ಪೆಪೆ ರಕ್ತದ ಮಡುವಲ್ಲಿ ಸೇಡಿನ ಬೆಂಕಿ....ರೇಟಿಂಗ್: 3/5 ***
Posted date: 31 Sat, Aug 2024 10:28:56 PM
ಚಿತ್ರ: ಪೆಪೆ
ನಿರ್ದೇಶನ: ಶ್ರೀಲೇಶ್‍ ಎಸ್‍. ನಾಯರ್
ನಿರ್ಮಾಣ: ಉದಯಶಂಕರ್‍ ಎಸ್,  ಬಿ.ಎಂ. ಶ್ರೀರಾಮ್‍ 
ಸಂಗೀತ; ಪೂರ್ಣಚಂದ್ರ ತೇಜಸ್ವಿ, .
ಛಾಯಾಗ್ರಹಣ: ಅಭಿಷೇಕ್ ಜಿ.ಕಾಸರಗೋಡು, 
ತಾರಾಗಣ: ವಿನಯ್‍ ರಾಜಕುಮಾರ್‍, ಕಾಜಲ್‍ ಕುಂದರ್, ಮಯೂರ್ ಪಟೇಲ್‍, ಬಲ ರಾಜವಾಡಿ, ಅರುಣ ಬಾಲರಾಜ್‍,  ಯಶ್‍ ಶೆಟ್ಟಿ, ಮೇದಿನಿ ಕೆಳಮನೆ, ರವಿಪ್ರಸಾದ್‍ ಮಂಡ್ಯ, ಸಂಧ್ಯಾ ಅರೆಕೆರೆ, ನವೀನ್‍ ಡಿ. ಪಡೀಲ್‍ ಇತರರು

ಕೆಲವು ಚಿತ್ರಗಳೇ ಹಾಗೆ ತನ್ನ ಟೈಟಲ್ ಮೂಲಕವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಈವಾರ ತೆರೆಕಂಡ ಪೆಪೆ ಕೂಡ ಅದೇ ಜಾನರ್‌ ಗೆ ಸೇರಿದ ಸಿನಿಮಾ. ತೊರೆ ಈ ಚಿತ್ರದ ಕೇಂದ್ರಬಿಂದು. ಚಿತ್ರ ಪ್ರಾರಂಭವಾದ ಕೆಲ ಸಮಯ ಒಂದಷ್ಟು  ಪಾತ್ರಗಳು ಆ ನಿಗೂಢ ತೊರೆಯ ಬಗ್ಗೆಯೇ ಚರ್ಚಿಸುತ್ತವೆ. ಆ ತೊರೆಗೂ, ಈ ಚಿತ್ರದ ಕಥೆಗೂ ಇರುವ  ಸಂಬಂಧವೇನು ಎಂಬ ಪ್ರಶ್ನೆ  ಪ್ರೇಕ್ಷಕರನ್ನು ಕಾಡುತ್ತಿರುವಾಗಲೇ ಅದಕ್ಕೆ ಸ್ಪಷ್ಟನೆ ಸಿಗುತ್ತದೆ. ಇಡೀ ಚಿತ್ರದ ಬಹುತೇಕ ಕಥೆ ಆ ತೊರೆಯ ಸುತ್ತಲೂ ಸುತ್ತುತ್ತದೆ. ಹಿಂದೆ ಮಲಬಾರಿ ಎಂಬ ವ್ಯಕ್ತಿ  ಆ ತೊರೆಯಿಂದ ಮರಳು ತೆಗೆದು ಸಾಗಿಸುತ್ತಿರುತ್ತಾನೆ. ಅಲ್ಲಿಗೆ ಕೆಲಸ ಮಾಡಲು ಬಂದ ಕೆಳಜಾತಿಯ ರಾಯಪ್ಪನಿಗೂ ಮೇಲ್ಜಾತಿಯ ಮಲಬಾರಿಗೂ ಸಂಘರ್ಷ ಉಂಟಾಗುತ್ತದೆ. ಆ ಸಮಯದಲ್ಲಿ ಒಂದಿಷ್ಟು ಹೆಣಗಳು ಉರುಳುತ್ತವೆ. ಮುಂದಿನ ದಿನಗಳಲ್ಲಿ  ರಾಯಪ್ಪನ ಮೊಮ್ಮಗ ಪ್ರದೀಪ್(ವಿನಯ್ ರಾಜ್ ಕುಮಾರ್) ಅದೇ ದ್ವೇಷವನ್ನು ಮುಂದುವರೆಸಿಕೊಂಡು ಬರುತ್ತಾನೆ, ಆ ತೊರೆಯನ್ನು ಪಡೆಯಲು ಆತ ಏನೆಲ್ಲಾ ಪ್ರಯತ್ನ  ಮಾಡುತ್ತಾನೆ ಎನ್ನುವುದೇ ಈ  ಚಿತ್ರದ ಕಥೆ.

ನಾಲ್ಕು ಕುಟುಂಬಗಳ ಜನರು ತಮ್ಮ ಫ್ಯಾಮಿಲಿ ಗೌರವವನ್ನು ಉಳಿಸಿಕೊಳ್ಳಲು  ಏನೇನೆಲ್ಲಾ ಹೋರಾಟ ನಡೆಸುತ್ತಾರೆ ಎಂದು ಈ ಚಿತ್ರದಲ್ಲಿ  ಹೇಳಲಾಗಿದೆ.  ಕೌಟುಂಬಿಕ  ಕಲಹದ ನಡುವೆ, ಸಂಘರ್ಷವೂ ಇದೆ. ಜಾತಿಯ ಹೆಸರಿನಲ್ಲಿ ಜನ ಏನೇನೆಲ್ಲಾ ಮಾಡುತ್ತಾರೆಂದು ಚಿತ್ರದಲ್ಲಿ ನಿರೂಪಿಸಲಾಗಿದೆ‌‌.  ಹಿಂಸೆ, ರಕ್ತಪಾತ ಬೇಡ, ಎಲ್ಲವೂ ಪ್ರೀತಿಯಿಂದ ಸಹಜೀವನ ನಡೆಸಿ ಎಂಬ  ಸಂದೇಶವೂ ಚಿತ್ರದಲ್ಲಿದೆ. ನಿರ್ದೇಶಕ ಶ್ರೀಲೇಶ್ ಎಸ್. ನಾಯರ್ ಅವರು ಇಡೀ ಚಿತ್ರದ ಕಥೆಯನ್ನು ನಾನ್ ಲೀನಿಯರ್ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯ ಜನತೆ ಚಿತ್ರವನ್ನು  ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.

ತನ್ನ ತಂದೆಯನ್ನು ಕೊಂದವರನ್ನು ಪತ್ತೆಹಚ್ಚಿ ಪೆಪೆ ಅವರ ಮೇಲೆ  ಸೇಡು ತೀರಿಸಿಕೊಳ್ತಾನಾ, ಇಲ್ವಾ  ಎಂಬ  ಪ್ರಶ್ನೆಗೆ  ಉತ್ತರ ಖಂಡಿತಾ ಸಿಗುವುದಿಲ್ಲ. ಅದನ್ನು ಮುಂದಿನ ಭಾಗದಲ್ಲಿ ಹೇಳಲು  ನಿರ್ದೇಶಕ ಶ್ರೀಲೇಶ್‍ ಎಸ್. ನಾಯರ್ ಒಂದಷ್ಟು ಕಥೆಯನ್ನು ಹಾಗೇ ಹಿಡಿದಿಟ್ಟುಕೊಂಡಿದ್ದಾರೆ.

