ರಾಜ ರಾಣಿ ಮೂರನೇ ಸೀಸನ್ನಿನಲ್ಲಿ ಜೋಡಿಗಳ ಡಾನ್ಸಿಗೆ ಆದ್ಯತೆ
Posted date: 08 Sat, Jun 2024 02:05:29 PM
ಕಲರ್ಸ್ ಕನ್ನಡದ ಜನಪ್ರಿಯ ಶೋಗಳಲ್ಲೊಂದಾದ `ರಾಜ-ರಾಣಿ` ಯ ಮೂರನೇ ಸೀಸನ್ ಇದೀಗ ವೀಕ್ಷಕರನ್ನು ರಂಜಿಸಲು ತಯಾರಾಗಿದೆ. `ರಾಜ ರಾಣಿ ರೀಲೋಡೆಡ್- ಸೀಸನ್ 3` ಇದೇ ಜೂನ್ 8ರಿಂದ ಆರಂಭಗೊಳ್ಳಲಿದ್ದು, ಸಂಚಿಕೆಗಳು ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರಗೊಳ್ಳಲಿವೆ. 

 ಕಳೆದ ಸೀಸನ್ನುಗಳ ಯಶಸ್ಸು ತಂಡದ ಉತ್ಸಾಹವನ್ನು ಹೆಚ್ಚಿಸಿದ್ದು, `ರಾಜ ರಾಣಿ`ಯ ಮೂರನೇ ಸೀಸನ್ನಿನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಹನ್ನೆರೆಡು ಸೆಲೆಬ್ರಿಟಿ ದಂಪತಿಗಳು ಪಾಲ್ಗೊಳ‌್ಳಲಿರುವ `ರಾಜ ರಾಣಿ ರೀಲೋಡೆಡ್` ನ ಹೊಸ ಸೀಸನ್ ಜೋಡಿಗಳ ಡಾನ್ಸಿನ ಮೇಲೆ ಹೆಚ್ಚು ಒತ್ತು ನೀಡಲಿದೆ. ಎಂದಿನಂತೆ ತಮಾಷೆ, ಹರಟೆ, ಆಟ, ಭಾವನೆಗಳೆಲ್ಲಾ ಇರುತ್ತವಾದರೂ ಈ ಸಲ ಜೋಡಿಗಳ ನರ್ತನ ಸಾಮರ್ಥ್ಯ ಹಿಂದಿನ ಸೀಸನ್ನುಗಳಿಗಿಂತ ಆದ್ಯತೆ ಪಡೆಯಲಿದೆ. 

 ಮೂರನೇ ತೀರ್ಪುಗಾರರಾಗಿ ನಟಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳುತ್ತಿರುವುದು ಈ ಹೊಸ ಸೀಸನ್ನಿನ ಮತ್ತೊಂದು ಅಚ್ಚರಿ. ಈಗಾಗಲೇ ತೀರ್ಪುಗಾರರಾಗಿರುವ ಸೃಜನ್ ಲೋಕೇಶ್ ಮತ್ತು ತಾರಾ ಅವರನ್ನು ಅದಿತಿ ಕೂಡಿಕೊಳ್ಳಲಿದ್ದಾರೆ. ನಿರೂಪಕಿಯಾಗಿ ಅನುಪಮಾ ಗೌಡ ಮರಳಿದ್ದಾರೆ. 
 
ಈಗಾಗಲೇ ಹನ್ನೆರಡು ಸೆಲೆಬ್ರೆಟಿ ಜೋಡಿಗಳನ್ನು ಶೋಗೆ ಆಯ್ಕೆ ಮಾಡಲಾಗಿದ್ದು, ಟಿವಿ ಮುಖಗಳಿಂದ ಹಿಡಿದು ಸಾಮಾಜಿಕ ಮಾಧ್ಯಮಗಳ ತನಕ ಬೇರೆ ಬೇರೆ ಹಿನ್ನೆಲೆಯಿಂದ ಬಂದ ಜೋಡಿಗಳನ್ನು ನೀವೀ ಶೋನಲ್ಲಿ ನೋಡಬಹುದು. ಡಾನ್ಸ್ ಮತ್ತು ಗೇಮುಗಳ ಮೂಲಕ ಈ ಜೋಡಿಗಳು ತಮ್ಮ ನಡುವಿನ ಸಾಮರಸ್ಯವನ್ನು ಪರೀಕ್ಷೆಗೊಳಪಡಿಸಲಿದ್ದಾರೆ. 

`ರಾಜ ರಾಣಿ ರೀಲೋಡೆಡ್` ಶುರುವಾಗುತ್ತಿರುವ ಬಗ್ಗೆ ಮಾತನಾಡಿದ ವಯಾಕಾಮ್ 18 ಪ್ರಾದೇಶಿಕ ಮನರಂಜನೆಯ ಕ್ಲಸ್ಟರ್ ಹೆಡ್ ಸುಷ್ಮಾ ರಾಜೇಶ್, ` ರಾಜ ರಾಣಿ ರೀಲೋಡೆಡ್ ಹಲವು ಹೊಸ ಪ್ರಯೋಗಗಳ ಜೊತೆಗೆ ಪ್ರಾದೇಶಿಕತೆಯ ಸೊಗಡನ್ನು ಮೈಗೂಡಿಸಿಕೊಂಡು ರಸಭರಿತವಾಗಿ ಮೂಡಿಬರಲಿದೆ` ಎಂದು ಹೇಳಿದರು. 

ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಕೂಡ ಈ ಹೊಸ ಸೀಸನ್ನಿನ ಬಗ್ಗೆ ಉತ್ಸಾಹದ ಮಾತುಗಳನ್ನಾಡಿ, ಡಾನ್ಸ್ ಕೇಂದ್ರಿತ ಹೊಸ ಫಾರ್ಮ್ಯಾಟ್ ಮತ್ತು ಹೊಸ ತೀರ್ಪುಗಾರರಾಗಿ ಅದಿತಿ ಸೇರ್ಪಡೆಯಾಗಿರುವುದು ಈ ಸಲದ ರಾಜರಾಣಿಗೆ ಹೊಸ ಚೈತನ್ಯ ತಂದುಕೊಟ್ಟಿದೆ’ ಎಂದು ಹೇಳಿದರು.

 ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ರಾಜ ರಾಣಿ ಶೋ ನಿರ್ಮಾಣಗೊಳ‌್ಳುತ್ತಿದೆ. ವೈಟ್ ಗೋಲ್ಡ್ ಅರ್ಪಿಸುವ ಈ ಶೋನ ಸಹ ಪ್ರಾಯೋಜಕರು ಅಮೃತ್ ನೋನಿ. ಜೊತೆಗೆ ಸ್ಪೆಷಲ್ ಪಾರ್ಟ್ನರ್ ಆಗಿ ಸ್ವಸ್ತಿಕ್ ತುಪ್ಪ, ಭೀಮಾ ಜ್ಯೂಯೆಲ್ಲರ್ಸ್, ಸದ್ಗುರು ಆಯುರ್ವೇದ ಗ್ರಾಮ್ ಫ್ಲೋರ್ ಸೋಪು, ಸಂಗೀತ ಮೊಬೈಲ್ಸ್ ಈ ಜನಪ್ರಿಯ ಕಾರ್ಯಕ್ರಮದ ಜೊತೆ ಕೈ ಜೋಡಿಸಿವೆ. 

 ಜೂನ್ 8ರ ರಾತ್ರಿ ಏಳೂವರೆಗೆ ಮೊದಲ ಸಂಚಿಕೆಯನ್ನು ಆರಂಭಿಸಲಿರುವ ರಾಜರಾಣಿ ರೀಲೋಡೆಡ್ ಅನ್ನು ನೀವು ಕಲರ್ಸ್ ಕನ್ನಡ ಚಾನೆಲ್ ಹಾಗೂ ಜಿಯೊ ಸಿನಿಮಾ ಆಪ್ ನಲ್ಲೂ ವೀಕ್ಷಿಸಬಹುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed