆ ತೆರೆದುಕೊಳ್ಳುತ್ತದೆ. 
 
ಮದುವೆಯಾಗಬೇಕೆಂದು  ಹಂಬಲಿಸುವ ಯುವಕನಾಗಿ, ಪೇಚಿಗೆ ಸಿಲುಕಿಕೊಂಡು  ಪರಿತಪಿಸುವ ವೆಂಕಿಯಾಗಿ ಕೋಮಲ್ ಪ್ರೇಕ್ಷಕರನ್ನು  ನಗಿಸುವಲ್ಲಿ  ಯಶಸ್ವಿಯಾಗಿದ್ದಾರೆ. ಕೋಮಲ್ ಜೊತೆ  ಹರೀಶ್ ರಾಜ್ ಸ್ನೇಹಿತನಾಗಿ ಸಾಥ್ ನೀಡಿದ್ದಾಾರೆ. ನಾಯಕಿಯ ಪಾತ್ರದಲ್ಲಿ  ಧನ್ಯಾ ಬಾಲಕೃಷ್ಣ ಲವಲವಿಕೆಯ ಅಭಿನಯ ನೀಡಿದ್ದಾಾರೆ. ಉಳಿದಂತೆ ನಟ  ತಬಲನಾಣಿ, ಅಪೂರ್ವ, ತನಿಷಾ ಕುಪ್ಪಂಡ, ವೈಷ್ಣವಿ, ಬ್ಯಾಂಕ್ ಜನಾರ್ಧನ್ ಇವರೆಲ್ಲ  ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಾಗಿ ನಿಭಾಯಿಸಿದ್ದಾರೆ.  ಬ್ಯಾಕ್ ಗ್ರೌಂಡ್ ಸ್ಕೋರ್ ಪರವಾಗಿಲ್ಲ, ಚಿತ್ರದಲ್ಲಿ ನವೀನ್ ಕುಮಾರ್ ಅವರ   ಛಾಯಾಗ್ರಹಣ ಉತ್ತಮವಾಗಿದೆ. ಚಮಕ್ ಖ್ಯಾತಿಯ ಡಾ. ಸಿ.ಆರ್.  ಚಂದ್ರಶೇಖರ್ ಅರ್ಪಿಸುವ ಈ ಚಿತ್ರವನ್ನು,  ಎನ್.ಕೆ. ಸ್ಟುಡಿಯೋಸ್ ಬ್ಯಾನರ್ ಮೂಲಕ  ಸಿ.ನಂದ ಕಿಶೊರ್ ಅವರು  ನಿರ್ಮಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed