ಜ಼ೀ ವಾಹಿನಿಯಲ್ಲಿ ಹೊಸ ರೂಪದಲ್ಲಿ ರಾಧಾಕಲ್ಯಾಣ
Posted date: 10 Wed, Jul 2019 01:16:26 PM

ಜ಼ೀ ಕನ್ನಡ ವಾಹಿನಿ ಹೊಸತನದ ಧಾರಾವಾಹಿಗಳನ್ನು ಕನ್ನಡ ಜನತೆಗೆ ನೀಡುತ್ತಾ ನಂಬರ್ ೧ ಸ್ಥಾನದಲ್ಲಿದೆ. ಕನ್ನಡ ಪ್ರೇಕ್ಷಕರಿಗೆ ನವನವೀನತೆಯ ರಿಯಾಲಿಟಿ ಶೋಗಳು, ಸೀರಿಯಲ್‌ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಅವರ ಮನೆ ಮನಗಳ ಹತ್ತಿರದ ಬಂಧುವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ಪ್ರಸಾರವಾಗುತ್ತಿರುವ ಕಮಲಿ, ಗಟ್ಟಿಮೇಳ, ಪಾರು, ಬ್ರಹ್ಮಗಂಟು ಸೀರಿಯಲ್‌ಗಳ ಮೂಲಕ ನಾಡಿನ ಗೃಹಿಣಿಯರ ಅಚ್ಚುಮೆಚ್ಚಿನ ವಾಹಿನಿಯಾಗಿ ಜ಼ೀ ಕನ್ನಡ ಹೊರಹೊಮ್ಮಿದೆ. ಇವುಗಳ ಜೊತೆ ಸರಿಗಮಪ, ವೀಕೆಂಡ್ ವಿತ್ ರಮೇಶ್ ದಂಥಾ ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈಗ ರಾಧಾ ಕಲ್ಯಾಣ ಎಂಬ ಸೂಪರ್ ಹಿಟ್ ಧಾರಾವಾಹಿಯನ್ನು ಹೊಸ ಧಾರಾವಾಹಿಯೊಂದಿಗೆ ಮತ್ತೆ ವೀಕ್ಷಕರ ಬಳಿಗೆ ತರುತ್ತಿದೆ.

ಐದು ವರ್ಷಗಳ ಹಿಂದೆ ಸಾವಿರಕ್ಕೂ ಹೆಚ್ಚು ಕಂತುಗಳ ಮೂಲಕ ಪ್ರಸಾರವಾಗಿ ದಾಖಲೆ ಬರೆದಂಥ ಈ ಧಾರಾವಾಹಿಯನ್ನು ಜನ ಇಂದಿಗೂ ಮರೆತಿಲ್ಲ. ಈಗ ಅದೇ ಟೈಟಲ್ ಇಟ್ಟುಕೊಂಡು ರಾಧಾ ಕಲ್ಯಾಣ ಮೂಡಿಬರುತ್ತಿದೆ. ಹುಡುಗಿಯರೆಂದರೆ, ಬರೀ ಮೋಜು ಮಸ್ತಿಗೆ ಮಾತ್ರ ಸೀಮಿತ ಎಂದುಕೊಂಡಿದ್ದ ಹುಡುಗ ಕೃಷ್ಣ. ಈತನಿಗೆ ಜೀವನದಲ್ಲಿ ಯಾವುದೇ ಧ್ಯೇಯೋದ್ದೇಶಗಳು ಇರುವುದಿಲ್ಲ. ಬರೀ ಪಾರ್ಟಿಗಳನ್ನೇ ಮಾಡಿಕೊಂಡು ಜೀವನವನ್ನು ವ್ಯರ್ಥವಾಗಿ ಕಳೆಯುತ್ತಿರುವ ಆಗರ್ಭ ಶ್ರೀಮಂತ ಈತ. ಇನ್ನು ನಾಯಕಿ ರಾಧಾ ತುಂಬಾ ಸಂಭಾವಿತ ಹುಡುಗಿ. ರಾಮನನ್ನೇ ತನ್ನ ದೈವವನ್ನಾಗಿ ಆರಾಧಿಸುವ ಈಕೆ ತನ್ನ ಜೀವನದಲ್ಲಿ ರಾಮನಂಥಾ ಗಂಡನೇ ಸಿಗಬೇಕೆಂದು ಬಯಸಿರುತ್ತಾಳೆ. ಅಂಥವಳ ಜೀವನದಲ್ಲಿ ಕೃಷ್ಣನಂಥಾ ಪೊರ್ಕಿ ಹುಡುಗ ಎಂಟ್ರಿಯಾದರೆ ಅವಳ ಜೀವನ ಏನಾಗಬಹುದು ಎಂದು ಹೇಳುವುದೇ ರಾಧಾ ಕಲ್ಯಾಣ ಧಾರಾವಾಹಿಯ ಮುಖ್ಯ ಕಥಾ ಹಂದರ. ತಾನು ಮದುವೆಯಾಗುವ ಹುಡುಗ ರಾಮನಂತೆ ತನ್ನೊಬ್ಬಳನ್ನೇ ಪ್ರೀತಿಸಬೇಕು ಎಂದು ನೂರಾರು ಕನಸು ಕಟ್ಟಿಕೊಂಡಿದ್ದಾಗ ಈ ಕೃಷ್ಣ ಬಂದಾಗ ರಾಧಾಳ ಕನಸಿನ ಜೀವನ ಕೊನೆಗೆ ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎಂದು ಹೇಳಹೊರಟಿದ್ದಾರೆ ನಿರ್ದೇಶಕ ನವೀನ್ ಕೃಷ್ಣ. ಈ ಮೊದಲು ಉಘೇ ಉಘೇ ಮಾದೇಶ್ವರ ಧಾರಾವಾಹಿಗೆ ಆಕ್ಷನ್ ಕಟ್ ಹೇಳುತ್ತಿದ್ದ ನವೀನ್ ಕೃಷ್ಣ ಈಗ ರಾಧಾ ಕಲ್ಯಾಣದ ಸಾರಥ್ಯ ವಹಿಸಿಕೊಂಡಿದ್ದಾರೆ. ವಿಷ್ಣು ದಶಾವತಾರ ಧಾರಾವಾಹಿಯಲ್ಲಿ ವಿಷ್ಣುವಿನ ಪಾತ್ರ ಮಾಡಿದ್ದ ಅಮಿತ್ ಕಷ್ಯಪ್ ಈ ಧಾರಾವಾಹಿಯಲ್ಲಿ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಈಗಾಗಲೇ ಹಲವಾರು ಸೀರಿಯಲ್ ಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ರಾಧಿಕಾ ಈ ಧಾರಾವಾಹಿಯಲ್ಲಿ ರಾಧಾ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಪಾರು ಎಂಬ ಧಾರಾವಾಹಿ ನಿರ್ಮಿಸಿದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಈ ಧಾರಾವಾಹಿಯ ನಿರ್ಮಾಪಕರು. ರಾಧಾ ಕಲ್ಯಾಣ ಇದೇ ತಿಂಗಳ ೧೫ರ ಸೋಮವಾರದಿಂದ ಶುಕ್ರವಾರದ ವರೆಗೆ ಜ಼ೀ ಕನ್ನಡ ವಾಹಿನಿಯಲ್ಲಿ ಸಂಜೆ ೬ಕ್ಕೆ ಪ್ರಸಾರವಾಗಲಿದೆ.  ಈ ಧಾರಾವಾಹಿಯಲ್ಲಿ ಹಿರಿಯ ನಟಿ ಆಶಾ ರಾಣಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಹರ್ಷಪ್ರಿಯಾ ಶೀರ್ಷಿಕೆ ರಚಿಸಿದರೆ, ಕಾರ್ತಿಕ್ ಶರ್ಮಾ ಸಂಗೀತ ಸಂಯೋಜನ ಮಾಡಿದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜ಼ೀ ವಾಹಿನಿಯಲ್ಲಿ ಹೊಸ ರೂಪದಲ್ಲಿ ರಾಧಾಕಲ್ಯಾಣ - Chitratara.com
Copyright 2009 chitratara.com Reproduction is forbidden unless authorized. All rights reserved.