ಧನಂಜಯ್ ಅಭಿನಯದ `ಗುರುದೇವ್ ಹೊಯ್ಸಳ`ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ಎಲ್ಲರ ಗಮನಸೆಳೆದಿದ್ದ ಮಯೂರಿ ನಟರಾಜ್, ಇದೀಗ `ಇಬ್ಬನಿ ತಬ್ಬಿದ ಇಳೆಯಲಿ` ಚಿತ್ರಕ್ಕೆ ಎರಡನೆಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಪರಂವಾ ಸ್ಟುಡಿಯೋಸ್ನಡಿ ರಕ್ಷಿತ್ ಶೆಟ್ಟಿ ನಿರ್ಮಿಸಿ, ಚಂದ್ರಜಿತ್ ಬೆಳ್ಳಿಯಪ್ಪ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ `ಇಬ್ಬನಿ ತಬ್ಬಿದ ಇಳೆಯಲಿ` ಚಿತ್ರವು ಇದೀಗ ಮುಕ್ತಾಯ ಹಂತ ತಲುಪಿದ್ದು, ಚಿತ್ರತಂಡಕ್ಕೆ ಮಯೂರಿ ನಟರಾಜ್ ಸೇರ್ಪಡೆಯಾಗಿದ್ದಾರೆ.
ಇದೊಂದು ಪ್ರಮುಖ ಪಾತ್ರವಾಗಿದ್ದು, ಈಗಾಗಲೇ ಮಯೂರಿ ನಟರಾಜ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಮಯೂರಿ ನಟರಾಜ್ ನಟನೆಯ ಭಾಗದ ಚಿತ್ರೀಕರಣ ಮುಕ್ತಾಯವಾಗಲಿದೆ.
ಇದಕ್ಕೂ ಮುನ್ನ `ಮ್ಯಾನ್ ಆಫ್ ದಿ ಮ್ಯಾಚ್`, `ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ` ಮತ್ತು `ಗುರುದೇವ್ ಹೊಯ್ಸಳ` ಚಿತ್ರಗಳಲ್ಲಿ ಅಭಿನಯಿಸಿದ್ದ ಮಯೂರಿ ನಟರಾಜ್, ಸಿಟಿಆರ್ ಹೋಟೆಲ್ ನ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದರು. ಈಗ `ಇಬ್ಬನಿ ತಬ್ಬಿದ ಇಳೆಯಲಿ` ಚಿತ್ರದಲ್ಲಿ ಅವರೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
`ಇಬ್ಬನಿ ತಬ್ಬಿದ ಇಳೆಯಲಿ` ಒಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ಮೂರು ವಿಭಿನ್ನ ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿದೆ. ವಿಹಾನ್ ಮತ್ತು ಅಂಕಿತಾ ಅಮರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಮತ್ತು ಶ್ರೀವತ್ಸನ್ ಸೆಲ್ವರಾಜನ್ ಅವರ ಛಾಯಾಗ್ರಹಣವಿದೆ.