ಹಿರಿಯನಟ ಸುಚೇಂದ್ರ ಪ್ರಸಾದ್ ಅವರ ನಿರ್ದೇಶನದ ಮಾವು ಬೇವು ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರು, ಸಂಗೀತ ನಿರ್ದೇಶಕ ಸಿ.ಅಶ್ವತ್ಥ, ಎಲ್. ವೈದ್ಯನಾಥನ್ ಹಾಗೂ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಂಗಮದ ಹತ್ತು ಹಾಡುಗಳ ಸಂಗೀತಗುಚ್ಚ ಮಾವುಬೇವು ಅತ್ಯಂತ ಜನಪ್ರಿಯವಾಗಿತ್ತು, 40 ವರ್ಷಗಳ ನಂತರ ಅದೇ ಗೀತೆಗಳನ್ನು ಇಟ್ಟುಕೊಂಡು ಸುಚೇಂದ್ರ ಪ್ರಸಾದ್ ಅವರು ಈ ಚಿತ್ರವನ್ನು ನಿರೂಪಿಸಿದ್ದಾರೆ. ಏ.21ಕ್ಕೆ ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಶ್ರೀಸಾಯಿಗಗನ್ ಪ್ರೊಡಕ್ಷನ್ ಅಡಿ ಎಸ್.ರಾಜಶೇಖರ್ ಅವರು ನಿರ್ಮಿಸಿರುವ ಈ ಚಿತ್ರದ ಟ್ರೈಲರನ್ನು ಲಹರಿವೇಲು ರಿಲೀಸ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ದೊಡ್ಡರಂಗೇಗೌಡರು, ಈಗಿನ ಕಾಲದ ಹೆಣ್ಣುಮಕ್ಕಳು ಸ್ವಾತಂತ್ರವನ್ನು ಹೆಚ್ಚು ಇಷ್ಟಪಡುತ್ತಾರೆ, ಈ ಕಥೆಯಲ್ಲೂ ಹೆಣ್ಣು ತನಗನ್ನಿಸಿದ ರೀತಿ ಬದುಕಬೇಕೆಂದು ಹೊರಡುತ್ತಾಳೆ, ಪೇಕ್ಷಕ ಬೆಚ್ಚಿ ಬೀಳುವ ರೀತಿ ಆಕೆ ಬದಲಾಗ್ತಾ ಹೋಗ್ತಾಳೆ. ಹೀಗೆ ಸಾಗುವ ಕಥೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ಹತ್ತೂ ಹಾಡುಗಳನ್ನು ನಿರ್ದೇಶಕರು ಬಳಸಿಕೊಂಡಿದ್ದಾರೆ. ನಾನು ಅಶ್ವಥ್ ಈ ಹಾಡುಗಳನ್ನಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಬೇಕು ಅಂತ ಆಗಲೇ ಯೋಚಿಸಿದ್ದೆವು. ಆಗಿರಲಿಲ್ಲ, 40 ವರ್ಷಗಳ ನಂತರ ಆ ಕನಸು ನನಸಾಗಿದೆ, ಚಿತ್ರದಲ್ಲಿ ಶ್ರೀನಿವಾಸಮೂರ್ತಿ ಹಾಗೂ ಸುಂದರಶ್ರೀ ಅವರ ಪಾತ್ರಗಳು ನೋಡುಗರನ್ನು ಕಾಡುತ್ತವೆ ಎಂದು ಹೇಳಿದರು,
ನಂತರ ಲಹರಿ ವೇಲು ಮಾತನಾಡಿ 40 ವರ್ಷಗಳ ಹಿಂದೆ ಹೆಚ್.ಎಂ.ಮಹೇಶ್ ಅವರ ಮಾಸ್ಟರ್ ರೆಕಾರ್ಡಿಂಗ್ ಕಂಪನಿಯಲ್ಲಿ ಈ ಕ್ಯಾಸೆಟ್ ರಿಲೀಸಾಗಿತ್ತು, ೪ ವರ್ಷಗಳ ಹಿಂದೆ ಸಂಗೀತಾ ಕಂಪನಿಯ ಸಂಪೂರ್ಣ ಹಕ್ಕುಗಳನ್ನು ನಾವು ಪಡೆದುಕೊಂಡ ನಂತರ ಬಿಡುಗಡೆ ಮಾಡಿದ ಮೊದಲ ಆಲ್ಬಂ ಮಾವು ಬೇವು. ಈವರೆಗೆ ನಾವು ರಿಲೀಸ್ ಮಾಡಿದ ಹಾಡುಗಳಲ್ಲಿ ಮಾವು ಬೇವು ಹೆಚ್ಚು ಜನಪ್ರಿಯವಾಗಿತ್ತು, ಅದು ಈ ರೀತಿ ಸಿನಿಮಾ ಆಗುತ್ತೆ ಅಂದುಕೊಂಡಿರಲಿಲ್ಲ, ರಾಜಶೇಖರ್ ಅವರು ಬಂದು ನನ್ನನ್ನು ಕೇಳಿದಾಗ ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಹಾಡು ಬಳಸಿಕೊಳ್ಳಲು ಒಪ್ಪಿಗೆ ಕೊಟ್ಟೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲ ದಿಗ್ಗಜರು ಸಿನಿಮಾನೋಡಿ ಮೆಚ್ಚಿ ಮಾತಾಡುತ್ತಿದ್ದಾರೆ ಎಂದು ಹೇಳಿದರು,
ನಿರ್ಮಾಪಕ ರಾಜಶೇಖರ್ ಮಾತನಾಡಿ 6 ವರ್ಷದ ಹಿಂದೆ ನಮ್ಮ ಸಾಯಿಗಗನ್ ಪ್ರೊಡಕ್ಷನ್ ನಿಂದ ಮೊದಲ ಸಿನಿಮಾ ಮಾಡಿದ್ದೆ, ಅದರ ಫಲಿತಾಂಶ ನೋಡಿದಾಗ ಈಗೇಕಾಯ್ತು ಎನಿಸಿತ್ತು. ನಂತರ ನೇತ್ರದಾನದ ಬಗ್ಗೆ ವೈಟ್ ಎಂಬ ಸಿನಿಮಾ ಮಾಡಿದಾಗ ಸಿಕ್ಕ ಪ್ರಶಂಸೆ ತೃಪ್ತಿ ತಂದಿತು. ಈ ಚಿತ್ರ ನನ್ನ ಮೂರನೇ ಪ್ರಯತ್ನ. ಸುಚೇಂದ್ರ ಪ್ರಸಾದ್ ಅವರು ತುಂಬಾ ಕಡಿಮೆ ಸಮಯದಲ್ಲಿ _ಸಿನಿಮಾ ಮಾಡಿಕೊಟ್ಟಿದ್ದಾರೆ, ಅದ್ಭುತವಾದ ದೃಶ್ಯಕಾವ್ಯದಂತೆ ಮೂಡಿಬಂದಿದೆ. ಹಣ ಗಳಿಸಬೇಕೆಂದಿದ್ದರೆ ನಾನು ಈ ಸಿನಿಮಾ ಮಾಡುತ್ತಿರಲಿಲ್ಲ ಎಂದು ಹೇಳಿದರು. ಕಲಾವಿದರಾದ ಸಂದೀಪ್, ಚೈತ್ರಾ, ಡಾ.ಕಿಶೋರ್, ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಇತರರು ವೇದಿಕೆಯಲ್ಲಿದ್ದರು. ದೀಪಕ್ ಪರಮಶಿವಯ್ಯ ಅವರ ಸಂಗೀತ ಸಂಯೋಜನೆ, ನಾಗರಾಜ ಆದ್ವಾನಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಡ್ಯಾನಿ ಕುಟ್ಟಪ್ಪ, ಸುಪ್ರಿಯಾ ಎಸ್.ರಾವ್, ರಂಜಿತಾ, ಸಿತಾರ ಚಕ್ರವರ್ತಿ, ರಂಜನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.