``ಕರ್ಕಿ``ಚಿತ್ರದಲ್ಲಿ ಜಾತಿ- ಸಮಾನತೆಯ ಸಂದೇಶ ಜಯಪ್ರಕಾಶ್ ರೆಡ್ಡಿ ನಾಯಕನಾಗಿ ಎಂಟ್ರಿ !
Posted date: 29 Mon, Jul 2024 01:41:26 PM
ಕೆಳವರ್ಗದ ಯುವಕನೊಬ್ಬ ತನ್ನ ಜೀವನದ ಹಾದಿಯಲ್ಲಿ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾನೆ, ಅವುಗಳನ್ನೆಲ್ಲ ಮೆಟ್ಟಿ ನಿಂತು ಹೇಗೆ ಸಾಧನೆ ಮಾಡುತ್ತಾನೆ ಎಂಬುದನ್ನು ನಿರ್ದೇಶಕ ಪವಿತ್ರನ್ ಅವರು ಕರ್ಕಿ ಚಿತ್ರದ ಮೂಲಕ ಹೇಳಹೊರಟಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಬಾಲನಟನಾಗಿ ಎಂಟ್ರಿ ಕೊಟ್ಟಿದ್ದ ಜಯಪ್ರಕಾಶ್ ರೆಡ್ಡಿ ಅವರು `ಕರ್ಕಿ` ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ನಾಯಕನಾಗಿ ಮಿಂಚಲು ರೆಡಿಯಾಗಿದ್ದಾರೆ. 

ಸಮಾಜಕ್ಕೆ ಸಮಾನತೆಯ ಸಂದೇಶ ನೀಡುವುದು ಹಾಗೂ ಜಾತಿ ವ್ಯವಸ್ಥೆಯಿಂದ ಕೆಲವು ಪ್ರದೇಶಗಳಲ್ಲಿ ನಡೀತಿರುವ  ಶೋಷಣೆಗಳ ಸುತ್ತ ಸಾಗುವ ಕಥೆಯನ್ನು  `ಕರ್ಕಿ`ಚಿತ್ರದಲ್ಲಿ ಹೇಳಲಾಗಿದೆ. ಇಂಥ ಸಾಕಷ್ಟು  ಸೂಕ್ಷ್ಮ ಅಂಶಗಳನ್ನು ಒಳಗೊಂಡಿರುವ ಈ  ಚಿತ್ರದಲ್ಲಿ  ಸಮಾಜದಲ್ಲಿರುವ ಕೆಲವು ವ್ಯವಸ್ಥೆಗಳ ಬಗ್ಗೆ ಬೆಳಕು ಚೆಲ್ಲುವಂತಹ  ಒಂದು ಸಂದೇಶವನ್ನೂ ಹೇಳಲಾಗಿದೆ. 
 
ಈ ಚಿತ್ರದಲ್ಲಿ `ಕರ್ಕಿ` ಹೆಸರಿನ ಕಪ್ಪು ನಾಯಿಯೊಂದು ಮುಖ್ಯ ಪಾತ್ರ ನಿರ್ವಹಿಸಿದೆ. ಸುಮಾರು  ಎರಡು ವರ್ಷಗಳಿಂದ ಈ ಚಿತ್ರದ ಕೆಲಸ ನಡೆಯುತ್ತಿದ್ದು ಚಿತ್ರವೀಗ ಬಿಡುಗಡೆಯ ಹಂತ ತಲುಪಿದೆ.
 
ತಮಿಳಿನಲ್ಲಿ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಪವಿತ್ರನ್ ಅವರು, `ಕರ್ಕಿ` ಸಿನಿಮಾ  ನಿರ್ದೇಶನದ ಮೂಲಕ  ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶಿವಮೊಗ್ಗ ದಾವಣಗೆರೆ, ಹುಬ್ಬಳ್ಳಿ, ಬಂಗಾರಪೇಟೆ, ಕೆಜಿಎಫ್, ಬೆಂಗಳೂರು, ಚನ್ನಪಟ್ಟಣ, ಕೋಲಾರ ಹಾಗೂ ಬಾಗಲಕೋಟೆ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ನಾಯಿ ಅಭಿನಯದ ದೃಶ್ಯವನ್ನು ತಿರುನೆಲ್ವೇಲಿಯಲ್ಲಿ ಶೂಟ್ ಮಾಡಲಾಗಿದೆ. ಈಗಾಗಲೇ  ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಸೆನ್ಸಾರ್ ನಿಂದ ಯು/ಎ ಪ್ರಮಾಣ ಪಡೆದು ರಿಲೀಸ್‌ಗೆ ಸಿದ್ದವಾಗಿದ್ದು, ಸೆಪ್ಟೆಂಬರ್ ನಲ್ಲಿ ಚಿತ್ರವನ್ನು  ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.
 
ಬಾಲಿವುಡ್‌ನಲ್ಲಿ ಕರಣ್ ಜೋಹರ್ ಅವರ  `ಧಡಕ್ 2`ಹಾಗೂ ಕನ್ನಡದ `ಕರ್ಕಿ` ಚಿತ್ರದ ಕಾನ್ಸೆಪ್ಟ್ ಎರಡೂ  ಒಂದೇ ರೀತಿಯಿದೆ ಎಂದಿರುವ ಜೆಪಿ, ಬೇರೆ ಬೇರೆ ಜಾತಿಯ  ಹುಡುಗ ಮತ್ತು ಹುಡುಗಿ, ಸ್ನೇಹಿತರಾಗಿಯೂ‌ ಇರಬಹುದು, ಅವರ ಮಧ್ಯೆ ಪ್ರೀತಿಯೇ ಇರಬೇಕೆಂಬ ನಿಯಮವಿಲ್ಲ ಗೆಳೆತನ ಇದ್ದರೆ ತಪ್ಪೇನೂ ಇಲ್ಲ ಎಂಬ ಅಂಶಗಳು ಇವೆರಡೂ ಚಿತ್ರದಲ್ಲಿವೆ  ಎಂದಿದ್ದಾರೆ. 
 
`ಕರ್ಕಿ` ಚಿತ್ರದಲ್ಲಿ ಮೀನಾಕ್ಷಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಸಾಧು ಕೋಕಿಲ, ಬಲ ರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ ಸೇರಿದಂತೆ ಅನೇಕ ಕಲಾವಿದರು ಉಳಿದ ಪಾತ್ರಗಳಲ್ಲಿ  ನಟಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ, ಶ್ರೀ ಅವರ  ಸಂಕಲನ ಹಾಗೂ ರಿಷಿಕೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed