ಜೀನಲ್ಲಿ ಸ್ತ್ರೀ ಸಬಲೀಕರಣದ ಸುತ್ತ ಸುತ್ತುವ ಗಟ್ಟಿಮೇಳ
Posted date: 07 Thu, Mar 2019 10:47:04 AM

ಫ್ಯಾಮಿಲಿ, ಲವ್‌ಸ್ಟೋರಿ, ಹಾರರ್, ಕಾಮಿಡಿ ಹೀಗೆ ವಿನೂತನ ಹಾಗೂ ವಿಭಿನ್ನ ಎಳೆಗಳನ್ನು  ಇಟ್ಟುಕೊಂಡು ಕಥೆ ಹೆಣೆಯುತ್ತ ವೀPಕರ ಮನೆ, ಮನ ತಲುಪಿರುವ ಜೀ ಕನ್ನಡ ವಾಹಿನಿ ಈಗ ಮತ್ತೊಂದು ಹೊಸ ರೀತಿಯ ಧಾರಾವಾಹಿಯನ್ನು ಪ್ರೇಕ್ಷಕರ ಮನೆಬಾಗಿಲಿಗೆ ತರಲು ಸಿದ್ದವಾಗಿದೆ. ಇದೇ ಮಾರ್ಚ್ 11ರ  ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ ೮ ಗಂಟೆಗೆ ಕನ್ನಡಿಗರ ಮನೆಗಳಲ್ಲಿ ಗಟ್ಟಿಮೇಳದ ನಿನಾದವನ್ನು ಕೇಳಿಸಲು ಸಿದ್ದವಾಗಿದೆ. ಸ್ತ್ರೀ ಸಬಲೀಕರಣದ ಸುತ್ತ ಹೆಣೆಯಲಾದ ಕಥಾವಸ್ತುವೇ ಈ ಧಾರಾವಾಹಿಯ ಮುಖ್ಯ ಎಳೆ.  ಇದರ ಜೊತೆಗೆ ಒಂದು ನವಿರಾದ ಪ್ರೇಮಕಥೆ ಹಾಗೂ ಬಡವ-ಶ್ರೀಮಂತರ ನಡುವೆ ನಡೆಯುವ ಸಂಘರ್ಷಗಳನ್ನು ಗಟ್ಟಿಮೇಳ ಧಾರಾವಾಹಿಯಲ್ಲಿ ಕಾಣಬಹುದಾಗಿದೆ.

ಹೆಣ್ಣುಮಕ್ಕಳನ್ನು  ಹೆರುವುದೇ ಮಹಾಪಾಪ ಎನ್ನುವಂಥ ಈಗಿನ ಕಾಲದಲ್ಲಿ ಈ ಧಾರಾವಾಹಿಯ ಕಥಾನಾಯಕಿಯಾದ ಪರಿಮಳ ತನ್ನ ನಾಲ್ಕು ಜನ ಹೆಣ್ಣುಮಕ್ಕಳನ್ನು ಹೇಗೆ ಪ್ರೀತಿಯಿಂದ ಬೆಳೆಸುತ್ತಾಳೆ, ಸಣ್ಣ ಮಟ್ಟದಲ್ಲಿ ಕೇಟರಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಾ ಮಕ್ಕಳನ್ನು ನೋಡಿಕೊಳ್ಳುವ ದಿಟ್ಟ ಹಾಗೂ ಗಟ್ಟಿಗಿತ್ತಿ ಹೆಣ್ಣು ಪರಿಮಳ. ಆಕೆಯ ನಾಲ್ಕು ಹೆಣ್ಣು ಮಕ್ಕಳಾದ ಆರತಿ, ಅಮೂಲ್ಯ, ಆದಿತಿ ಹಾಗೂ ಅಂಜಲಿ. ಈ ನಾಲ್ಕೂ ಜನ ಹೆಣ್ಣುಮಕ್ಕಳು ಒಬ್ಬರಿಗಿಂತ ಒಬ್ಬರು ವಿಭಿನ್ನ ಆದರೂ ತನ್ನ ಅಮ್ಮನನ್ನು ಇನ್ನಿಲ್ಲದಂತೆ ಪ್ರೀತಿಸುವ ಮಕ್ಕಳಾಗಿರುತ್ತಾರೆ. ಅದೇರೀತಿ ಪರಿಮಳ ಕೂಡ ತನ್ನ ಮಕ್ಕಳಿಗಾಗಿ ತನ್ನ ಇಡೀ ಜೀವನವನ್ನು ಮುಡುಪಾಗಿಟ್ಟಿರುತ್ತಾಳೆ.  ಸಾಕಷ್ಟು ಕನಸುಗಳನ್ನು ಹೊತ್ತು ನಿಂತಿರುವ  ಪರಿಮಳ-ಮಂಜುನಾಥ್ ಕುಟುಂಬ ಏನೆಲ್ಲಾ ಸವಾಲುಗಳನ್ನು  ಎದುರಿಸಬೇಕಾಗುತ್ತದೆ ಎಂದು ಈ ಧಾರಾವಾಹಿಯಲ್ಲಿ ವೀಕ್ಷಕರ ಮನಮುಟ್ಟುವ ಹಾಗೆ ನಿರೂಪಿಸಲಾಗಿದೆ.   

ಇನ್ನು ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ  ರಕ್ಷಿತ್ ಅಲಿಯಾಸ್ ವೇದಾಂತ್ ವಸಿಷ್ಠ ಈ ಧಾರಾವಾಹಿಯಲ್ಲಿ ಒಬ್ಬ ದೊಡ್ಡ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎನ್ನುವ ಮಾತಿಗೆ ವಿರುದ್ದವಾಗಿ ವೇದಾಂತ್ ಇರುತ್ತಾನೆ. ನನಗೆ ಹೆಣ್ಣುಮಕ್ಕಳ ಸಹವಾಸವೇ ಬೇಡ ಎನ್ನುವ ವೇದಾಂತ್ ಒಬ್ಬ ಯಶಸ್ವೀ ಉದ್ಯಮಿ ಅಲ್ಲದೆ ತಂದೆ ತಾಯಿಯ ಮುದ್ದಿನ ಮಗ ಹಾಗೂ ಒಳ್ಳೆಯ ಸಹೋದರ ಕೂಡ. ಆದರೂ ಹೆಣ್ಣನ್ನು ಸದಾ ದ್ವೇಶಿಸುವ ವೇದಾಂತ್ ಜೀವನದಲ್ಲಿ ಪ್ರೀತಿ ಎಲ್ಲಿ, ಹೇಗೆ, ಯಾರ ಮೇಲೆ ಅರಳುತ್ತದೆ ಎನ್ನುವುದೇ ಗಟ್ಟಿಮೇಳ ಧಾರಾವಾಹಿಯ ಕಥಾಹಂದರ.

ಇನ್ನು  ಈ ಧಾರಾವಾಹಿಯ ಬಗ್ಗೆ  ಮಾತನಾಡಿದ ಜೀ ವಾಹಿನಿಯ ವಕ್ತಾರ ರಾಘವೇಂದ್ರ ಹುಣಸೂರು ಜೀ ವಾಹಿನಿಯ ಎಲ್ಲಾ ಧಾರಾವಾಹಿಗಳಂತೆ  ಗಟ್ಟಿಮೇಳ ಧಾರಾವಾಹಿ ಸಹ ನಮಗೆ  ತುಂಬಾ ಹತ್ತಿರವಾದುದು.  ಮಾರ್ಚ್ ೧೧ರಿಂದ ಗಟ್ಟಿಮೇಳ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ಮುಖ್ಯವಾಗಿ ಸ್ತ್ರೀ ಸಬಲೀಕರಣದ ಸುತ್ತ ಸುತ್ತುವ ಗಟ್ಟಿಮೇಳ ಕುಟುಂಬದ ಪ್ರತಿಯೊಬ್ಬರಿಗೂ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೀನಲ್ಲಿ ಸ್ತ್ರೀ ಸಬಲೀಕರಣದ ಸುತ್ತ ಸುತ್ತುವ ಗಟ್ಟಿಮೇಳ - Chitratara.com
Copyright 2009 chitratara.com Reproduction is forbidden unless authorized. All rights reserved.