ಟಾಲಿವುಡ್​ನಿಂದ ಬಾಲಿವುಡ್​ಗೆ ಬೆಲಂಕೊಂಡ ಸಾಯಿ ಶ್ರೀನಿವಾಸ್..
Posted date: 27 Fri, Nov 2020 02:45:33 PM

ಹಿಂದಿಯಲ್ಲಿ ಪ್ರಭಾಸ್ ನಟನೆಯ ಛತ್ರಪತಿ ಚಿತ್ರದ ರಿಮೇಕ್​
-ಪೆನ್​ ಸ್ಟುಡಿಯೋಸ್ ನಿರ್ಮಾಣ, ವಿ.ವಿ. ವಿನಾಯಕ್ ನಿರ್ದೇಶನ
ಪಕ್ಕದ ಟಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ನಟ ಬೆಲಂಕೊಂಡ ಸಾಯಿ ಶ್ರೀನಿವಾಸ್​ ಇದೀಗ ಬಾಲಿವುಡ್​ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ತಯಾರಿ ನಡೆಸಿದ್ದಾರೆ. ಈಗಾಗಲೇ ಸೌತ್​ ಇಂಡಸ್ಟ್ರಿಯಲ್ಲಿ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿರುವ ಪ್ರಭಾಸ್​ ನಟನೆಯ ಛತ್ರಪತಿ ಚಿತ್ರವನ್ನೇ ಹಿಂದಿಯಲ್ಲಿ ರಿಮೇಕ್​ ಮಾಡಲಾಗುತ್ತಿದ್ದು, ಬೆಲಂಕೊಂಡ ಸಾಯಿ ಶ್ರೀನಿವಾಸ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಪೆನ್ ಸ್ಟುಡಿಯೋಸ್ ಬ್ಯಾನರ್​ನಲ್ಲಿ ಅದ್ದೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಚಿತ್ರವನ್ನು ಡಾ. ಜಯಂತಿಲಾಲ್ ಗಡ ಬಂಡವಾಳ ಹೂಡುತ್ತಿದ್ದಾರೆ. ವಿಶೇಷ ಏನೆಂದರೆ, ಬೆಲಂಕೊಂಡ ಶ್ರೀನಿವಾಸ ಅವರ ಮೊದಲ ಸಿನಿಮಾ ಅಲ್ಲುಡು ಸೀನು ಸಿನಿಮಾ ನಿರ್ದೇಶನ ಮಾಡಿದ್ದ ವಿವಿ ವಿನಾಯಕ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇವರಿಗೂ ಇದು ಮೊದಲ ಬಾಲಿವುಡ್ ಸಿನಿಮಾವಾಗಿದೆ.
ಮೂಲ ಛತ್ರಪತಿ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು, ಪ್ರಭಾಸ್, ಶ್ರೀಸರಣ್ ಸೇರಿ ಸಾಕಷ್ಟು ಮಂದಿ ಸ್ಟಾರ್ ಕಲಾವಿದರು ನಟಿಸಿದ್ದರು. ಇದೀಗ ಅದೇ ಚಿತ್ರವನ್ನು ವಿವಿ ವಿನಾಯಕ್ ಬಾಲಿವುಡ್​ನಲ್ಲಿ ನಿರ್ದೇಶನ ಮಾಡಲಿದ್ದು, ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಶುರುವಾಗಿದ್ದು, ಶೀಘ್ರದಲ್ಲಿ ಸಿನಿಮಾ ಕುರಿತ ಹೆಚ್ಚಿನ ಮಾಹಿತಿಯನ್ನು ತಂಡ ಹೇಳಿಕೊಳ್ಳಲಿದೆ.
ರಿಮೇಕ್ ಸಿನಿಮಾ ಮಾಡುವುದರಲ್ಲಿ ಸಿದ್ಧ ಹಸ್ತರಾಗಿರುವ ನಿರ್ದೇಶಕ ವಿನಾಯಕ, ತಮಿಳಿನ ಕೈದಿ ಚಿತ್ರವನ್ನು ತೆಲುಗಿನಲ್ಲಿ ಕೈದಿ ನಂ.150 ಸಿನಿಮಾ ಮಾಡುವ ಮೂಲಕ ಮೆಗಾಸ್ಟಾರ್ ಚಿರಂಜೀವಿಯವರನ್ನು ಮರಳಿ ಚಿತ್ರರಂಗಕ್ಕೆ ಕರೆತಂದಿದ್ದರು. ಇದೀಗ ಛತ್ರಪತಿ ಸಿನಿಮಾ ಮೂಲಕ ಬಾಲಿವುಡ್​ಗೆ  ಹೊರಟಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡುವ ನಾಯಕ ಬೆಲಂಕೊಂಡ ಸಾಯಿ ಶ್ರೀನಿವಾಸ್, ‘ಬಾಲಿವುಡ್​ಗೆ ಪದಾರ್ಪಣೆ ಮಾಡುವುದಕ್ಕೆ ಇದು ಹೇಳಿಮಾಡಿಸಿದ ಕಥೆ. ಪೆನ್ ಸ್ಟುಡಿಯೋಸ್ ಅವರ ಜತೆ ಕೈ ಜೋಡಿಸುತ್ತಿರುವುದು ಒಂದೊಳ್ಳೆ ಅವಕಾಶ. ನನ್ನ ಸಿನಿಮಾ ಕರಿಯರ್​ನ ಮೊದಲ ನಿರ್ದೇಶರ ಜತೆ ಈ ಸಿನಿಮಾ ಮಾಡುತ್ತಿರುವುದು ಖುಷಿಯ ವಿಚಾರ. ಪ್ರಭಾಸ್​ ನಿಭಾಯಿಸಿದ ಪಾತ್ರವನ್ನು ತೆರೆಮೇಲೆ ತರುವುದೂ ಅಷ್ಟೇ ದೊಡ್ಡ ಜವಾಬ್ದಾರಿ. ಅದನ್ನೂ ಅಷ್ಟೇ ಸಲೀಸಾಗಿ ನಿಭಾಯಿಸಲಿದ್ದೇನೆ’ ಎಂಬುದು ಅವರ ಮಾತು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಟಾಲಿವುಡ್​ನಿಂದ ಬಾಲಿವುಡ್​ಗೆ ಬೆಲಂಕೊಂಡ ಸಾಯಿ ಶ್ರೀನಿವಾಸ್.. - Chitratara.com
Copyright 2009 chitratara.com Reproduction is forbidden unless authorized. All rights reserved.