ಸರ್ಕಾರಿ ಶಾಲೆಗಳನ್ನು ಉಳಿಸುವ ಯತ್ನದಲ್ಲಿ ಪ್ರವೀಣಾ
Posted date: 01 Sat, Apr 2023 03:27:54 PM
ಸರ್ಕಾರಿ ಶಾಲೆಗಳ ದುಸ್ಥಿತಿ ಅವುಗಳನ್ನು ಉಳಿಸುವ ಪ್ರಯತ್ನ  ಹಾಗೂ ಖಾಸಗಿ ಶಾಲೆಗಳ ಮಾಫಿಯಾ ಕಥೆಯನ್ನು ಒಳಗೊಂಡ ಸಾಕಷ್ಟು ಸಿನಿಮಾಗಳು  ಬಂದಿವೆ. ಇದೀಗ ಇಂಥದೇ ಅಂಶವನ್ನು ಇಟ್ಟುಕೊಂಡು ನಿರ್ಮಾಣವಾದ ಚಿತ್ರ `ಪ್ರವೀಣಾ`. ಏಪ್ರಿಲ್ 7ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಪ್ರದರ್ಶನ ಇತ್ತೀಚೆಗೆ ನಡೆಯಿತು.
 
ಈ ಸಂದರ್ಭದಲ್ಲಿ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹೇಶ್ ಸಿಂಧುವಳ್ಳಿ ಮಾತನಾಡುತ್ತ  ನಾನು ಈ ಹಿಂದೆ  `10ನೇ ತರಗತಿ` ಎಂಬ ಸಿನಿಮಾ ನಿರ್ದೇಶಿಸಿದ್ದೆ. ಇದು 2ನೇ ಚಿತ್ರ. `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು` ಸಿನಿಮಾ ನೋಡುವಾಗ ಈ  ಲೈನ್ ಹೊಳೆಯಿತು. ನನ್ನ ಲೈಫ್‌ನಲ್ಲಿ ನಡೆದ ಒಂದಿಷ್ಟು ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ ಎಂದು ಹೇಳಿದರು.
 
ಹಿರಿಯ ನಟ ಮಂಡ್ಯ ರಮೇಶ್ ಮಾತನಾಡಿ  ‘ಇದೊಂದು ಸದಭಿರುಚಿ ಸಿನಿಮಾ ಎನ್ನಬಹುದು. ಕಥೆ ಚೆನ್ನಾಗಿದ್ದು,  ಗ್ರಾಮ ಪಂಚಾಯತಿ ಸದಸ್ಯನ ಪಾತ್ರ ಮಾಡಿದ್ದೇನೆ. ಪಾತ್ರ ವಿಶೇಷವಾಗಿದೆ. ಜೊತೆಗೆ ಕಥೆಯ ಎಳೆ ತುಂಬಾ ಚೆನ್ನಾಗಿದೆ. ಈ  ಚಿತ್ರಕ್ಕೆ ಮಂಡ್ಯ, ಮೈಸೂರು ಸುತ್ತ ಮುತ್ತ ಶೂಟಿಂಗ್ ಮಾಡಿದ್ದೇವೆ ಎಂದರು. 

ನಂತರ ಚಿತ್ರದ ನಿರ್ಮಾಪಕ ಜಗದೀಶ್ ಕೆ.ಆರ್ . ಮಾತನಾಡುತ್ತ‌ `ನಾನು ಮೂಲತಃ ರಂಗಭೂಮಿ ಕಲಾವಿದ ಹಾಗೂ ರೈತ. ಈ ಹಿಂದೆ ‘ಹತ್ತನೇ ತರಗತಿ’ ಚಿತ್ರದಲ್ಲಿ ಅಭಿನಯಿಸಿದ್ದೆ. ನಿರ್ದೇಶಕರು ಬಂದು  ಈ ಕಥೆ ಹೇಳಿದಾಗ ಇಷ್ಟವಾಯ್ತು. ನಾವೇ ಏಕೆ ನಿರ್ಮಾಣ ಮಾಡಬಾರದು ಎಂದು ಫ್ಯಾಮಿಲಿ, ಗೆಳೆಯರ ಸಹಕಾರದಿಂದ ಈ ಸಿನಿಮಾ ನಿರ್ಮಿಸಿದ್ದೇವೆ.  `ಪ್ರವೀಣಾ` ಚಿತ್ರದಲ್ಲಿ ಮನರಂಜನೆಯ‌  ಜೊತೆಗೆ ಸರ್ಕಾರಿ ಶಾಲೆಗಳ ದುಸ್ಥಿತಿ ಹಾಗೂ ಖಾಸಗಿ ಶಾಲೆಗಳ ದಬ್ಬಾಳಿಕೆಯನ್ನು ಹೇಳುವ  ಪ್ರಯತ್ನ ಮಾಡಿದ್ದೇವೆ` ಎಂದರು.  
 
ಚಿತ್ರದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಯ ಪಾತ್ರ ಮಾಡಿರುವ ಶಶಿ ಮಾತನಾಡಿ, `ಇದರಲ್ಲಿ ನಾನು ಸರ್ಕಾರಿ ಶಾಲೆಯ ಹುಡುಗ ಖಾಸಗಿ ಶಾಲೆಗೆ ಹೋದಾಗ ಎನೆಲ್ಲಾ ಕಷ್ಟ ಅನುಭವಿಸುತ್ತಾನೆ ಎಂಬುದನ್ನು ಹೆಳುವ ಪಾತ್ರ ಮಾಡಿದ್ದೇನೆ’ ಎಂದರು. ಮುಖ್ಯ ಪಾತ್ರದಲ್ಲಿ ಐಶ್ವರ್ಯ ನಟಿಸಿದ್ದಾರೆ.   ರಂಗಭೂಮಿ ನಟಿ ವನಿತಾ ರಾಜೇಶ್ ಚಿತ್ರದಲ್ಲಿ ಪ್ರವೀಣನ ತಾಯಿಯ ಪಾತ್ರ ಮಾಡಿದ್ದು, `ಒಬ್ಬ ತಾಯಿ ಹಳ್ಳಿಯಲ್ಲಿ ಗಂಡ ಇಲ್ಲದೆ ಮಗನನ್ನು ಹೇಗೆ ಬೆಳೆಸುತ್ತಾಳೆ ಎಂಬುದನ್ನು ನನ್ನ ಪಾತ್ರದ ಮೂಲಕ ತೋರಿಸಲಾಗಿದೆ. ಇದು ಸರ್ಕಾರಿ ಶಾಲೆ ಖಾಸಗಿ ಶಾಲೆ ನಡುವಿನ ವ್ಯತ್ಯಾಸ ತೋರಿಸುವ ಸಿನಿಮಾ` ಎಂದರು. ನಿನಗಾಗಿ ವಿರು ಅವರ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸುರೇಶ್ ಡಿ.ಹೆಚ್. ಅವರ  ಸಂಕಲನ, ಮನೋಜ್ ಸಿ.ಎನ್ ಅವರ ಛಾಯಾಗ್ರಹಣವಿದೆ. ಚಿತ್ರದ ತಾರಾಗಣದಲ್ಲಿ ಮಂಡ್ಯ ರಮೇಶ್, ಮಾಸ್ಟರ್ ರೋಹಿತ್, ಶಶಿ ಗೌಡ, ಐಶ್ವರ್ಯ ಗೌಡ, ಮನು, ಗಗನ್ ಲಾಡ್, ಪುನೀತ್, ದಿಶಾ, ಸ್ನೇಹ, ನಾಗರತ್ನ ಮುಂತಾದವರಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed