ಹೇಮಂತ್ ಎಂ ರಾವ್ ಮತ್ತು ಶಿವ ರಾಜ್‌ಕುಮಾರ್ ಕಾಂಬಿನೇಶನ್ ಹೊಸ ಚಿತ್ರ `ಭೈರವನ ಕೊನೆ ಪಾಠ`
Posted date: 04 Thu, Jul 2024 02:30:39 PM
ಡಾ.ವೈಶಾಖ್ ಜೆ ಗೌಡ ಅವರ ವಿಜೆಎಫ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭೈರವನ ಕೊನೆ ಪಾಠ ಚಿತ್ರಕ್ಕೆ ಹೇಮಂತ್ ಎಂ ರಾವ್ ಆಕ್ಷನ್ – ಕಟ್ ಹೇಳಲಿದ್ದು, ಡಾ.ಶಿವ ರಾಜ್‌ಕುಮಾರ್ ನಾಯಕ ನಟರಾಗಿ ಬಣ್ಣ ಹಚ್ಚಲಿದ್ದಾರೆ. 

ಹೇಮಂತ್ ಎಂ ರಾವ್ ಅವರ ಸಿನೆಮಾಗಳ ಶೀರ್ಷಿಕೆಗಳು ಯಾವಾಗಲೂ ವಿಶಿಷ್ಟವಾಗಿರುತ್ತವೆ. ಇದರ ಬಗ್ಗೆ ಪ್ರಶ್ನಿಸಿದಾಗ ಅವರು, “ನಮ್ಮ ಆಡುಭಾಷೆಗೆ ಹತ್ತಿರವಾದ ಶೀರ್ಷಿಕೆಗಳು ನನಗೆ ಇಷ್ಟವಾಗುತ್ತವೆ.  ಈ ಹಿಂದೆ ಕನ್ನಡ ಸಿನೆಮಾ ಶೀರ್ಷಿಕೆಗಳು ಕೇಳಲಿಕ್ಕೂ ಮಧುರವಾಗಿದ್ದು ಕುತೂಹಲ ಕೆರಳಿಸುವಂತೆ ಇರುತ್ತಿದ್ದವು. ನನ್ನ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ಸಪ್ತ ಸಾಗರದಾಚೆ ಎಲ್ಲೋ’ ಸಿನೆಮಾ ಶೀರ್ಷಿಕೆಗಳು ಸಾಕಷ್ಟು ಜನ ಮೆಚ್ಚುಗೆಗೆ ಪಾತ್ರವಾದವು. ‘ಭೈರವನ ಕೊನೆ ಪಾಠ’ ಕೂಡಾ ಆ ಸಾಲಿಗೆ ಸೇರಲಿದೆ. ಕನ್ನಡ ಸಿನೆಮಾ ಜಗತ್ತಿನ ವಿಶಿಷ್ಟ ಶೀರ್ಷಿಕೆಗಳ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೂ ತಲುಪಿಸುವ  ಉದ್ದೇಶ ನಮ್ಮದು. ಅದರಲ್ಲೂ ನಾನು ಬಹಳವಾಗಿ ಇಷ್ಟಪಡುವ ಶಿವಣ್ಣ ಅವರ ಸಿನೆಮಾ ಶೀರ್ಷಿಕೆಗಳ ಸೌಂದರ್ಯವನ್ನು ಸದಾ ಕಾಲ ನೆನಪಿರುವಂತೆ ಮಾಡುವುದು ನನ್ನ ಬಯಕೆ. ಈ ಚಿತ್ರದಲ್ಲಿ ಭೈರವನೇ ಕೇಂದ್ರ ಪಾತ್ರವಾಗಿದ್ದು, ನಮ್ಮ ಶೀರ್ಷಿಕೆ ಅಚ್ಚುಕಟ್ಟಾಗಿ ಹೊಂದುತ್ತದೆ. ಅವನು ಮಾಡುವ ಪಾಠ ಯಾವುದು? ಅದನ್ನು ಕೊನೆ ಪಾಠ ಅಂದಿರೋದು ಯಾಕೆ ಅನ್ನುವುದೇ ಇದರ ಮುಖ್ಯ ತಿರುಳು. ನಮ್ಮ ಶೀರ್ಷಿಕೆ ವೀಕ್ಷಕರಲ್ಲಿ ಈ ಪ್ರಶ್ನೆಗಳನ್ನು ಯಶಸ್ವಿಯಾಗಿ ಹುಟ್ಟುಹಾಕುತ್ತದೆ ಅನ್ನುವುದು ನಮ್ಮ ನಂಬಿಕೆ” ಎಂದು ವಿವರಿಸಿದರು. 

ಇದು ನಿರ್ಮಾಪಕ ವೈಶಾಖ್ ಜೆ ಗೌಡ ನಿರ್ಮಾಣದ ಚೊಚ್ಚಲ ಚಿತ್ರವಾಗಿದ್ದು, ಶೀರ್ಷಿಕೆ ಬಗ್ಗೆ ಈಗಾಗಲೇ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿರುವ ಬಗ್ಗೆ ಸಂತೋಷದಿಂದ ಹೇಳಿಕೊಂಡರು. “ಈ ಶೀರ್ಷಿಕೆಯನ್ನು ಮೊದಲ ಬಾರಿ ಕೇಳಿದಾಗ ನಾನೆಷ್ಟು ಉತ್ಸಾಹಗೊಂಡಿದ್ದೆನೋ ಅದೇ ಉತ್ಸಾಹ ಜನರಲ್ಲೂ ಕಂಡುಬರುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಇದೊಂದು ವಿಭಿನ್ನ ಹಾಗೂ ವಿಶಿಷ್ಟ ಚಿತ್ರವಾಗಿ ಮೂಡಿಬರಲಿದ್ದು, ಮುಂದಿನ ತಲೆಮಾರುಗಳವರೆಗೆ ತನ್ನ ಜನಪ್ರಿಯತೆ ಉಳಿಸಿಕೊಳ್ಳಲಿದೆ” ಎಂದು ಆಶಾಭಾವನೆ ವ್ಯಕ್ತಪಡಿಸಿದರು. 

ಸಿನೆಮಾದಲ್ಲಿ ಬಳಸಲಾಗಿರುವ ಬಾಣದ ಗುರುತಿನ ಬಗ್ಗೆ ತೂರಿಬಂದ ಪ್ರಶ್ನೆಗಳಿಗೆ “ಸದ್ಯದಲ್ಲೇ ಬಿಡುಗಡೆಯಾಗಲಿರುವ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಅದಕ್ಕೆ ಉತ್ತರ ಸಿಗಲಿದೆ” ಎಂಬ ಒಕ್ಕೊರಲಿನ ಪ್ರತಿಕ್ರಿಯೆ ಕೇಳಿಬಂತು. 

ಈ ವರ್ಷ ಡಾ.ಶಿವ ರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ ಮೊದಲು ಭೈರವನ ಕೊನೆ ಪಾಠ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed