ದಂಡುಪಾಳ್ಯಂನಲ್ಲಿ ಟಗರು ಅಂಥೋಣಿ ದಾಸನ್- ಚಂದನ್ ಶೆಟ್ಟಿ ಹಾಡು!
Posted date: 04 Thu, Oct 2018 05:43:46 PM

ಟಗರು ಚಿತ್ರದ ಟೈಟಲ್ ಸಾಂಗಿಗೆ ಧ್ವನಿಯಾಗೋ ಮೂಲಕವೇ ಕನ್ನಡಿಗರಿಗೆಲ್ಲ ಪರಿಚಿತರಾಗಿದ್ದವರು ತಮಿಳು ಜನಪದ ಗಾಯಕ ಆಂತೋಣಿ ದಾಸನ್. ಈ ಗಾಯಕ ಈಗ ದಂಡುಪಾಳ್ಯಂ ಗ್ಯಾಂಗಿನ ಜೊತೆ ಸೇರಿಕೊಂಡಿದ್ದಾರೆ!

ವೆಂಕಟ್ ನಿರ್ಮಾಣದ ದಂಡುಪಾಳ್ಯಂ ೪ ಚಿತ್ರ ಈಗ ನಾನಾ ಕಾರಣದಿಂದ ಸುದ್ದಿಯಾಗುತ್ತಿದೆ. ದಂಡುಪಾಳ್ಯ ಸರಣಿ ಕನ್ನಡದಲ್ಲಿ ಒಂದು ಮಟ್ಟಕ್ಕೆ ಗೆಲುವು ಕಂಡಿತ್ತು. ಇದೀಗ ಮತ್ತೊಂದು ಗೆಲುವು ಕಾಣುವ ನಿರೀಕ್ಷೆಯೊಂದಿಗೆ ದಂಡುಪಾಳ್ಯಂ ೪ ಚಿತ್ರ ರೆಡಿಯಾಗಿದೆ. ಸದ್ಯ ಈ ಚಿತ್ರದ ಹಾಡುಗಳು ಸಿದ್ದಗೊಂಡಿವೆ. ಆನಂದ್ ರಾಜಾ ವಿಕ್ರಮ್ ಸಂಗೀತ ನೀಡಿರೋ ಹಾಡೊಂದಕ್ಕೆ ಆಂಥೋಣಿ ದಾಸನ್ ಧ್ವನಿಯಾಗಿದ್ದಾರೆ. ಈ ಹಾಡು ಟಗರು ಟೈಟಲ್ ಸಾಂಗಿನಂತೆಯೇ ಸದ್ದು ಮಾಡಲಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ.

ಇನ್ನುಳಿದಂತೆ ಈ ಚಿತ್ರದಲ್ಲಿ ಎರಡು ಹಾಡುಗಳಿರಲಿವೆ. ಅದರಲ್ಲೊಂದನ್ನು ಆಂತೋಣಿ ದಾಸನ್ ಹಾಡಿದ್ದರೆ ಮತ್ತೊಂದಕ್ಕೆ ರ‍್ಯಾಪರ್ ಚಂದನ್ ಶೆಟ್ಟಿ ಧ್ವನಿಯಾಗಿದ್ದಾರೆ. ಇದಕ್ಕೆ ಸುನೀತಾ ಮತ್ತು ಇಂದೂ ನಾಗರಾಜ್ ಧ್ವನಿಗೂಡಿಸಿದ್ದಾರೆ. ಈ ಎರಡೂ ಹಾಡುಗಳಿಗೆ ನಿರ್ಮಾಪಕರಾದ ವೆಂಕಟ್ ಅವರೇ ಸಾಹಿತ್ಯ ಒದಗಿಸಿರೋದು ವಿಶೇಷ. ಈ ಎರಡು ಹಾಡುಗಳಲ್ಲಿ ಮೊದಲು ಆಂತೋಣಿ ದಾಸನ್ ಹಾಡಿರುವ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಲಿರಿಕಲ್ ವೀಡಿಯೋವನ್ನು ವಾರದೊಪ್ಪತ್ತಿನಲ್ಲಿಯೇ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ಕ್ರೈಮ್ ಸಿನಿಮಾಗಳೆಂದರೆ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಆದರೆ ದಂಡುಪಾಳ್ಯಂ-೪ ಸಿನಿಮಾದಲ್ಲಿ ಹಾಡುಗಳಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಒಂದು ಹಾಡಿನಲ್ಲಿ ಮೂಮೈತ್ ಖಾನ್ ಮೋಹಕವಾಗಿ ಕುಣಿದಿದ್ದಾರೆ. ರಜನಿಕಾಂತ್ ಸೇರಿದಂತೆ ಸಾಕಷ್ಟು ಸೂಪರ್ ಸ್ಟಾರ್ ಗಳ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿರುವ ತಮಿಳಿನ ಬಾಬಾ ಭಾಸ್ಕರ್ ಎರಡೂ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ.

ನಿರ್ದೇಶನ ಕೆ.ಟಿ. ನಾಯಕ್, ಕ್ಯಾಮರಾ ಆರ್. ಗಿರಿ, ಸಂಕಲನ ಬಾಬು ಎ ಶ್ರೀವತ್ಸ, ಪ್ರೀತಿ ಮೋಹನ್ ಸಂಕಲನ ಈ ಚಿತ್ರಕ್ಕಿದೆ. ಸುಮನ್ ರಂಗನಾಥ್, ಮುಮೈತ್ ಖಾನ್, ಬ್ಯಾನರ್ಜಿ, ರಾಕ್ ಲೈನ್ ಸುಧಾಕರ್, ಸಂಜೀವ್ ಕುಮಾರ್, ಅರುಣ್ ಬಚ್ಚನ್, ಬುಲೆಟ್ ಸೋಮು, ವಿಠ್ಠಲ್ ರಂಗಾಯಣ, ಜೀವಾ ಸೈಮನ್, ರಿಚ್ಚಾ ಶಾಸ್ತ್ರಿ, ಸ್ನೇಹಾ ಮುಂತಾದವರ ತಾರಾಗಣವಿದೆ. ನಿರ್ಮಾಪಕ ವೆಂಕಟ್ ಅವರು ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.Kannada Cinema's Latest Wallpapers
Kannada Cinema's Latest Videos
Kannada Movie/Cinema News - ದಂಡುಪಾಳ್ಯಂನಲ್ಲಿ ಟಗರು ಅಂಥೋಣಿ ದಾಸನ್- ಚಂದನ್ ಶೆಟ್ಟಿ ಹಾಡು! - Chitratara.com
Copyright 2009 chitratara.com Reproduction is forbidden unless authorized. All rights reserved.