ದರ್ಬಾರ್ ಆಡಿಯೋ ಬಿಡುಗಡೆ ಚುನಾವಣೆ ಬಗ್ಗೆ ಉಪೇಂದ್ರ ಹಾಡು
Posted date: 09 Sun, Apr 2023 06:17:49 PM
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ  ರಾಜಕೀಯ ವಿಡಂಬನಾತ್ಮಕ ಕಥಾಹಂದರ ಹೊಂದಿರುವ ಚಿತ್ರ ದರ್ಬಾರ್. ಸತೀಶ್ ನಾಯಕನಾಗಿ ಕಾಣಿಸಿಕೊಂಡಿರುವ  ಈ ಚಿತ್ರಕ್ಕೆ  ವಿ.ಮನೋಹರ್ ಆಕ್ಷನ್ ಕಟ್ ಹೇಳಿದ್ದಾರೆ. ಈಚೆಗೆ ನಡೆದ  ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ ದನಿಯಾಗಿರುವ ಚುನಾವಣೆ ಪ್ರಕ್ರಿಯೆಯನ್ನು ವಿಶ್ಲೇಶಿಸುವ ವಿಶೇಷ ಹಾಡಿನ ಲಿರಿಕಲ್ ವೀಡಿಯೋವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾಮ ಹರೀಶ್ ಅವರು ರಿಲೀಸ್ ಮಾಡಿದರು. 

ಈ ವೇಳೆ ಮಾತನಾಡಿದ ನಾಯಕನಟ ಸತೀಶ್ ನಮ್ಮ  ಚಿತ್ರದಲ್ಲಿರುವ ೩ ಹಾಡುಗಳೂ ವಿಶೇಷವಾಗಿವೆ. ಮೊದಲ ಹಾಡು ಯಾರಿವ ಯಾರಿವ, ನಾಯಕನ ಕ್ಯಾರೆಕ್ಟರೈಸೇಶನ್ ಹೇಳುವ ಸಾಂಗ್.  ಮನೋಹರ್ ಅವರೇ ಇದಕ್ಕೆ ಸಾಹಿತ್ಯ ಬರೆದಿದ್ದಾರೆ. ೨ನೇದು ಮೆಲೋಡಿ ಸಾಂಗ್, ಇದಕ್ಕೆ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ. ಇನ್ನು ಮೂರನೇದು ಎಲೆಕ್ಷನ್ ರಾಜಕೀಯದ ಬಗ್ಗೆ ವಿವರಿಸುವ ಹಾಡು, ಇದನ್ನು ನಾನೇ ಬರೆದಿದ್ದೇನೆ. ಅದರಲ್ಲಿ ತುಂಬಾನೇ ವಿಷಯಗಳು ಅಡಗಿವೆ,  ನಾನು ಪ್ರತಿ ಲೈನ್ ಬರೆದಾಗಲೂ ಮನೋಹರ್ ಅವರು ಚೆನ್ನಾಗಿದೆ ಎಂದು ಪ್ರೋತ್ಸಾಹಿಸುತ್ತ ಬಂದರು. ಇರುವ ಸಾಹಿತ್ಯಕ್ಕೆ ಟ್ಯೂನ್ ಹಾಕುವುದು ತುಂಬಾ  ಚಾಲೆಂಜಿಂಗ್ ಕೆಲಸ ಅಂತ ನನಗೂ ಗೊತ್ತು. ಅದನ್ನೆಲ್ಲ ಮನೋಹರ್ ಅವರು ನಿಭಾಯಿಸಿದ್ದಾರೆ,  ನಾನು ಹೊರಗಿನ ಸಿಂಗರ್ ಕರೆಸೋಣ ಎಂದಾಗ ಮನೋಹರ್ ಅವರು ಬೇಡ, ನಮ್ಮವರಿಂದಲೇ ಹಾಡಿಸೋಣವೆಂದು ಹೇಳಿದರು. ಉಪೇಂದ್ರ ಅವರ ಹಾಡಂತೂ ಅದ್ಭುತವಾಗಿ ಬಂದಿದೆ ಎಂದು ಹೇಳಿದರು.  ನಾಯಕಿ ಜಾಹ್ನವಿ ಮಾತನಾಡಿ ಈ ಚಿತ್ರದಲ್ಲಿ ನಾನು ಅಪ್ಪರ್ ಮಿಡಲ್ ಕ್ಲಾಸ್ ಹುಡುಗಿಯ ಪಾತ್ರ ಮಾಡಿದ್ದೇನೆ.
ಸೈಕಾಲಜಿ ಸ್ಟೂಡೆಂಟ್, ರಜೆಗೆಂದು ಊರಿಗೆ ಬಂದಾಗ ಹೀರೋ ಜತೆ  ಸ್ನೇಹ ಆಗಿ ಪ್ರೀತಿ ಬೆಳೆಯುತ್ತೆ, ಲೈಫ್ ಪಾರ್ಟ್ನರ್ ಆಗಿ ನಾಯಕನ ಗುರಿ ಸಾಸಲು ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಹೇಳಿದರು. ಆಡಿಯೋ ಹಕ್ಕು ಪಡೆದಿರುವ ಸಿರಿ ಮ್ಯೂಸಿಕ್‌ನ ಸುರೇಶ್ ಚಿಕ್ಕಣ್ಣ ಮಾತನಾಡಿ ಛಾಯಾಗ್ರಾಹಕ ಸಾಮ್ರಾಟ್ ಅವರು ಹಾಡುಗಳ ಒಂದೊಂದು ಫ್ರೇಮನ್ನು ಅದ್ಭುತವಾಗಿ ಇಟ್ಟಿದ್ದಾರೆ. ಬಾಂಬೆ ಸಿಂಗರನ್ನು ಕರೆಸಬೇಕೆನ್ನುವುದು ನಿರ್ಮಾಪಕರ ಪ್ಲಾನ್ ಆಗಿತ್ತು, ಉಪೇಂದ್ರ ಅವರ ಹಾಡು ವೈರಲ್ ಆಗುತ್ತದೆ ಎಂದು ಹೇಳಿದರು.    
 
ನಂತರ ನಿರ್ದೇಶಕ ವಿ.ಮನೋಹರ್ ಮಾತನಾಡುತ್ತ  ಸತೀಶ್ ಅವರು ತಮ್ಮ ಚಿತ್ರವೊಂದಕ್ಕೆ ಹಾಡು ಬರೆಸಲು ಬಂದಾಗ ಸ್ನೇಹಿತರಾದರು. ಇದಕ್ಕೂ  ಮುಂಚೆ ನಿರ್ದೇಶನದ ಪ್ರಯತ್ನಗಳು ನಡೆಯುತ್ತಲೇ ಇತ್ತು. ಆಗಲಿಲ್ಲ,  ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಕಥೆಯದು. ನನಗೂ ಹಳ್ಳಿ ರಾಜಕೀಯದ ಬಗ್ಗೆ  ಆಸಕ್ತಿಯಿತ್ತು. ಹಾಗಾಗಿ  ನಾನು ನಿರ್ದೇಶನ ಮಾಡಲು ಒಪ್ಪಿಕೊಂಡೆ. ಮದ್ದೂರು ಬಳಿಯ ಹಳ್ಳಿಯೊಂದರಲ್ಲಿ  ಈ ಚಿತ್ರಕ್ಕೆ  ಶೂಟ್ ಮಾಡಿದಾಗ ಅಲ್ಲಿನ ಜನರೂ ನಮಗೆ ತುಂಬಾ ಸಹಕಾರ  ನೀಡಿದರು ಎಂದು ಹೇಳಿದರು.  ಛಾಯಾಗ್ರಾಹಕ ಸಾಮ್ರಾಟ್ ಎಸ್. ಮಾತನಾಡಿ ಸತೀಶ್ ನನಗೆ ೧೦ ವರ್ಷಗಳ ಸ್ನೇಹಿತರು. ಒಂದು ಸಿನಿಮಾ ಮಾಡಬೇಕೆಂದು ಪ್ಲಾನ್ ಮಾಡಿದೆವು. ಗೋವಾದಲ್ಲಿ ಡ್ಯುಯೆಟ್ ಸಾಂಗ್, ಮದ್ದೂರಲ್ಲಿ ಹೀರೋ ಇಂಟ್ರೊಡಕ್ಷನ್ ಸಾಂಗ್ ಮಾಡಿದ್ದೇವೆ. ಮೋಹನ್ ಕೊರಿಯೋಗ್ರಾಫ್ ಮಾಡಿದ್ದಾರೆ  ಎಂದರು. 
 
ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಸಾಧುಕೋಕಿಲ, ನವೀನ್ ಡಿ, ಪಡೀಲ್, ಹುಲಿ ಕಾರ್ತೀಕ್, ಕಾಮಿಡಿ ಸಂತು ಹಾಗೂ ತ್ರಿವೇಣಿ ಹೀಗೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ  ಅಭಿನಯಿಸಿದ್ದಾರೆ.  ಚಿತ್ರದಲ್ಲಿ  ೩ ಹಾಡುಗಳಿದ್ದು, ಟೈಟಲ್ ಸಾಂಗನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ, ಇನ್ನು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ, ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ಆಕ್ಷನ್ ಕಟ್ ಹೇಳುವ  ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ಅವರ ನಿರ್ದೇಶನದ ಮೂರನೇ ಚಿತ್ರವಿದು. ಈ ಚಿತ್ರವನ್ನು ದರ್ಬಾರ್ ಪ್ರೊಡಕ್ಷನ್ಸ್ ಮೂಲಕ ಸತೀಶ್ ಅವರ ಪತ್ನಿ  ಬಿ.ಎನ್. ಶಿಲ್ಪ ಅವರು  ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಅವರ ಸಾರಥ್ಯದ ೩ ಸಾಹಸ ದೃಶ್ಯಗಳು ಈ ಚಿತ್ರದಲ್ಲಿವೆ, ಮಂಡ್ಯ, ಮದ್ದೂರು ಹಾಗೂ ಕೋಲಾರ ಸಮೀಪದ ಮಾಲೂರಿನಲ್ಲಿ  ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed