ಅನೇಕ ವೈದ್ಯರುಗಳು ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ಇದೇ ಮೊದಲಬಾರಿಗೆ ನಾಟಿ ವೈದ್ಯರೊಬ್ಬರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವರೇ ಮಧುಸೂದನ್ ಕ್ಯಾತನಹಳ್ಳಿ. ಇವರ ನಿರ್ದೇಶನ ಹಾಗೂ ನಿರ್ಮಾಣದ ‘ಮಧುರ ಕಾವ್ಯ’ ಚಲನಚಿತ್ರ ಈವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆಯುರ್ವೇದ ಮತ್ತು ಅಲೋಪಥಿ ನಡುವೆ ನಡೆಯುವ ಸಂಘರ್ಷದ ಕಥೆಯನ್ನು ತೆರೆಮೇಲೆ ಹೇಳುತ್ತಿರುವ ಮಧುಸೂದನ್ ಅವರೇ ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ನಿಸ್ವಾರ್ಥದಿಂದ ರೋಗಿಗಳ ಸೇವೆ ಮಾಡುವ ಹಾಗೂ ಲಾಭಿ ನಡೆಸುವವರ ವಿರುದ್ದ ಹೋರಾಟ ನಡೆಸಿ ನಾಟಿವೈದ್ಯ ಪದ್ದತಿಯನ್ನು ರಕ್ಷಿಸುವಂಥ ನಾಟಿ ಮೈದ್ಯನ ಪಾತ್ರವದು.
ಹಣದ ಆಸೆಗಾಗಿ ಜನರಲ್ಲಿ ಇನ್ನಿಲ್ಲದ ಭಯ ಹುಟ್ಟಿಸುತ್ತಿರಯವ ಅಲೋಪತಿ ವೈದ್ಯರು, ತಮ್ಮ ಹಾದಿಗೆ ಮುಳ್ಳಾಗಿರುವ ನಾಟಿ ವೈದ್ಯರನ್ನು ಹೇಗೆ ಹತ್ತಿಕ್ಕುತ್ತಿದ್ದಾರೆ, ಪಾರಂಪರಿಕವಾಗಿ ಜನರ ಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ಹೇಗೆ ತುಳಿಯುತ್ತಿದ್ದಾರೆ ಎಂಬುದನ್ನು ನಿರ್ದೇಶಕ ಮಧುಸೂದನ್ ಅವರು ತಮಗಾದ ಅನುಭವಗಳನ್ನೇ ತೆರೆಮೇಲೆ ತಂದಿದ್ದಾರೆ.
ಹಿಂದಿನಿಂದಲೂ ನಿಸ್ವಾರ್ಥದಿಂದ ಜನರ ಸೇವೆ ಮಾಡಿಕೊಂಡು ಬಂದಿರುವ ಆಯುರ್ವೇದವನ್ನು ಉಳಿಸಬೇಕು, ನಾಟಿ ವೈದ್ಯ ಪದ್ದತಿ ಬೆಳೆಸಬೇಕು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದೇ ವಿಖ್ಯಾತ್ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನಾಯಕನ ತಾಯಿಯ ಪಾತ್ರದಲ್ಲಿ ಯಶೋಧ ಅವರು ಕಾಣಿಸಿಕೊಂಡಿದ್ದು, ಖಳನಾಯಕನಾಗಿ ರಾಜಕುಮಾರ್ ನಾವಿಕ, ಅಣ್ಣಪ್ಪಸ್ವಾಮಿ, ನಾಚಪ್ಪ, ಜಗನ್ನಾಥ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಸತೀಶ್ ಮೌರ್ಯ ಅವರ ಸಂಗೀತ ಸಂಯೋಜನೆ, ಉದಯಭಾಸ್ಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.