ಜನುಮದ ಜಾತ್ರೆ ಆಡಿಯೋ ಬಿಡುಗಡೆ
Posted date: 06 Wed, Nov 2019 09:24:58 AM

ಒಬ್ಬ ಆಟೋ ಚಾಲಕನಾಗಿ ಕೆಲಸ ಮಾಡುತ್ತಲೇ ಚಿತ್ರರಂಗದಲ್ಲಿಯೂ ತೊಡಗಿಕೊಂಡು ಚಿತ್ರವೊಂದನ್ನು ನಿರ್ದೇಶಿಸಿರುವ ಆಟೋ ಆನಂದ್ ತಮ್ಮ ಚಿತ್ರಕ್ಕೆ ಜನುಮದ ಜಾತ್ರೆ ಎನ್ನುವ ಹೆಸರಿಟ್ಟಿದ್ದಾರೆ. ಈ ಚಿತ್ರದ ಆಡಿಯೋ ಹಾಗೂ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ನಟ ನವೀನ್ ಕೃಷ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚಿತ್ರದ ಹಾಡುಗಳನ್ನು ಹೊರತಂದರು. ಇದೇ ಮೊದಲಬಾರಿಗೆ ನಿರ್ದೇಶನಕ್ಕೆ ಕೈಹಾಕಿರುವ ಆನಂದ್ ಅವರು ಈ ಚಿತ್ರದ  ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಕೂಡ ರಚಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದೆ. ಹಳ್ಳಿಯಲ್ಲಿನ ದುಷ್ಟಶಕ್ತಿಯೊಂದು ನಾಯಕನ ಕುಟುಂಬಕ್ಕೆ ಯಾವರೀತಿ ತೊಂದರೆ ಕೊಡುತ್ತೆ, ಅದರಿಂದ ಆ ಕುಟುಂಬ ಹಾಗೂ ಪ್ರೇಮಿಗಳು ಹೇಗೆ ಹೊರಬಂದರು ಎನ್ನುವುದೇ ಈ ಚಿತ್ರದ ಕಥೆ. ಸುಖ ಬಂದಾಗ ಹಿಂದಿನ ಕಷ್ಟವನ್ನು ಮರೆಯಬೇಡಿ ಎನ್ನುವುದೇ ನಮ್ಮ ಚಿತ್ರದ ಸಂದೇಶ ಎಂದು ಸಮಾರಂಭದಲ್ಲಿ ನಿರ್ದೇಶಕ ಆನಂದ್ ಚಿತ್ರದ ಕುರಿತಂತೆ ಹೀಗೆ ಮಾಹಿತಿ ಕೊಟ್ಟರು. ಇನ್ನು ಚಿತ್ರದ ನಾಯಕನಾಗಿ ಮದನ್‌ಕುಮಾರ್, ನಾಯಕಿಯಾಗಿ ಚೈತ್ರಾ ಅಭಿನಯಿಸಿದ್ದು, ಮತ್ತೊಂದು ಜೋಡಿಯಾಗಿ  ಮಂಡ್ಯ ಕೆಂಪ ಹಾಗೂ ಅಂಜಲಿ ನಟಿಸಿದ್ದಾರೆ. ಮುಂಜಾನ್ ಮಂಜು ಅವರ ಛಾಯಾಗ್ರಹಣ ಹಾಗೂ ವಿನು ಮನಸು ಅವರ ಸಂಗೀತ ಸಂಯೋಜನೆ ಈ ಚಿತ್ರದ ಹಾಡುಗಳಿಗಿದೆ.

ಸೆನ್ಸಾರ್‌ಗೆ ಹೋಗಲು ಸಿದ್ದವಾಗಿರುವ ಈ ಚಿತ್ರದ ಕುರಿತಂತೆ ನಿರ್ಮಾಪಕ ದೊಡ್ಮನೆ ಮಂಜುನಾಥ್ ಎಂ, ಮಾತನಾಡಿ ನಿರ್ದೇಶಕರು ಬಂದು ಈ ಕಥೆ ಹೇಳಿದಾಗ ಹಳ್ಳಿ ಸೊಗಡಿನ ಕಥೆ. ಏನೋ ಒಂದು ಕುತೂಹಲಕರ ಅಂಶ ಚಿತ್ರದಲ್ಲಿದೆ. ಹಾಗಾಗಿ ನಾನು ನಿರ್ಮಾಪಕನಾಗಲು ಒಪ್ಪಿಕೊಂಡೆ ಎಂದು ಹೇಳಿದರು.  ನಾಯಕ ನಟ ಮದನ್ ಮಾತನಾಡಿ ಇದು ಹಳ್ಳೀ ಕಾನ್ಸೆಪ್ಟ್. ಜೊತೆಗೊಂದು ಕ್ಯೂಟ್ ಲವ್‌ಸ್ಟೋರಿ ಸಹ ಚಿತ್ರದಲ್ಲಿದೆ. ಸಂಬಂಧಗಳ ವ್ಯಾಲ್ಯೂ ಇದೆ ಎಂದು ಹೇಳಿದರು.  ನಾಯಕಿ ಚೈತ್ರಾ ಮಾತನಾಡಿ ನಿರ್ದೇಶಕರು ಹೊಸ ಕಲಾವಿದರಿಗೆ ಅವಕಾಶ ಕೊಟ್ಟಿದ್ದಾರೆ. ಇಡೀ ಫ್ಯಾಮಿಲಿ ಕೂತು ನೋಡುವಂಥ ಸಿನಿಮಾ ಇದಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ನವೀನ್ ಕೃಷ್ಣ ಮಾತನಾಡಿ ಹೊಸ ತಂಡದಿಂದ ಹೊಸ ಪ್ರಯತ್ನ ನಡೆದಿದೆ. ಹಾಡುಗಳಿ ಕಲರ್‌ಫುಲ್ ಆಗಿ ಮೂಡಿ ಬಂದಿವೆ, ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂದು ಹೇಳಿದರು. ಆಡಿಯೋ ಹೊರತಂದಿರುವ ಲಹರಿ ವೇಲು ಮಾತನಾಡಿ ಹಿಂದೆ ಹಾಡು ಕೇಳಿದ್ದೆ. ಈಗ ನೋಡಿದೆ, ತುಂಬಾ ಚೆನ್ನಾಗಿ ಬಂದಿವೆ, ಅಣ್ಣಮ್ಮ ಜಾತ್ರೆ ಹಾಡು, ಮಲೆ ಮಹೇಶ್ವರನ ಕೇಳಲು ಇಂಪಾಗಿವೆ ಎಂದು ಹೇಳಿದರು. ಉದ್ಯಮಿ ಹಾಗೂ ನಿರ್ಮಾಪಕರಾದ ದೇವೇಂದ್ರ ರೆಡ್ಡಿ ಕೂಡ ಸಮಾರಂಭದಲ್ಲಿ ಹಾಜರಿದ್ದು ಮಾತನಾಡಿದರು. ಒಂದು ಪಕ್ಕಾ ಹಳ್ಳಿ ಸೊಗಡಿನಲ್ಲಿ ನಡೆಯುವ ಕಥೆ ಇರುವ  ಚಿತ್ರ ಇದಾಗಿದ್ದು, ಮಲೆ ಮಹದೇಶ್ವರ ಬೆಟ್ಟ, ಮಂಡ್ಯ, ತುಮಕೂರು, ಕೊರಟಗೆರೆ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.  

ಮಣಿಕುಪ್ಪೆ ಆಂಜನೇಯ ಸ್ವಾಮಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ದೊಡ್ಮನೆ ಮಂಜುನಾಥ್, ಎಂ. ನಿರ್ಮಾಣದ ಈ ಚಿತ್ರದ ಉಳಿದ ತಾರಾಬಳಗದಲ್ಲಿ ಮೈಕ್ರೋಟೆಕ್ ದೇವೇಂದ್ರ, ಭರತ್, ಜಯಂತಿ, ರೇಣುಕಾಂಬ, ಅಂಬರಿ ಪರಮೇಶ್, ಸೂರ್ಯ ಪ್ರಶಾಂತ್ ಗುಗ್ರಿ, ಚಂದುರೆಡ್ಡಿ, ದಾಕ್ಷಾಯಣಿ ಹಾಗೂ ಮಂಜುಳ ಹಾಸನ್ ನಟಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜನುಮದ ಜಾತ್ರೆ ಆಡಿಯೋ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.