ಮಹಿಳೆಯರು ಒಂದು ದೊಡ್ಡ ಸಾಧನೆ ಮಾಡಹೊರಟಾಗ ಪುರುಷರು ಅವರಿಗೆ ಹೆಗಲಾಗಿ ನಿಲ್ಲಬೇಕು, ಆಗ ಅವರು ದೇಶಕ್ಕೇ ಕೀರ್ತಿ ತಂದುಕೊಡುವ, ಇಡೀ ದೇಶವೇ ಹೆಮ್ಮೆಪಡುವ ಆಸ್ತಿಯಾಗುತ್ತಾರೆ, ಅಂಥಾ ಟೆಕ್ವಾಂಡೋ ಸಾಧಕಿಯ ಕಥೆಯನ್ನು ನಿರ್ದೇಶಕ ಸತೀಶ್ ಮಲೆಂಪಾಟಿ ಅವರು ಈವಾರ ತೆರೆಕಂಡಿರುವ ಕಾದಾಡಿ ಚಿತ್ರದಲ್ಲಿ ಹೇಳಿದ್ದಾರೆ.
ಮುಂಗೋಪಿ ಯುವಕ ಜೀವಾ(ಆದಿತ್ಯ) ಹಾಗೂ ಟೆಕ್ವಾಂಡೋ ಚಾಂಪಿಯನ್ ವಂದನಾ(ಲಾವಣ್ಯ ಸಾಹುಕಾರ) ಇಬ್ಬರ ಸುತ್ತ ನಡೆವ ಕಥೆ ಈ ಚಿತ್ರದಲ್ಲಿದೆ. ಜೀವಾ ಒಬ್ಬ ಹೂ ಮಾರುವ ಮಹಿಳೆಯ ಮಗ, ಉಂಡಾಡಿಯಾಗಿ ತಿರುಗಾಡಿಕೊಂಡಿದ್ದ ಜೀವಾನ ಜೀವನದಲ್ಲಿ ಇಬ್ಬರು ಯುವತಿಯರು ಎಂಟ್ರಿಯಾದ ಮೇಲೆ ಏನೇನೆಲ್ಲ ನಡೆಯಿತು ಎಂಬುದನ್ನು ಸಾಹಸಮಯ ಕಥೆಯೊಂದಿಗೆ ನಿರ್ದೇಶಕರು ನಿರೂಪಿಸಿದ್ದಾರೆ. ಜೀವಾ ಒಂದು ಹಂತದಲ್ಲಿ ಚಿತ್ರದ ನಾಯಕನಾ, ವಿಲನ್ನಾ ಎನ್ನುವ ಅನುಮಾನ ಪ್ರೇಕ್ಷಕರಲ್ಲಿ ಮೂಡುತ್ತದೆ. ಕಾದಾಡಿ ಚಿತ್ರದ ಹೈಲೈಟ್ ಎಂದರೆ ಇಡೀ ಸಿನಿಮಾದ ನಿರೂಪಣೆಯಲ್ಲಿ ನಿರ್ದೇಶಕರು ತೋರಿರುವ ಜಾಣ್ಮೆ. ಎಲ್ಲೂ ಸಹ ಪ್ರೇಕ್ಷಕರಿಗೆ ಬೋರಾಗದಂತೆ ಚಿತ್ರವನ್ನು ತೆಗೆದುಕೊಂಡು ಹೋಗಿದ್ದಾರೆ, ನಾಯಕ ಆದಿತ್ಯ(ಅಕ್ಷಿತ್ ಶಶಿಕುಮಾರ್) ರಾ ಹೀರೋ ಆಗಿ ನೋಡುವರಿಗೆ ಸಖತ್ ಇಷ್ಟವಾಗುತ್ತಾರೆ, ಅಲ್ಲದೆ ಹಾಡುಗಳಲ್ಲಿ ಅವರು ಅದ್ಭುತವಾಗಿ ಡಾನ್ಸ್ ಮಾಡುವ ಮೂಲಕ ತಂದೆ ಶಶಿಕುಮಾರ್ ಅವರನ್ನು ನೆನಪಿಸುತ್ತಾರೆ.
ಇನ್ನು ನಾಯಕಿಯಾಗಿ ನಟಿಸಿರುವ ಮುದ್ದಾದ ಚೆಲುವೆ ಲಾವಣ್ಯ ಒಬ್ಬ ಟೆಕ್ವಾಂಡೋ ಆಟಗಾರ್ತಿ ಎಂದರೆ ಯಾರೂ ನಂಬಲಾರರು, ತೆರೆ ಮೇಲೆ ಆಕೆ ಎದುರಾಳಿಗಳಿಗೆ ಕೊಡುವ ಪಟ್ಟುಗಳನ್ನು ನೋಡಿ ಎಂಥ ಪರಿಣಿತ ಆಟಗಾರನೂ ಆಶ್ಚರ್ಯಪಡುತ್ತಾನೆ.
ಟೆಕ್ವಾಂಡೋ ಕ್ರೀಡೆ ಆಧಾರಿತ ಆಕ್ಷನ್, ಥ್ರಿಲ್ಲರ್ ಕಥೆಯ ಮೂಲಕ ಮಹಿಳೆಯರು ಯಾವುದರಲ್ಲೂ ಕಮ್ಮಿಯಿಲ್ಲ ಎಂದು ತೋರಿಸಿದ್ದಾರೆ, ಮಹಿಳಾ ಪ್ರಧಾನ ಕಥೆ ಇರುವ ಚಿತ್ರ ಇದಾಗಿದ್ದು, ನಾಯಕಿ ಲಾವಣ್ಯ ಇಡೀ ಚಿತ್ರದ ಹೈಲೈಟ್ ಆಗಿದ್ದಾರೆ. ಚಿತ್ರದ ಕೊನೆಯಲ್ಲಿ ಕಥೆಯೇ ಹೀರೋ ಆಗಿ ನಿಲ್ಲುತ್ತದೆ, ಕಾದಾಡಿ ಚಿತ್ರ ಪ್ರಮುಖವಾಗಿ ಪ್ರೇಕ್ಷಕರನ್ನು ಗೆಲ್ಲುವುದು ನಾಯಕ ಆದಿತ್ಯ ಹಾಗೂ ನಾಯಕಿ ಲಾವಣ್ಯ ಅವರ ಮುಗ್ಧ ಹಾಗೂ ರಗಡ್ ಅಭಿನಯದಿಂದ, ವಿಜಯಶ್ರೀ ಅವರ ಛಾಯಾಗ್ರಹಣ, ಭೀಮ್ಸ್ ಸಿಸಿಲಿಯೋ ಅವರ ಸಂಗೀತ ಕೂಡ ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲೊಂದು. ಆದಿತ್ಯ ತಮ್ಮ ಹಿಂದಿನ ಎರಡೂ ಚಿತ್ರಗಳಿಗಿಂತ ಬೇರೆ ಥರದ ಪಾತ್ರಕ್ಕೆ ಇಲ್ಲಿ ಜೀವ ತುಂಬಿದ್ದಾರೆ, ಪೊಲೀಸ್ ಆಗಿ ರವಿಕಾಳೆ, ಮಂತ್ರಿಯಾಗಿ ಪೋಸಾನಿ ಗಮನ ಸೆಳೆಯುತ್ತಾರೆ.