ನಿರ್ಮಾಪಕರ ಸಂಘದ ಸಂಸ್ಥಾಪಕ ಹೆಚ್.ಎಂ.ಕೆ ಮೂರ್ತಿ ಅವರ ಹೆಜ್ಜೆಗುರುತು ಬಿಡುಗಡೆ
Posted date: 10 Wed, Jul 2019 01:13:14 PM

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೆಚ್.ಎಂ.ಕೆ.ಮೂರ್ತಿ ಅವರ ಹೆಸರು ಚಿರಸ್ಥಾಯಿಯಾಗಿ ನಿಂತಿದೆ. ಹೌದು, ಒಂದು ಕಾಲದಲ್ಲಿ ನಿರ್ಮಾಪಕರು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಪ್ರಪ್ರಥಮವಾಗಿ ಚಲನಚಿತ್ರ ನಿರ್ಮಾಪಕರ ಸಂಘವನ್ನು ಹುಟ್ಟು ಹಾಕಿದವರು. ಕಿರುತೆರೆಯಲ್ಲಿ ಸಿಹಿ ಕಹಿ ಎನ್ನುವ ಮೊಟ್ಟ ಮೊದಲ ಪ್ರಾದೇಶಿಕ ಧಾರಾವಾಹಿಯನ್ನು ನಿರ್ಮಿಸಿದವರು. ಹೀಗೆ ಹತ್ತು ಹಲವು ಪ್ರಥಮಗಳಿಗೆ ಕಾರಣರಾದ ಹೆಚ್.ಎಂ.ಕೆ.ಮೂರ್ತಿ ಅವರ ಸಮಗ್ರ ಸಾಧನೆಯ ಹಾದಿಯನ್ನು ದಾಖಲಿಸಿರುವ ಹೆಜ್ಜೆಗುರುತು ಪುಸ್ತಕದ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ನೆರವೇರಿತು. ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಎಸ್.ಎ. ಚಿನ್ನೇಗೌಡ್ರು, ಬಸಂತಕುಮಾರ್ ಪಾಟೀಲ್ ಹಾಗೂ ಕೆ.ಸಿ.ಎನ್. ಚಂದ್ರಶೇಖರ್ ಅಲ್ಲದೆ ಈಗಿನ ಉಪಾಧ್ಯಕ್ಷರಾದ ಉಮೇಶ್ ಬಣಕಾರ್, ಸಿಹಿ ಕಹಿ ಚಂದ್ರು, ಗೀತಾ, ರಾಮದಾಸ್ ನಾಯ್ಡು, ಅಶೋಕ್, ದೂರದರ್ಶನ ವಾಹಿನಿಯ ರಾಜ್‌ಕುಮಾರ್ ಉಪಾಧ್ಯ ಹಾಗೂ ಗುರುಕಿರಣ್ ಸೇರಿದಂತೆ ಇತರರು ಈ ಸಮಾರಂಭದಲ್ಲಿ ಪಾಲ್ಗೊಂಡು ಹೆಚ್.ಎಂ.ಕೆ.ಮೂರ್ತಿ ಅವರ ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು. ಸಾಹಿತಿ ಹಿರಿಯೂರು ರಾಘವೇಂದ್ರ ಅವರು ಈ ಪುಸ್ತಕವನ್ನು ಬರೆದಿದ್ದಾರೆ.

ಯಾರು ಕೂಡಾ ನಾವು ಹೀಗಾಗ್ತೀವಿ ಅಂತಾ ಕಂಡಿರುವುದಿಲ್ಲ. ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಹೆಚ್.ಎಂ.ಕೆ.ಮೂರ್ತಿ ಅವರು ನಡೆದು ಬಂದ ಹಾದಿಯನ್ನು ನೋಡಿದ್ದೇವೆ. ಗೋಕಾಕ್ ಚಳಚಳಿ ಮುಗಿದ ನಂತರ ರಾಜ್ ಕುಮಾರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂತು. ಆಗ ಚಿತ್ರಮಂದಿರಗಳಲ್ಲಿ ಬಾಡಿಗೆ ವ್ಯವಸ್ಥೆ ಇತ್ತು. ಆಗ ಪಾರ್ವತಮ್ಮನವರ ಬಳಿ ಮಾತನಾಡಿ ನಿರ್ಮಾಪಕರ ಸಂಘವನ್ನು ಆರಂಭಿಸಿದರು. ಅವರೊಬ್ಬ ಶಿಸ್ತಿನ ಸಿಪಾಯಿ. ಅವರು ಬರೀ ಛಾಯಾಗ್ರಾಹಕರು, ನಿರ್ಮಾಪಕರು ಮತ್ತು ನಿರ್ದೇಶಕ ಮಾತ್ರ ಆಗಿರದೆ, ಸಾಕಷ್ಟು ಸಮಾಜಮುಖೀ ಕೆಲಸಗಳನ್ನೂ ಮಾಡಿದರು. ಹೊಸಕೋಟೆಯಲ್ಲಿ ಶಾಲೆಯನ್ನು ನಿರ್ಮಿಸಿದರು. ಈಗಲೂ ಅಲ್ಲಿ ಸಾವಿರಾರು ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ. ರಾಜ ಮಹರಾಜ, ಪಾಪಪುಣ್ಯ, ಸುಬ್ಬಾಶಾಸ್ತ್ರಿಯಂಥ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದವರು. ದೂರದರ್ಶನವನ್ನು ಜನರಿಗೆ ಸಮೀಪ ದರ್ಶನವಾಗಿಸಲು ಪ್ರಯತ್ನಿಸಿದರು ಎಂದು ಎಸ್.ಎನ್ ಚಿನ್ನೇಗೌಡರು ಹೇಳಿದರು. ಉಮೇಶ್ ಬಣಕಾರ್ ಅವರನ್ನು ದೊಂಬರ ಕೃಷ್ಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಕರೆತಂದವರು ಕೂಡಾ ಹೆಚ್.ಎಂ.ಕೆ.ಮೂರ್ತಿ ಎನ್ನುವುದು ಗಮನಿಸಬೇಕಾದ ಅಂಶ ಎಂದು ಕೂಡಾ ಅವರು ಹೇಳಿದರು.

ನಂತರ ಮತ್ತೊಬ್ಬ ಅತಿಥಿ ಬಸಂತ್ ಕುಮಾರ್ ಪಾಟೀಲ್ ಮಾತನಾಡಿ, ಚಿತ್ರರಂಗದಲ್ಲಿ ನಾನು ಯಾರನ್ನಾದರೂ ಲೀಡರ್ ಅಂತಾ ಕರೆದಿದ್ದರೆ ಅದು ಹೆಚ್.ಎಂ.ಕೆ.ಮೂರ್ತಿ ಅವರನ್ನು ಮಾತ್ರ. ಆಗಿನ ಕಾಲದಲ್ಲಿ ಧೈರ್ಯವಾಗಿ ಮುನ್ನುಗ್ಗಿದ್ದರಿಂದಲೇ ನಿರ್ಮಾಪಕರ ಸಂಘ ಸ್ಥಾಪನೆಯಾಯಿತು. ಅವರು ಪ್ರತಿಯೊಂದು ವಿಶಯವನ್ನೂ ಅಂಕಿ ಸಂಖ್ಯೆಗಳ ಮೂಲಕವೇ ಮಾಡುತ್ತಿದ್ದರು. ಅವರ ಧ್ಯೇಯಗಳನ್ನು ನಾನೂ ಹಲವಾರು ವರ್ಷಗಳ ಕಾಲ್ ಮುಂದುವರೆಸಿದೆ. ಆತ ಧಾರಾವಾಹಿಗಳ ಪಿತಾಮಹ. ಅವರು ಯಾವ ಬೌಂಡರಿಗಳನ್ನೂ ಮೀರಿ ಹೋದವರಲ್ಲ. ಇಂಥವರ ಸಮಕಾಲೀನರಾಗಿ ನಾವಿದ್ದೆವು ಅನ್ನೋದೇ ಹೆಮ್ಮೆ. ನೀವು ಹಾಕಿದ ಹಣವನ್ನು ಕಾಪಾಡಿಕೊಳ್ಳಿ ಎಂದು ನಿರ್ಮಾಪಕರನ್ನು ಬಡಿದೆಬ್ಬಿಸಿದರು ಎಂದು ಹೇಳಿದರು. ನಂತರ ಕೆ.ಸಿ.ಎನ್. ಚಂದ್ರಶೇಖರ್ ಮಾತನಾಡಿ, “ಮೂರ್ತಿಯವರು ಒಂದು ಮಹಾವೃಕ್ಷ. ಆಗಿನ ಕಾಲದಕ್ಕಿ ಲೆಕ್ಕಾಚಾರ ಹಾಕಿ ಬಂಡವಾಳ ಹೂಡುವವರು ಇಬ್ಬರೇ. ಅವರು ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಹೆಚ್.ಎಂ.ಕೆ.ಮೂರ್ತಿ. ಇಷ್ಟು ಹಣವನ್ನು ಈ ಚಿತ್ರಕ್ಕೆ ಹಾಕಿದರೆ ವಾಪಾಸು ಬರುತ್ತೆ ಅಂತಾ ಕನ್ಫರ‍್ಮ್ ಮಾಡಿಕೊಂಡೇ ಬಂಡವಾಳ ಹೂಡುತ್ತಿದ್ದರು. ಸುಂದರವಾಗಿ ಈ ಪುಸ್ತಕವನ್ನು ರೂಪಿಸಿದ್ದಾರೆ. ಈ ಹಂತದಲ್ಲಿ ಶ್ರೀಮತಿ ಕಮಲಾ ಮೂರ್ತಿ ಮತ್ತು ಅವರ ರಾಜೇಶ್ ಮೂರ್ತಿ ಅವರ ಶ್ರಮ ತುಂಬಾ ಇದೆ ಎಂದು ಹೇಳಿದರು. ಉಳಿದಂತೆ ಪತ್ರಕರ್ತ ಬಿ.ಎನ್. ಸುಬ್ರಹ್ಮಣ್ಯ, ರಾಮದಾಸ್ ನಾಯ್ಡು ಮತ್ತು ಗುರುಕಿರಣ್ ಹಾಗೂ ಇತರರು ಹೆಚ್.ಎಂ.ಕೆ.ಮೂರ್ತಿ ಅವರ ಬಗ್ಗೆ ಮತ್ತು ಅವರ ಸಾಧನೆಗಳನ್ನು ಕುರಿತು ಮಾತನಾಡಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಿರ್ಮಾಪಕರ ಸಂಘದ ಸಂಸ್ಥಾಪಕ ಹೆಚ್.ಎಂ.ಕೆ ಮೂರ್ತಿ ಅವರ ಹೆಜ್ಜೆಗುರುತು ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.