ಕೆಲವು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿರುವಂತೆ ಭಾಸವಾಗುತ್ತದೆ.  ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಪ್ರಸ್ತುತ ಕಾಲಘಟ್ಟದಲ್ಲೂ ಸಹ  ಮುಂದುವರೆದಿರುವುದು ನಮ್ಮ  ಸಮಾಜ ವ್ಯವಸ್ಥೆ ಮೇಲೆ ಆಕ್ರೋಶ ಮೂಡಿಸುತ್ತದೆ.

ಚಿತ್ರದಲ್ಲಿ ಒಂದು ನವಿರಾದ ಪ್ರೇಮಕಥೆಯಿದೆ. ಬುಡಕಟ್ಟು ಜನರ ಸೊಗಸಾದ ಹಾಡಿದೆ. ಮಂಗಳೂರಿನ ಮೀನಿನ ವಾಸನೆಯಿದೆ. ಕಾಡು ಸೊಬಗಿನ ನೋಟವಿದೆ. ಹಳ್ಳಿ ಜನರ ಮುಗ್ಧ ಪ್ರೀತಿಯಿದೆ.  ಚಿತ್ರದಲ್ಲಿ  ಹಿಂಸೆ, ಕ್ರೌರ್ಯ, ರಕ್ತಪಾತದ ಜೊತೆ  ಒಂದಿಷ್ಟು ಸೂಕ್ಷ್ಮ ವಿಷಯಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ. ಮಹಿಳೆಯರ ಹಕ್ಕುಗಳ ಬಗ್ಗೆ, ಜಾತಿ ಬೇಧದ ಬಗ್ಗೆ ಒಂದಿಷ್ಟು ಹೇಳಲು ಪ್ರಯತ್ನಿಸಿದ್ದಾರೆ. ಕಥೆಯಲ್ಲಿ ವಾಸ್ತವ, ಫ್ಲಾಶ್‍ಬ್ಯಾಕ್‍ ಯಾವುದೆಂದು  ಗೊತ್ತಾಗದಷ್ಟು ಜಟಿಲವಾಗಿದೆ.
 
ನಾಯಕ ವಿನಯ್‍ ರಾಜಕುಮಾರ್ ಆ್ಯಕ್ಷನ್‍ ದೃಶ್ಯಗಳಲ್ಲಿ ಚುರುಕಾಗಿ ಅಭಿನಯಿಸಿದ್ದರೂ,  ದ್ವಿತೀಯಾರ್ಧದಲ್ಲಿ ವಿಪರೀತ ಎನಿಸುವಷ್ಟು ಆಕ್ಷನ್ ಇದೆ. ಯಾರು, ಯಾರಿಗೆ, ಯಾವಾಗ, ಏಕೆ ಹೊಡೆಯುತ್ತಾರೆಂದು ಪ್ರೇಕ್ಷಕನಿಗೆ ಕೊನೆವರೆಗೂ ಅರ್ಥವಾಗುವುದಿಲ್ಲ.  

ಈ ಚಿತ್ರದಲ್ಲಿ ಹಲವು ಪಾತ್ರಗಳಿವೆ. ಅಷ್ಟೊಂದು ಪಾತ್ರಗಳ ನಡುವೆಯೇ ಮಯೂರ್ ಪಟೇಲ್‍, ಕಿಟ್ಟಿ, ಕಾಜಲ್‍ ಕುಂದರ್, ಮೇದಿನಿ ಅರುಣಾ ಬಾಲರಾಜ್‍ ಗಮನ ಸೆಳೆಯುತ್ತಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತದ   ಹಾಡುಗಳು ಪರವಾಗಿಲ್ಲ.  ಅಭಿಷೇಕ್‍ ಜಿ.  ಕಾಸರಗೋಡು ಅವರು ತಮ್ಮ ಕ್ಯಾಮೆರಾದಲ್ಲಿ  ರಕ್ತದಷ್ಟೇ ಸುಂದರವಾಗಿ ಪರಿಸರವನ್ನೂ ಸಹ  ಸೆರೆಹಿಡಿದಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed