`ಇನ್ನೂನೂ ಬೇಕಾಗಿದೆ` ಎನ್ನುತ್ತಾ ಮುಂದಿನ ನಿಲ್ದಾಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಾಸುಕಿ ವೈಭವ್!
Posted date: 30 Mon, Sep 2019 10:36:51 PM
ಈ ವಾಸುಕಿಯೊಮ್ಮೆ ಕಚ್ಚಿಬಿಟ್ಟರೆ ಸಾಕು, ಕನ್ನಡ ಸಂಗೀತ ಸಾಹಿತ್ಯದ ವೈಭವವು ಮೈಯೆಲ್ಲಾ ವ್ಯಾಪಿಸಿಕೊಳ್ಳುತ್ತದೆ! ನಿಜ, ವಾಸುಕಿ ವೈಭವ್ ಎಂಬ ಹೆಸರಿನ ಈ ಕಲಾವಿದರು ಸಂಗೀತದಲ್ಲಿ ಮಾಡುವ ಮೋಡಿಯೇ ಅಂತಹದ್ದು! ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹುಟ್ಟಿಬೆಳೆದ ಇವರು ಒಬ್ಬ ಹಾಡುಗಾರರೂ ಹೌದು, ಸಂಗೀತ ನಿರ್ದೇಶಕರೂ ಹೌದು. ಮೌಲ್ಯಾಧಾರಿತ ಕಥೆಯೊಂದನ್ನು ಹೊತ್ತು ತಂದ "ರಾಮ ರಾಮ ರೇ" ಎಂಬ ಚಿತ್ರದ ಮೂಲಕ ಇವರು ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ಚಿತ್ರಕ್ಕಾಗಿ ಅವರು ನೀಡಿದ ಸಂಗೀತದ ಕಾಣಿಕೆಯು ಬಹಳಷ್ಟು ಜನ ಮೆಚ್ಚುಗೆಯನ್ನು ಪಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಅದರ ಜೊತೆಯಲ್ಲಿಯೇ, ಶತ ದಿನಗಳನ್ನು ಮೀರಿ ಮುನ್ನಡೆದು ಕನ್ನಡ ಚಿತ್ರ ರಸಿಕರ ಮನಸ್ಸನ್ನು ಸೂರೆಗೊಳಿಸಿದ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ" ಚಿತ್ರಕ್ಕಾಗಿ ಅವರು ನಿರ್ದೇಶಿಸಿದ ಹಾಡು ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನೇ ತಂದುಕೊಟ್ಟಿದೆ!
ವಾಸುಕಿ ವೈಭವ್ ಎಂಬ ಈ ಯುವ ಕಲಾವಿದರು ಕನ್ನಡಿಗರ ಮನೆ ಮಾತಾಗಿರುವುದು ತಮ್ಮ ಸಂಗೀತ ನಿರ್ದೇಶನದಿಂದಲಾಗಿ ಮಾತ್ರವಲ್ಲ; ಹಾಡುಗಾರಿಕೆಯಿಂದಲೂ ಕೂಡಾ! ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ಅವರು ಹಾಡಿರುವ ಕಾಗದದ ದೋಣಿಯಲ್ಲಿ ಎಂಬ ಹಾಡು ಕಲಾರಸಿಕರ ನಾಲಿಗೆಯ ತುದಿಯಲ್ಲಿ ಇಂದಿಗೂ ನಲಿದಾಡುತ್ತಲೇ ಇರುವುದು ಅವರ ಕಂಠ ಸಿರಿಗೆ ಹಿಡಿದ ಕೈಗನ್ನಡಿ.

ಕೆಲವೇ ಕೆಲವು ಕಲಾವಿದರಿಗೆ ಮಾತ್ರವೇ ಹುಟ್ಟಿನಿಂದಲೇ ಸರಸ್ವತಿಯು ಅನುಗ್ರಹಿಸಿರುತ್ತಾಳೆ. ಅಂತಹಾ ಅನುಗ್ರಹೀತ ಕಲಾವಿದರಲ್ಲಿ ಒಬ್ಬರಾದ ವಾಸುಕಿ ವೈಭವ್ ಅವರು ಪ್ರಾಜೆಕ್ಟ್ ಗಳನ್ನು ಆಯ್ದುಕೊಳ್ಳುವಲ್ಲಿ ಅತ್ಯಂತ ಕಟ್ಟುನಿಟ್ಟು. ನೈಜ ಸಂಗೀತಕ್ಕೆ ಕುತ್ತು ಬರದಂತೆ, ಸಂಗೀತ ರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಬಲ್ಲ ಹಾಡುಗಳಿಗೆ ಎಲ್ಲಿ ಅವಕಾಶವಿದೆಯೋ, ಅಲ್ಲಿ ಅವರು ಮುಂದೆ ನಿಂತು ಪ್ರೋತ್ಸಾಹಿಸುತ್ತಾರೆ. 
ಕನ್ನಡ ಚಿತ್ರರಂಗದಲ್ಲಿ ಅವರ ಧ್ವನಿ ಮತ್ತೊಮ್ಮೆ ಮೊಳಗುವುದಕ್ಕೆ ಇದೀಗ ಕಾಲ ಸನ್ನಿಹಿತವಾಗಿದೆ. *ಮನಸೇ ಮಾಯ* ಎಂಬ ವಿಭಿನ್ನ ಹಾಡಿನೊಂದಿಗೆ ಕನ್ನಡಿಗರ ಮನವನ್ನು ಗೆದ್ದ *ಮುಂದಿನ ನಿಲ್ದಾಣ* ಎಂಬ ಚಿತ್ರದ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಯೇ ಇಲ್ಲ!
ಆ ಚಿತ್ರಕ್ಕಾಗಿ *ಇನ್ನೂನೂ ಬೇಕಾಗಿದೆ* ಎನ್ನುವ ಸುಮಧುರವಾದ ಹಾಡೊಂದಕ್ಕೆ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಅಪ್ಪಟ ಹಿಂದೂಸ್ತಾನೀ ಟಚ್'ನೊಂದಿಗೆ ಆ ಹಾಡನ್ನು ಸ್ವತಃ ತಾವೇ ಹಾಡಿದ್ದಾರೆ ಕೂಡಾ! ಚಿತ್ರದ ಪ್ರಮುಖ ಪಾತ್ರಗಳಲ್ಲಿರುವ ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ ಕಶ್ಯಪ್ ಅವರ ಅಭಿನಯದೊಂದಿಗೆ, ಪ್ರಮೋದ್ ಮರವಂತೆ ಅವರ ಮನಮೋಹಕ ಸಾಹಿತ್ಯವನ್ನೂ ಹೊಂದಿರುವ ಈ ಹಾಡು ಯೂಟ್ಯೂಬ್ ಚ್ಯಾನೆಲ್ ನಲ್ಲಿ ಅದಾಗಲೇ ಬಿಡುಗಡೆಗೊಂಡು ಮಿಂಚುತ್ತಿದೆ!  
ವಿನಯ್ ಭಾರದ್ವಾಜ್ ಅವರ ನಿರ್ದೇಶನ, ಅಭಿಮನ್ಯು ಸದಾನಂದನ್ ಅವರ ಸಿನೆಮಾಟೋಗ್ರಫಿ, ಹಾಗೂ ರೆಡ್ ಚಿಲ್ಲೀಸ್ ಅವರ ಬಣ್ಣ ವಿನ್ಯಾಸದೊಂದಿಗೆ ಒಂದು ದೃಶ್ಯಕಾವ್ಯವಾಗಿ ಮೂಡಿ ಬಂದಿರುವ ಈ ಹಾಡನ್ನು ಪಿ.ಆರ್.ಕೆ ಆಡಿಯೋ ತನ್ನ ಯೂಟ್ಯೂಬ್ ಚ್ಯಾನೆಲ್ ನಲ್ಲಿ ಬಿಡುಗಡೆಗೊಳಿಸಿದೆ.

ದೃಶ್ಯಗಳಲ್ಲಿಯ ಹೊಸತನ, ಮನ ಮುಟ್ಟುವ ನಿರೂಪಣೆ, ವಾಸುಕಿ ವೈಭವ್ ಅವರ ಹೃದಯಂಗಮವಾದ ಹಾಡುಗಾರಿಕೆ..ಈ ಎಲ್ಲದರ ಜೊತೆ ಜೊತೆಗೆ, ಪ್ರವೀಣ್ ತೇಜ್ ಹಾಗೂ ರಾಧಿಕಾ ನಾರಾಯಣ್ ಅವರ ಮನಮೋಹಕ ಕೆಮಿಸ್ಟ್ರಿಯೊಂದಿಗೆ ನಮ್ಮೆಲ್ಲರ ಕಣ್ಣು, ಕಿವಿಗಳಿಗೆ ಹಬ್ಬವಾಗಿರುವ ಈ ಹಾಡು ಅದಾಗಲೇ ಜಾಲತಾಣಗಳಲ್ಲಿ ಸಂಚಲನವನ್ನು ಮೂಡಿಸಿದೆ. ಇಷ್ಟೆಲ್ಲಾ ವೈಶಿಷ್ಟ್ಯತೆ ಗಳೊಂದಿಗೆ ಬಿಡುಗಡೆಗೊಂಡ ಈ ಹಾಡು ಈ ವರ್ಷದ ಅತ್ಯುತ್ತಮ ಪ್ರೇಮಗೀತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಎಲ್ಲಾ ಸಾಧ್ಯತೆಗಳನ್ನೂ ಹೊಂದಿದೆ ಎನ್ನುತ್ತಾರೆ ಕಲಾರಸಿಕರು!

ಅಂದ ಹಾಗೆ, ಕನ್ನಡಿಗರು ಕಾತುರದಿಂದ ಕಾಯುತ್ತಿರುವ ಈ ಮುಂದಿನ ನಿಲ್ದಾಣ ಚಿತ್ರವು ನವೆಂಬರ್ ಮೊದಲ ವಾರದಲ್ಲಿ ತೆರೆ ಕಾಣಲಿದೆ!


Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಇನ್ನೂನೂ ಬೇಕಾಗಿದೆ` ಎನ್ನುತ್ತಾ ಮುಂದಿನ ನಿಲ್ದಾಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಾಸುಕಿ ವೈಭವ್! - Chitratara.com
Copyright 2009 chitratara.com Reproduction is forbidden unless authorized. All rights reserved.