ಕನ್ನಡ ಚಿತ್ರರಂಗ ಅಲ್ಲದೆ ಇಡೀ ಭಾರತೀಯ ಚಿತ್ರೋದ್ಯಮದಲ್ಲೇ ದೊಡ್ಡ ಮಟ್ಟದ ನಿರೀಕ್ಷೆ ಕುತೂಹಲವನ್ನು ಹುಟ್ಟುಹಾಕಿರುವ ಚಿತ್ರ ಸೂಪರ್ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ. ಕನ್ನಡದಲ್ಲೇ ಅತಿದೊಡ್ಡ ಪ್ಯಾನ್ಇಂಡಿಯಾ ಚಿತ್ರವಿದು ಎನ್ನಬಹುದು. ಕೆಜಿಎಫ್ ಚಿತ್ರ ಪ್ಯಾನ್ಇಂಡಿಯಾ ಮಟ್ಟದಲ್ಲಿ ರಿಲೀಸಾಗುವ ಮೂಲಕ ಕನ್ನಡ ಚಿತ್ರಗಳಿಗೆ ಪರಭಾಷೆಯಲ್ಲಿ ದೊಡ್ಡ ಮಾರ್ಕೆಟ್ ಸೃಷ್ಟಿಸಿತ್ತು. ಆ ಚಿತ್ರದ ಬಳಿಕ ಈಗ ಕಬ್ಜ ಅದೇ ರೇಂಜಿನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ರಿಲೀಸ್ ಡೇಟ್ ಪುನೀತ್ ಹುಟ್ಟುಹಬ್ಬವಾದ ಮಾರ್ಚ್ 17 ಅಂತ ಈಗಾಗಲೇ ನಿಗದಿಪಡಿಸಲಾಗಿದೆ.
ಕೆಜಿಎಫ್ ಚಿತ್ರವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಿರ್ದೇಶಕ ನಿರ್ಮಾಪಕ ಆರ್.ಚಂದ್ರು ಅವರು ಪ್ಯಾನ್ ಇಂಡಿಯಾ ಚಿತ್ರವಾಗಿ ಕಬ್ಜವನ್ನು ಹೊರತರುತ್ತಿದ್ದಾರೆ. ಸೂಪರ್ಸ್ಟಾರ್ ಉಪೇಂದ್ರ ನಾಯಕನಾಗಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಒಂದು ಬಹುಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ಪ್ರಥಮ ಲಿರಿಕಲ್ ಹಾಡು ಫೆ.೪ರಂದು ಹೈದರಾಬಾದ್ನಲ್ಲಿ ವೇದಿಕೆ ಸಮಾರಂಭದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ, ಈ ಕುರಿತು ಮಾಹಿತಿ ನೀಡಲೆಂದು ಮಾದ್ಯಮ ಮಿತ್ರರನ್ನು ಆರ್.ಚಂದ್ರು ಅವರು ಆಹ್ವಾನಿಸಿದ್ದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಚಂದ್ರು, ಅಪ್ಪು ಸರ್, ನಮ್ಮ ಚಿತ್ರದ ಮೇಕಿಂಗ್ ನೋಡಿ ಮೆಚ್ಚಿಕೊಂಡು ಅದ್ಭುತವಾಗಿ ಮಾಡಿದ್ದೀರಿ, ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದ್ದನ್ನು ನೆನಪಿಸಿಕೊಂಡರು.
ಪುನೀತ್ ಅಗಲಿಕೆಯ ನಂತರ ಬಿಡುಗಡೆಯಾದ ಬಹುತೇಕ ಚಿತ್ರಗಳ ಪ್ರಾರಂಭದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು, ಕೆಜಿಎಫ್, ಕಾಂತಾರಾ ಚಿತ್ರಗಳಲ್ಲೂ ಸಹ ಅವನ್ನು ನೆನಪು ಮಾಡಿಕೊಂಡಿದ್ದರು. ಇದೀಗ ನಿರ್ದೇಶಕ ಆರು.ಚಂದ್ರು ಅವರು ತಮ್ಮ ಕಬ್ಜ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.
ಕಬ್ಜ ಚಿತ್ರದ ಮೊದಲ ಲಿರಿಕಲ್ ಹಾಡನ್ನು ಹೈದರಾಬಾದ್ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ ಚಂದ್ರು, ಟೀಸರ್ ಬಿಡುಗಡೆಯ ನಂತರ ನಮ್ಮ ಚಿತ್ರ ಬೇರೆಯದೇ ಲೆವೆಲ್ಗೆ ಹೋಗಿದೆ. ಅಪ್ಪು ಸರ್ ಸುಮಾರು ಸಲ ನಮ್ಮ ಸೆಟ್ಗೆ ಬಂದಿದ್ದಾರೆ. ಅವರು ನನ್ನ ಬಗ್ಗೆ ತುಂಬಾ ಕಾಳಜಿ ತಗೊಳ್ತಾ ಇದ್ದರು. ಏನು, ಇಷ್ಟೊಂದು ಖರ್ಚು ಮಾಡ್ತಾ ಇದ್ದೀರಾ, ಹೆಂಗೆ ರಿಕವರಿ ಮಾಡ್ತೀರಾ ಅಂತ ಯಾವಾಗ ಬಂದ್ರೂ ಹೆಗಲಮೇಲೆ ಕೈಹಾಕಿ ಸೈಡ್ಗೆ ಕರೆದುಕೊಂಡು ಹೋಗಿ ಹುಷಾರಾಗಿ ಮಾಡಿ, ಇಷ್ಟುಜನ, ಇಂಥಸೆಟ್ ಎಂದು ತುಂಬಾ ಎಕ್ಸೈಟ್ ಆಗಿ ಮಾತನಾಡುತ್ತಿದ್ದರು. ಏನೇ ರಿಲೀಸ್ ಮಾಡಿದಾಗಲೂ ಕಾಲ್ಮಾಡಿ, ಸದಾ ನನ್ನನ್ನು ಹುರಿದುಂಬಿಸುವ ಮಾತುಗಳನ್ನಾಡುತ್ತಿದ್ದರು ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಚಂದ್ರು, ಅಪ್ಪು ಸರ್, ನಿಧನರಾಗುವ ವಾರದ ಹಿಂದಷ್ಟೇ ನನಗೆ ಕರೆಮಾಡಿ ಚಿತ್ರದ ಮೋಷನ್ ಪೋಸ್ಟರ್ ಬಗ್ಗೆ ಮೆಚ್ಚಿ ಮಾತಾಡಿದ್ದರು ಎಂದರು. ಅಷ್ಟೇ ಅಲ್ಲದೆ ತಲೆ ಕೆಡಿಸಿಕೊಳ್ಳಬೇಡ, ಪ್ರಮೋಷನ್ ಸಮಯದಲ್ಲಿ ನಾನು ನಿಮ್ಮ ಜೊತೆ ಇರುತ್ತೇನೆ, ಟೀಸರನ್ನು ನಾನೇ ಬಿಡುಗಡೆ ಮಾಡುತ್ತೇನೆ ಎಂದಿದ್ದರು, ಆದರೆ ಈದಿನ ಅವರಿಲ್ಲ, ನನ್ನ ಈ ಚಿತ್ರವನ್ನು ಅವರಿಗೆ ಅರ್ಪಿಸುತ್ತಿದ್ದೇನೆ, ಅವರು ನಮ್ಮ ಚಿತ್ರದಲ್ಲಿ ನಟಿಸದಿದ್ದರೂ ಚಿತ್ರದ ಕ್ವಾಲಿಟಿ ಹಾಗೂ ಕಂಟೆಂಟ್ ನೋಡಿ ಮೆಚ್ಚಿಕೊಂಡು ಬೆನ್ನುತಟ್ಟಿದ್ರು, ಅವರರೀತಿ ನನ್ನನ್ನು ಯಾರೂ ಸಹ ಹುರಿದುಂಬಿಸಿಲ್ಲ, ಹೀಗಾಗಿ ಅವರ ಹುಟ್ಟುಹಬ್ಬದ ದಿನವೇ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದು, ಅದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ನಿರ್ದೇಶಕ ಚಂದ್ರು ತಿಳಿಸಿದರು.