ಸೂರ್ಯ ಹುಟ್ಟುಹಬ್ಬಕ್ಕೆ `ಕಂಗುವ` ಟೀಸರ್ ಉಡುಗೊರೆ
Posted date: 23 Sun, Jul 2023 12:30:31 PM
ಕಾಲಿವುಡ್ ನ ಜನಪ್ರಿಯ ನಟ ಸೂರ್ಯ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಕಂಗುವ’ ಚಿತ್ರತಂಡವು ಟೀಸರ್ ಬಿಡುಗಡೆ ಮಾಡುವ ಮೂಲಕ ಸೂರ್ಯ ಅವರಿಗೆ ಶುಭಾಶಯಗಳನ್ನು ತಿಳಿಸಿದೆ.
 
ಕಳೆದ 16 ವರ್ಷಗಳಲ್ಲಿ`ಸಿಂಗಂ` ಸರಣಿ, `ಪರುತ್ತಿವೀರನ್`, `ಸಿರುತ್ತೈ`, `ಕೊಂಬನ್`, `ನಾನ್ ಮಹಾನ್ ಅಲ್ಲ`, `ಮದರಾಸ್`, `ಟೆಡ್ಡಿ`, ‘ಪತ್ತು ತಾಲ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿರುವ ಕೆ.ಇ. ಜ್ಞಾನವೇಲ್ ರಾಜ,`ಕಂಗುವ`ಚಿತ್ರವನ್ನು ತಮ್ಮ ಸ್ಟೂಡಿಯೋ ಗ್ರೀನ್ ಸಂಸ್ಥೆಯಡಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಚಿತ್ರವನ್ನು ಶಿವ ನಿರ್ದೇಶನ ಮಾಡುತ್ತಿದ್ದಾರೆ.
 
ದೊಡ್ಡ ಬಜೆಟ್ ನಲ್ಲಿ, ಅತ್ಯುನ್ನತ ತಂತ್ರಜ್ಞಾನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಏಕಕಾಲಕ್ಕೆ 10 ಭಾಷೆಗಳಲ್ಲಿ, 3 ಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈಗ ಬಿಡುಗಡೆಯಾಗಿರುವ ಟೀಸರ್ ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಸೇರಿದಂತೆ ಆರು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸದ್ಯದಲ್ಲೇ ಇನ್ನೂ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
‘ಕಂಗುವ’ ಚಿತ್ರದಲ್ಲಿ ಮಾನವೀಯ ಸಂಬಂಧಗಳಷ್ಟೇ ಅಲ್ಲ, ಇದುವರೆಗೂ ನೋಡಿರದ ಅದ್ಭುತ ಸಾಹಸ ದೃಶ್ಯಗಳಿವೆ. ಎರಡು ನಿಮಿಷ ಅವಧಿಯ ಈ ಟೀಸರ್ ತನ್ನ ಅದ್ಭುತ ಗ್ರಾಫಿಕ್ಸ್, ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಟೀಸರ್ ನ ಕೊನೆಯಲ್ಲಿ ಸೂರ್ಯ ಕಾಣಿಸಿಕೊಳ್ಳಲಿದ್ದು, ಅವರ ಲುಕ್ ಪ್ರೇಕ್ಷಕರನ್ನು ಆಕರ್ಷಿಸಿದೆ.
 
`ಕಂಗುವ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರ ಮೂಡಿಬರುತ್ತಿರುವ ರೀತಿಗೆ ಚಿತ್ರತಂಡ ಖುಷಿಯಾಗಿದೆ. ಸದ್ಯದಲ್ಲೇ ಚಿತ್ರೀಕರಣ ಮುಗಿಯಲಿದ್ದು, 2024ರಲ್ಲಿ ಚಿತ್ರ ಜಗತ್ತಿನಾದ್ಯಂತ ದಾಖಲೆಯ 10 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಸೂರ್ಯ ಜೊತೆಗೆ ಬೇರೆ ಭಾಷೆಗಳ ಪ್ರಮುಖ ಪಾತ್ರಧಾರಿಗಳು ಸಹ ಕಾಣಿಸಿಕೊಳ್ಳುತ್ತಿದ್ದು, ಬಾಲಿವುಡ್‌ ನ ಜನಪ್ರಿಯ ನಟಿ ದಿಶಾ ಪಠಾಣಿ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ರಾಕ್ ಸ್ಟಾರ್’ ಎಂದೇ ಜನಪ್ರಿಯರಾಗಿರುವ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ, ವೆಟ್ರಿ ಪಳನಿಸ್ವಾಮಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
 
ಬೇರೆ ಭಾಷೆಗಳ ಜನಪ್ರಿಯ ಚಿತ್ರ ವಿತರಣಾ ಸಂಸ್ಥೆಗಳು ‘ಕಂಗುವ’ ಚಿತ್ರತಂಡದ ಜೊತೆಗೆ ಕೈಜೋಡಿಸಿದ್ದು, ಸದ್ಯದಲ್ಲೇ ಈ ಸಹಯೋಗದ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬೀಳಲಿವೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed