ಸಂದೇಶ್‌ ಪ್ರೊಡಕ್ಷನ್ಸ್‌ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್‌
Posted date: 01 Sat, Jun 2024 05:22:07 PM
ಕನ್ನಡ ಚಿತ್ರೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಈಗಾಗಲೇ ಸದಭಿರುಚಿಯ ಚಿತ್ರಗಳ ಜತೆಗೆ ಬಿಗ್‌ ಬಜೆಟ್‌ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದೆ. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ "ಘೋಸ್ಟ್‌" ಚಿತ್ರವೂ ಅದರಲ್ಲೊಂದು. ಇದೀಗ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಮತ್ತೊಂದು ಬಿಗ್‌ ಸಿನಿಮಾವನ್ನು ಕೈಗೆತ್ತಿಕೊಂಡಿದೆ. ಈ ಸಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಜತೆಗೆ ಕೈ ಜೋಡಿಸಿದ್ದಾರೆ ನಿರ್ಮಾಪಕ ಎನ್‌. ಸಂದೇಶ್‌. 
 
ಸಂದೇಶ್‌ ನಾಗರಾಜ್‌ ಅರ್ಪಿಸುವ ಸಂದೇಶ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಎನ್‌ ಸಂದೇಶ್‌ ನಿರ್ಮಾಣದಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಮೂಡಿಬರುವುದು ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ಅವರ ಜತೆಗೆ ಸಂದೇಶ್‌ ನಾಗರಾಜ್ ಮತ್ತು ಎನ್ ಸಂದೇಶ್‌ ಅವರು ಒಟ್ಟಿಗೆ ಇರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ಶುರುವಾಗಲಿದೆ ಎಂದೇ ಹೇಳಲಾಗಿತ್ತು. ಇದೀಗ ಆ ಊಹೆ ನಿಜವಾಗಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಸೆಟ್ಟೇರಲಿದೆ.
 
ಹಾಗಾದರೆ ಯಾವಾಗ ಶುರು? ಸದ್ಯಕ್ಕೆ ಕಿಚ್ಚ ಸುದೀಪ್‌ ಸಂದೇಶ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಯಾವಾಗ ಶುರು, ನಿರ್ದೇಶಕರು ಯಾರು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಈ ನಡುವೆ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪ್ರಭುದೇವ ನಟನೆಯ "ವುಲ್ಫ್" ಸಿನಿಮಾ ರೆಡಿಯಾಗಿದೆ. ಸೃಜನ್‌ ಲೋಕೇಶ್‌ ಜತೆಗಿನ ಜಿಎಸ್‌ಟಿ ಚಿತ್ರದ ಶೂಟಿಂಗ್‌ ಕೆಲಸಗಳೂ ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜತೆಗೆ "ಘೋಸ್ಟ್‌ 2" ಅಥವಾ ಶಿವಣ್ಣನ ಜತೆಗಿನ "ದಳವಾಯಿ ಮುದ್ದಣ್ಣ", "ಬೀರಬಲ್ 2" ಸಿನಿಮಾಗಳೂ ಸೆಟ್ಟೇರಲಿವೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed