19.20.21 ಅಸ್ಥಿತ್ವಕ್ಕಾಗಿ ಮುಗ್ಧ ಜನರ ಹೋರಾಟ -4/5 ****
Posted date: 05 Sun, Mar 2023 01:11:10 PM
ಕಾಡಂಚಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡ ಮುಗ್ಧ ಜನರ ಬದುಕು, ಬವಣೆಯ ಕಥೆ ಹೊತ್ತ ಒಂದಷ್ಟು ಚಿತ್ರಗಳು ಈಗಾಗಲೇ ಬಂದುಹೋಗಿವೆ. ಅಂಥದ್ದೇ ಒಂದು ನೈಜ ಕಥೆ ಹೇಳುವ  ಚಿತ್ರ 19.20.21. ಕರಾವಳಿ ಭಾಗದ ಕಾಡಂಚಲ್ಲಿ ವಾಸಿಸುವ ಮಲೆಕುಡಿ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಯುವಕನೊಬ್ಬ ಹೇಗೆ ಹೋರಾಡಿ  ಗೆದ್ದುಬಂದ ಎಂಬುದನ್ನು ಹೇಳುವ  ಕಥೆಯಿದು.  ನಕ್ಸಲ್‌ನಂಟು, ಅರಣ್ಯ ಸಂಪತ್ತಿನ ನಾಶ ಹೀಗೆ  ಹಲವು ಆರೋಪಗಳನ್ನು ಹೊರಿಸಿ ಆ ಜನರ ಬದುಕನ್ನೇ ನಾಶಗೊಳಿಸುವ  ಸಂಚಿನ  ವಿರುದ್ದ  ಧ್ವನಿ ಎತ್ತಿ,  ಕಾನೂನಿನ ಅಡಿಯಲ್ಲಿ ಸಂವಿಧಾನದ ಮಾರ್ಗಸೂಚಿಯಂತೆ ತಮ್ಮ ಹಕ್ಕನ್ನು   ಹೇಗೆ ಪಡೆಯಬೇಕು ಎಂಬುದನ್ನು ಸೂಕ್ಷ್ಮ ಅಂಶಗಳೊಂದಿಗೆ  ಈ   ಚಿತ್ರದಲ್ಲಿ ಹೇಳಲಾಗಿದೆ. ದಶಕಗಳ ಕಾಲದಿಂದ ಅಲ್ಲಿನ  ಜನ ತಾವಾಯಿತು, ತಮ್ಮ ಬದುಕಾಯ್ತು ಎನ್ನುವಂತೆ  ಕಾಡಿನ ಬದುಕನ್ನೇ ತಮ್ಮ ಜೀವನವಾಗಿಸಿಕೊಂಡು ದಟ್ಟ ಅರಣ್ಯದ ನಡುವೆ ನೆಮ್ಮದಿಯಿಂದಿದ್ದವರು, ಮಲೆಕುಡಿ ಜನಾಂಗದವರು. 

ಈ ಕುಟುಂಬದಲ್ಲಿ  ಕೆಲವರ ಮಕ್ಕಳು ಸಿಟಿಯ  ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ  ಮುಂದುವರೆಸಿರುತ್ತಾರೆ. ಅಂಥವರಲ್ಲಿ  ಮಂಜು ( ಶೃಂಗ. ಬಿ.) ಕೂಡ ಒಬ್ಬ.  ಅರಣ್ಯದಲ್ಲಿ ಆಗಾಗ ನಕ್ಸಲೈಟ್ ಚಟುವಟಿಕೆಗಳು ನಡೆದಾಗ ಅವರಿಗೆ ಆದಿವಾಸಿಗಳು  ಬೆಂಬಲ ನೀಡುತ್ತಿದ್ದಾರೆ  ಎಂಬ ಕಾರಣವೊಡ್ಡಿ,  ನಕ್ಸಲ್ ನಿಗ್ರಹದಳ ಅಲ್ಲಿನ ಆದಿವಾಸಿಗಳನ್ನು ಹಿಂಸಿಸಿ ವಿಚಾರಣೆ  ನಡೆಸುತ್ತಾರೆ. ಇದು ಮುಗ್ಧ ಜನರ ಬದುಕನ್ನೇ ಹಾಳುಮಾಡುತ್ತಾ ಹೋಗುತ್ತದೆ. ಈ ವಿಚಾರ ಸುದ್ದಿ ವಾಹಿನಿಗಳ  ಹಾಗೂ ಹೋರಾಟಗಾರರ ಗಮನಕ್ಕೂ ಬರುತ್ತದೆ. ವಿದ್ಯಾರ್ಥಿ ಮಂಜು ಈ ಜನರ ನೋವು, ಸಂಕಷ್ಟವನ್ನು ಹೋರಾಟಗಾರರ ಗಮನಕ್ಕೆ ತರುತ್ತಾನೆ. ಅವರ ಜೊತೆ ನಿಂತು ನ್ಯಾಯಯುತ ಹೋರಾಟಕ್ಕೆ  ಮುಂದಾಗುತ್ತಾನೆ. ಇದು ಸರಕಾರಕ್ಕೂ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಈ ನಡುವೆ  ಮಂಜು ಹಾಗೂ ಅವನ ತಂದೆ ರಾಮಣ್ಣ  ನಕ್ಸಲಿಗರ ಜೊತೆ ಕೈಜೋಡಿಸಿದ್ದಾರೆ ಎಂದು ಆರೋಪ ಹೊರಿಸಿ ಅವರನ್ನು  ಪೊಲೀಸರು  ತಮ್ಮ ವಶಕ್ಕೆ ಪಡೆಯುತ್ತಾರೆ.   

ಮಂಜು ವಿದ್ಯಾವಂತ, ಆತನ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು, ಉತ್ತಮ ಭವಿಷ್ಯ ಇರುವ ಮಂಜುಗೆ  ನಕ್ಸಲ್ ಹಣೆಪಟ್ಟಿಯಿಂದ ಮುಕ್ತಗೊಳಿಸಬೇಕು ಎಂದು  ಹೋರಾಟಗಾರರು ಮಂಜು ಹಾಗೂ ಅವನ ತಂದೆಯನ್ನು ಆರೋಪದಿಂದ ಮುಕ್ತಿಗೊಳಿಸಲು ಲಾಯರ್ ಮೂಲಕ ಕಾನೂನು ಹೋರಾಟಕ್ಕೆ ಮುಂದಾಗುತ್ತಾರೆ. ಈ ವಿಚಾರ  ದೇಶದಾದ್ಯಂತ ಸುದ್ದಿಯಾಗಿ ಪಾರ್ಲಿಮೆಂಟ್‌ನಲ್ಲೂ ಇದರ ಬಗ್ಗೆ ಚರ್ಚೆಯಾಗುತ್ತದೆ. ಮುಂದೆ ಈ ವಿಚಾರ ಮತೊಂದು ತಿರುವು ಪಡೆದುಕೊಳುತ್ತದೆ. ಆದಿವಾಸಿಗಳ ಹೋರಾಟಕ್ಕೆ  ನ್ಯಾಯ ಸಿಗುತ್ತಾ ? ತಮ್ಮ ಮೇಲೆ ಬಂದಿದ್ದ ಆರೋಪದಿಂದ ಅವರು ಮುಕ್ತರಾಗುತ್ತಾರಾ ?  ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಚಿತ್ರದಲ್ಲಿದೆ.  ನಿರ್ದೇಶಕ ಮಂಸೋರೆ ಅವರು ಚಿತ್ರಕ್ಕಾಗಿ ಸಾಕಷ್ಟು ಅಧ್ಯಯನ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಆ ಜನರ ಬದುಕು, ಭಾವನೆಗಳ ಜೊತೆ ಪೊಲೀಸ್ ನಡುವಳಿಕೆ, ನಕ್ಸಲ್ ನಿಗ್ರಹದಳದ ಆರ್ಭಟ ಇವರಿಗೆ ಸಹಕರಿಸುವ ಅಧಿಕಾರಿಗಳು. ಸಂವಿಧಾನದಲ್ಲಿರುವ ಆರ್ಟಿಕಲ್ ೧೯.೨೦.೨೧ ಬಗ್ಗೆ ಅರಿವು ಪ್ರತಿಯೊಬ್ಬ ನಾಗರಿಕರಿಗೂ  ಎಷ್ಟು ಮುಖ್ಯ ಎಂಬುದನ್ನು ಹೇಳಿರುವ  ರೀತಿ ಗಮನಾರ್ಹವಾಗಿದೆ.  

ಈ ಮೂಲಕ ಮತ್ತೊಂದು ಉತ್ತಮ ಚಿತ್ರವನ್ನು ನೀಡಿರುವ ನಿರ್ಮಾಪಕ ದೇವರಾಜ್. ಆರ್. ಅವರ ಜೊತೆ  ಸಹ ನಿರ್ಮಾಪಕರಾಗಿ ಸತ್ಯ ಹೆಗಡೆ  ಸಾತ್ ನೀಡಿದ್ದಾರೆ.  ಚಿತ್ರದಲ್ಲಿ  ಶಿವು. ಬಿ.ಕುಮಾರ್ ಅವರ  ಕ್ಯಾಮೆರಾವರ್ಕ್ ಉತ್ತಮವಾಗಿದೆ.  ಬಿಂದು ಮಾಲಿನಿ ಅವರ ಸಂಗೀತ ಗಮನ ಸೆಳೆಯುತ್ತದೆ. ನಾಯಕ ಶೃಂಗ, ಮಂಜು  ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಲಾಯರ್ ಪಾತ್ರದಲ್ಲಿ   ಬಾಲಾಜಿ ಮನೋಹರ್ ಉತ್ತಮ ಅಭಿನಯ ನೀಡಿದ್ದಾರೆ.  ನಿರ್ದೇಶಕ ಮಂಸೋರೆ ಅವರು ಒಂದು ಸತ್ಯ ಘಟನೆಯನ್ನು ಅಷ್ಟೇ ಅಚ್ಚುಕಟ್ಟಾಗಿ  ತೆರೆಯಮೇಲೆ ಮೂಡಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed