ಕಣ್ಣಪ್ಪ ಸಿನಿಮಾದಿಂದ ಹೊಸ ಅಪ್ಡೇಟ್ ಬಂದಿದೆ. ಕಣ್ಣಪ್ಪ ಚಿತ್ರದ ನಾಯಕ ವಿಷ್ಣು ಮಂಚು ಅವರ ಮಗ ಮತ್ತು ಮೋಹನ್ ಬಾಬು ಅವರ ಮೊಮ್ಮಗ ಅವ್ರಾಮ್ ಮಂಚು ಇದೀಗ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾನೆ. ಈ ಮೂಲಕ ಮೋಹನ್ ಬಾಬು ಕುಟುಂಬದ ಮೂರನೇ ತಲೆಮಾರು ಟಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದೆ. ಅದೂ ಅಪ್ಪನ ಸಿನಿಮಾದಲ್ಲಿ ಎಂಬುದು ವಿಶೇಷ. ಕಣ್ಣಪ್ಪ ಚಿತ್ರದಲ್ಲಿ ನಾಯಕನ ಬಾಲ ಪಾತ್ರಧಾರಿಯಾಗಿ ಅವ್ರಾಮ್ ಕಾಣಿಸಿಕೊಳ್ಳಲಿದ್ದಾನೆ.
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಣ್ಣಪ್ಪ ಚಿತ್ರದಿಂದ ಅವ್ರಾಮ್ ಮಂಚುವಿನ ಫಸ್ಟ್ ಲುಕ್ ಬಿಡುಗಡೆ ಮಾಡಿದೆ ಚಿತ್ರತಂಡ. ಅಪ್ಪ ವಿಷ್ಣು ಮಂಚು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು, ಹ್ಯಾಪಿ ಜನ್ಮಾಷ್ಟಮಿ, ಕಣ್ಣಪ್ಪ ಚಿತ್ರದ ಮೂಲಕ ನನ್ನ ಮಗನನ್ನು ಲಾಂಚ್ ಮಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಫಸ್ಟ್ ಲುಕ್ ಸಮೇತ ಪೋಸ್ಟ್ ಹಂಚಿಕೊಂಡಿದ್ದಾರೆ.
ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಮೋಹನ್ಲಾಲ್, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಬಾಬು ಶರತ್ಕುಮಾರ್, ಬ್ರಹ್ಮಾನಂದಂ ಮತ್ತು ಕಾಜಲ್ ಅಗರ್ವಾಲ್ ಸೇರಿದಂತೆ ದೊಡ್ಡ ತಾರಾಗಣವಿದೆ. 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಕಣ್ಣಪ್ಪ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಬಿಗ್ಬಜೆಟ್ನ ಈ ಸಿನಿಮಾದ ಬಹುಪಾಲು ಚಿತ್ರೀಕರಣವನ್ನು ನ್ಯೂಜಿಲೆಂಡ್ನಲ್ಲಿ ಶೂಟ್ ಮಾಡಲಾಗಿದೆ.
ಈ ಕುರಿತು ಮಾತನಾಡಿದ ವಿಷ್ಣು, "ಬಾಲ ಕಣ್ಣಪ್ಪನಾಗಿ ಅವ್ರಾಮ್ ಹೆಜ್ಜೆ ಹಾಕುವುದನ್ನು ನೋಡುವುದು ನನಗೆ ಭಾವನಾತ್ಮಕ ಅನುಭವವಾಗಿದೆ. ಈ ಚಿತ್ರವು ನಮ್ಮ ಕುಟುಂಬದಲ್ಲಿ ತಲೆಮಾರುಗಳ ಕನಸಾಗಿದೆ. ಅದರಲ್ಲೂ ಈ ಚಿತ್ರದ ಮೂಲಕ ಅವ್ರಾಮ್ ಅವರನ್ನು ಜಗತ್ತಿಗೆ ಪರಿಚಯಿಸಲು ನನಗೆ ಹೆಮ್ಮೆ ಇದೆ. ಅಪ್ರತಿಮ ಪಾತ್ರ. ಪರದೆಯ ಮೇಲೆ ಅವನ ಮ್ಯಾಜಿಕ್ ಅನ್ನು ನೋಡಲು ಎಲ್ಲರಂತೆ ನಾನೂ ಕಾತರದಲ್ಲಿದ್ದೇನೆ" ಎಂದಿದ್ದಾರೆ.