ವಿನೋದ್ ಪ್ರಭಾಕರ್ ನೂತನ ಚಿತ್ರಕ್ಕೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್
Posted date: 16 Wed, May 2018 12:04:14 PM
ಕನಕದುರ್ಗ ಚಲನಚಿತ್ರ ಹಾಗೂ ಬೆಂಗಳೂರು ಕುಮಾರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಇನ್ನೂ ಹೆಸರಿಡದ ಹೊಸ ಚಿತ್ರದ ಮುಹೂರ್ತ ಸಮಾರಂಭ ಕಳೆದ ಶುಕ್ರವಾರ ಬೆಂಗಳೂರಿನ ದೊಡ್ದ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. 
    ‘ಇಲ್ಲಿಯವರೆಗೂ ಐದು ವರ್ಷದ ಸಿ.ಎಂ ನೋಡಿದಿರಾ, ಎರಡು, ಮೂರ್  ವರ್ಷದ ಸಿ.ಎಂ ನೋಡಿದಿರಾ, ಒಂದು ದಿನದ ಸಿ ಎಂ ನು ನೋಡಿದಿರಾ ಆದ್ರೆ ಲೈಫ಼್‌ಟೈಮ್ ಸಿ.ಎಂ ನ ನೋಡಿಲ್ಲ ಅಲ್ವಾ? ನೋಡ್ತಿರಾ ... A CM With out protocal` ‘ ಎಂದು ನಾಯಕ ವಿನೋದ್ ಪ್ರಭಾಕರ್ ಹೇಳುವ ಪ್ರಥಮ ಸಂಭಾಷಣೆಗೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಆರಂಭ ಫಲಕ ತೋರಿದರು. ದೇವೇಂದರ್ ಕ್ಯಾಮೆರಾ ಚಾಲನೆ ಮಾಡಿದರು. 
      ಕನ್ನಡ ಚಿತ್ರರಂಗದಲ್ಲಿ  ಮರಿ ಟೈಗರ್  ಎಂದೇ  ಖ್ಯಾತರಾಗಿರುವ  ನಟ  ವಿನೋದ್ ಪ್ರಭಾಕರ್  ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಈ  ಚಿತ್ರದ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ರವಿಗೌಡ.  ಕಳೆದ ೫ ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ರವಿಗೌಡ ಈ ಹಿಂದೆ ಪೂರಿ ಜಗನ್ನಾಥ್, ಬಹದ್ದೂರ್ ಚೇತನ್  ಅವರ ಬಳಿ  ಕೆಲಸ ಮಾಡಿ ಅನುಭವ ಹೊಂದಿದ್ದಾರೆ.  ಈ ಚಿತ್ರವನ್ನು ಚಕ್ರವರ್ತಿ ಸಿ.ಹೆಚ್. ಹಾಗೂ ಕುಮಾರ್ ಬಿ. ಸೇರಿ ನಿರ್ಮಾಣ ಮಾಡುತ್ತಿದ್ದಾರೆ. 
    ದರ್ಶನ್ ಆತ್ಮೀಯ ಸ್ನೇಹಿತರಲ್ಲಿ ವಿನೋದ್ ಪ್ರಭಾಕರ್ ಕೂಡ ಒಬ್ಬರು. ಅವರ ಅಭಿನಯದ ಬಹುತೇಕ ಚಿತ್ರಗಳಿಗೆ ದರ್ಶನ್ ಅವರೇ ಕ್ಲಾಪ್ ಮಾಡುತ್ತಾರೆ. ಅದೇ ರೀತಿ ಈ ಚಿತ್ರದ ಮಹೂರ್ತಕ್ಕೂ ಬಂದು ಶುಭ ಹಾರೈಸಿದ್ದಾರೆ.
    ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರವಾಗಿದ್ದು, ಹೆಸರಾಂತ ನಾಯಕಿಯೊಬ್ಬರು  ವಿನೋದ್ ಪ್ರಭಾಕರ್‌ಗೆ  ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಸಂಭಾಷಣೆಯನ್ನು ರವಿಗೌಡ ಹಾಗೂ ವಿಜಯ್ ರಚಿಸಿದ್ದಾರೆ. ಮನೋಹರ್ ಜೋಶಿ  ಅವರ ಛಾಯಾಗ್ರಹಣ, ಅಚು ಅವರ ಸಂಗೀತ  ನಿರ್ದೇಶನ, ಮೋಹನ್ ನೃತ್ಯ ನಿರ್ದೇಶನ, ವಿನೋದ್ ಅವರ ಸಾಹಸ ಈ ಚಿತ್ರಕ್ಕಿದೆ. ವಿನೋದ್ ಪ್ರಭಾಕರ್, ಕುರಿ ಪ್ರತಾಪ್, ವಿಜಯ್ ಚೆಂಡೂರ್, ತಬಲ ನಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿನೋದ್ ಪ್ರಭಾಕರ್ ನೂತನ ಚಿತ್ರಕ್ಕೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ - Chitratara.com
Copyright 2009 chitratara.com Reproduction is forbidden unless authorized. All rights reserved.