ಕನ್ನಡ ಚಿತ್ರರಂಗದಲ್ಲೀಗ ಹೊಸತನ ಹಾಗೂ ಪ್ರಯೋಗಾತ್ಮಕ ಸಿನಿಮಾಗಳ ಅಲೆ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಚಿತ್ರ ಧರ್ಮಂ..ಒಂದಷ್ಟು ಯುವ ಸಿನಿಮೋತ್ಸಾಹಿ ತಂಡ ಕೈ ಜೋಡಿಸಿರುವ ಧರ್ಮಂ ಸಿನಿಮಾದ ಪೋಸ್ಟರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಕಂಬಿ ಹಿಂದೆ ಇಟ್ರೂ ನಮ್ ಖದರ್ ಕಮ್ಮಿ ಆಗಲ್ಲ, ಹಿಂದೂಗಳಾಗಿ ಹುಟ್ಟಿದಿವಿ ಹಿಂದೆ ಸರಿಯೋ ಮಾತೇ ಇಲ್ಲಾ ಎಂಬ ಮಾಸ್ ಡೈಲಾಗ್ ಪೋಸ್ಟರ್ ನಲ್ಲಿ ನಾಯಕ ಶಶಿ ಕೈಗೆ ಕೋಳ ತೊಡಿಸಿ ಅರ್ಧಮುಖ ತೋರಿಸಲಾಗಿದೆ. ಸಣ್ಣದೊಂದು ಬಿಟ್ ಸೌಂಡ್ ನೋಡುಗರ ಗಮನ ಸೆಳೆಯುತ್ತಿರುವ ಪೋಸ್ಟರ್ ನೋಡ್ತಿದ್ರೆ, ಧರ್ಮ ಮತ್ತು ಜಾತಿ ವಿಷಯಗಳನ್ನ ಹೊತ್ತುಕೊಂಡು ತೆರೆಗೆ ಬರುತ್ತಿರುವ ಸಿನಿಮಾನಾ ಎಂಬ ನಿರೀಕ್ಷೆ ಹುಟ್ಟು ಹಾಕಿದೆ.
ಅಸೋಸಿಯೇಟ್ ಡೈರೆಕ್ಟರ್ ಆಗಿ ಅನುಭವವಿರುವ ನಾಗಮುಖ ಧರ್ಮಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಕನಸು..ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನಾಗಮುಖ, ಪ್ರೇಕ್ಷಕರಿಗೆ ಹೊಸಬಗೆಯ ಕಂಟೆಂಟ್ ಉಣಬಡಿಸುವ ತವಕದಲ್ಲಿದ್ದಾರೆ. ಸತ್ಯ ಘಟನೆಯಾಧಾರಿತ ಸಿನಿಮಾವಾಗಿರುವ ಧರ್ಮಂನಲ್ಲಿ ಶಶಿ ನಾಯಕನಾಗಿ ಬಣ್ಣ ಹಚ್ಚಿದ್ದು, ವರಿಣಿಕಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸರವಣ ಸಂಗೀತ, ವಿನೋದ್ ಕುಮಾರ್ ಸಂಕಲನ, ನಾಗಶೆಟ್ಟಿ ಛಾಯಾಗ್ರಹಣ ಸಿನಿಮಾಕ್ಕಿದೆ. ಶಾಂತಾ ಸಿನಿಮಾಸ್ ನಡಿ ಎಸ್ ಕೆ ರಾಮಕೃಷ್ಣ ನಿರ್ಮಾಣ ಮಾಡಿರುವ ಧರ್ಮಂ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀಘ್ರದಲ್ಲಿ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.