ಡಬ್ಬಿಂಗ್ ಆರಂಭಿಸಿದ `ಅನ್ ಲಾಕ್ ರಾಘವ`
Posted date: 12 Wed, Apr 2023 08:55:25 AM
ವಿಭಿನ್ನ ಟೈಟಲ್ ನಿಂದಲೇ ಗಮನ ಸೆಳೆದಿರುವ ‘ಅನ್ಲಾಕ್ ರಾಘವ’ ಚಲನಚಿತ್ರದ ಡಬ್ಬಿಂಗ್ ಪಿ.ಆರ್.ಕೆ. ಆಡಿಯೋ ಸ್ಟುಡಿಯೋದಲ್ಲಿ ಆರಂಭವಾಗಿದೆ. ಈ ಸಿನಿಮಾದ ನಾಯಕಿ ರೇಚಲ್ ಡೇವಿಡ್ ತಮ್ಮ ಪಾತ್ರಕ್ಕಾಗಿ ಕನ್ನಡ ಪದಗಳ ಉಚ್ಛಾರಣೆಯನ್ನು ಕಲಿತು, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡುತ್ತಿರುವುದು ವಿಶೇಷ. ತನ್ನ ಈ ಪ್ರಯತ್ನಕ್ಕೆ ಅನ್ಲಾಕ್ ರಾಘವ ಚಲನಚಿತ್ರ ತಂಡ ತುಂಬಾ ಸಹಕಾರ ನೀಡುತ್ತಿದೆ ಎಂದು ನಾಯಕಿ ರೇಚಲ್ ಡೇವಿಡ್ ಹರ್ಷ ವ್ಯಕ್ತಪಡಿಸಿದ್ದಾರೆ.

ಅನ್ಲಾಕ್ ರಾಘವ ಚಿತ್ರತಂಡ ಚಿತ್ರದುರ್ಗ ಹಾಗೂ ಬೆಂಗಳೂರಿನಲ್ಲಿ 60 ದಿನಗಳ ಕಾಲ ಸಿನಿಮಾ ಶೂಟಿಂಗ್ ನಡೆಸಿದೆ. ಅನ್ಲಾಕ್ ರಾಘವದಲ್ಲಿ ಚಿತ್ರ ಸಿನಿಗೀತೆಪ್ರೇಮಿಗಳಿಗಾಗಿಯೇ ಕುಣಿಸಿ-ತಣಿಸುವ ಮೂರು ಹಾಡುಗಳ ರಸದೌತಣವಿದ್ದರೆ, ಆ್ಯಕ್ಷನ್ ಪ್ರಿಯರಿಗಾಗಿ ಬರೋಬ್ಬರಿ ನಾಲ್ಕು ವಿಭಿನ್ನ ಫೈಟ್ ಗಳ ಸಖತ್ ಮನರಂಜನೆಯಿದೆ ಎಂದು ಚಿತ್ರದ ನಿರ್ದೇಶಕರಾದ ದೀಪಕ್ ಮಧುವನಹಳ್ಳಿ ಮಾಹಿತಿ ನೀಡಿದ್ದಾರೆ. ಜೊತೆಗೆ “ನಿರ್ದೇಶಕ, ಫೈಟ್ ಮಾಸ್ಟರ್, ನೃತ್ಯ ನಿರ್ದೇಶಕರು ಮೂವರೂ ಒಂದು ವಿಶೇಷ ಗೀತೆಯನ್ನು ವಿಭಿನ್ನವಾಗಿ ಒಟ್ಟಾಗಿ ಸಂಯೋಜಿಸಿದ್ದು, ಅದ್ಭುತವಾಗಿ ಮೂಡಿಬಂದಿದೆ” ಎಂದೂ ಕೂಡ ಹೇಳಿದ್ದಾರೆ.

ಇತ್ತೀಚಿಗಷ್ಟೇ ಯುಗಾದಿ ಹಬ್ಬದ ವಿಶೇಷವಾಗಿ ‘ಅನ್ ಲಾಕ್ ರಾಘವ’  ಚಿತ್ರತಂಡ ಬಿಡುಗಡೆ ಮಾಡಿದ್ದ ಸಿನಿಮಾದ ಎರಡನೆಯ ಪೋಸ್ಟರ್ ಕೂಡ ವೈರಲ್ ಆಗಿದೆ. ‘ಅನ್ಲಾಕ್ ರಾಘವ’ ಸಿನಿಮಾವನ್ನು, ಇದೇ ವರ್ಷ ಜುಲೈ ಅಂತ್ಯದ ಒಳಗಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ.

‘ಅನ್ ಲಾಕ್ ರಾಘವ’ ಚಿತ್ರವನ್ನು ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ಮಂಜುನಾಥ್ ದಾಸೇಗೌಡ, ಡಿ ಸತ್ಯಪ್ರಕಾಶ್ ಹಾಗೂ ಗಿರೀಶ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದು, ದೀಪಕ್ ಮಧುವನಹಳ್ಳಿ ಅವರು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದು, ಲವಿತ್ ಛಾಯಾಗ್ರಾಹಣ, ಅನೂಪ್ ಸೀಳಿನ್ ಸಂಗೀತ, ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಧನಂಜಯ್ ಮಾಸ್ಟರ್ ಹಾಗೂ ಮುರಳಿ ಮಾಸ್ಟರ್ ನೃತ್ಯನಿರ್ದೇಶನದಲ್ಲಿ  ಹಾಡುಗಳು ಮೂಡಿಬಂದಿದ್ದು, ವಿನೋದ್ ಮಾಸ್ಟರ್ ಮತ್ತು ಅರ್ಜುನ್ ಮಾಸ್ಟರ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಮಿಲಿಂದ್ ನಾಯಕನಾಗಿ ಹಾಗೂ ರೇಚಲ್ ದೇವಿಡ್ ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಅವಿನಾಶ್, ಶೋಭರಾಜ್, ರಮೇಶ್ ಭಟ್, ವೀಣಾ ಸುಂದರ್, ಸುಂದರ್, ಧರ್ಮಣ್ಣ ಕಡೂರು, ಸಾಯಿ ಕುಡ್ಲ, ಭೂಮಿ ಶೆಟ್ಟಿ, ಮೂಗೂರು ಸುರೇಶ್, ಅಥರ್ವ ಪ್ರಕಾಶ್, ಶ್ರೀದತ್ತ, ಬೃಂದಾ ವಿಕ್ರಮ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed