ಬೆಳ್ಳಕ್ಕಿ ಚಿತ್ರದ ಟೀಸರ್‌ಗೆ ಶಾಸಕ ವಿಶ್ವನಾಥ್ ಚಾಲನೆ
Posted date: 06 Wed, Nov 2019 09:48:13 AM

ಈಗಿನ ಮಕ್ಕಳಿಗೆ ಸಿಗುತ್ತಿರುವ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಕಥಾಹಂದರ ಹೆಣೆಯಲಾಗಿರುವ ಚಿತ್ರ ಹಾಲಕ್ಕಿ ಹೊಸ ಪ್ರತಿಭೆಗಳ ಪ್ರಯತ್ನದ ಮತ್ತೊಂದು ಕೊಡುಗೆಯಾಗಿದೆ.  ಹೆಚ್‌ಎಎಲ್‌ನಲ್ಲಿ ಕೆಲಸ ಮಾಡಿಕೊಂಡೇ ಲೋಕೇಶ್ ಮಾಧು ಈ ಚಿತ್ರವನ್ನು  ನಿರ್ದೇಶನ ಮಾಡಿದ್ದಾರೆ.  ಲೋಕೇಶ್ ಅವರ ಸಹೋದರ ಗಿರೀಶ್ ಮಾಧು ಅಣ್ಣನ ಪ್ರಯತ್ನಕ್ಕೆ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಈ ಚಿತ್ರದ ಟೀಸರ್ ಬೆಳಕಿನ ಹಬ್ಬ ದೀಪಾವಳಿಯ ಕೊಡುಗೆಯಾಗಿ ಬಿಡುಗಡೆಯಾಗಿದೆ.

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಹಾಲಕ್ಕಿ ಚಿತ್ರದ ಟೀಸರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ತಬಲಾನಾಣಿ, ಶಿಶಿರ್ ಎಲ್. ರಾಹುಲ್, ಗಿರೀಶ್ ಜತ್ತಿ  ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನೂರಾರು ಮಕ್ಕಳು ಸಹ ನಟಿಸಿದ್ದಾರೆ. ಹಿರಿಯ ಕಲಾವಿದೆ ಲಕ್ಷ್ಮಿ ದೇವಮ್ಮ. ತೇಜು ಪೊನ್ನಪ್ಪ, ಚಂದ್ರ ಮಯೂರ್ ಸಹ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ರವಿತಪಸ್ವಿ ಅವರ ಸಾಹಿತ್ಯ ಹಾಗೂ ಎಸ್.ನಾಗು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಮೂರು ಹಾಡುಗಳು ಈ ಚಿತ್ರದಲ್ಲಿವೆ.

ಈಗಾಗಲೇ ಹಾಲಕ್ಕಿ ಚಿತ್ರದ ಮಾತಿನ ಭಾಗ ಹಾಗೂ ಒಂದು ಹಾಡಿನ ಚಿತ್ರೀಕರಣವನ್ನು ಮಂಡ್ಯ ಸುತ್ತಮುತ್ತ ನಡೆಸಲಾಗಿದ್ದು ೨ ಹಾಡುಗಳ ಶೂಟಿಂಗ್ ಇನ್ನೂ ಬಾಕಿಯಿದೆ. ಹೆಚ್‌ಎಎಲ್ ಹೌಸಿಂಗ್ ಸೊಸೈಟಿ ನಿರ್ದೇಶಕರೂ ಆದ ದೇವರಾಜ್ ಹಾಗೂ ಶ್ರೀಮತಿ ಜ್ಯೋತಿ ಕೂಡ ಈ ತಂಡಕ್ಕೆ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ  ಮಾತನಾಡಿದ ಶಾಸಕ ವಿಶ್ವನಾಥ್ ದೇವರಾಜ್ ನಾನು ಹೆಚ್‌ಎಎಲ್‌ನಲ್ಲಿದ್ದಾಗಿನ ಗೆಳೆಯ. ಅವರು ನಿನ್ನೆ ನಮ್ಮ ಮನೆಗೆ ಬಂದು ಹೆಚ್‌ಎಎಲ್‌ನಲ್ಲಿ ಕೆಲಸ ಮಾಡುವ ಸ್ನೇಹಿತರೆಲ್ಲ ಸೇರಿ ಈ ಥರ ಒಂದು ಸಿನಿಮಾ ಮಾಡಿದ್ದೇವೆ. ನೀವು ಬಂದು ಟೀಸರ್ ಬಿಡುಗಡೆ ಮಾಡಬೇಕು ಎಂದಾಗ ನನಗೆ ಬಹಳ ಖುಷಿಯಾಯಿತು. ಸ್ನೇಹಿತ ಲೋಕೇಶ್ ಒಳ್ಳೇ ಪ್ರಯತ್ನ ಮಾಡಿದ್ದಾರೆ. ಇರುವ ಕೆಲಸಗಳನ್ನೆಲ್ಲ ಮುಂದೆಹಾಕಿ ನಾನೀ ಕಾರ್ಯಕ್ರಮಕ್ಕೆ ಬಂದಿದ್ದೇನೆ.

ಹಾಡುಗಳನ್ನು ಕೇಳಿದೆ, ತುಂಬಾ ಅರ್ಥಗರ್ಭಿತವಾಗಿವೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿರುತ್ತೆ, ಮಕ್ಕಳಿಗೆ ವಿದ್ಯೆ ಎಷ್ಟು ಮುಖ್ಯ ಅನ್ನೋದನ್ನು ಈ ಚಿತ್ರದಲ್ಲಿ ಹೇಳಿದ್ದಾರೆ, ಜನ ಇಂಥ ಚಿತ್ರಗಳನ್ನು ಹೆಚ್ಚು ಹೆಚ್ಚು ವೀಕ್ಷಿಸುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಮೆಂಟಲ್‌ಮಂಜ ನಿರ್ದೇಶಕ ಸಾಯಿಸಾಗರ್, ಅರ್ಜುನ್‌ಗೌಡ ಹಾಗೂ ಇತರ ಸ್ನೇಹಿತರು ಸಮಾರಂಭದಲ್ಲಿ ಹಾಜರಿದ್ದು ಚಿತ್ರದ ಕುರಿತಂತೆ ಮಾತನಾಡಿದರು.   

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬೆಳ್ಳಕ್ಕಿ ಚಿತ್ರದ ಟೀಸರ್‌ಗೆ ಶಾಸಕ ವಿಶ್ವನಾಥ್ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.