19.20.21ಚಿತ್ರದಲ್ಲಿ ಅನಾವರಣವಾಗಲಿದೆ ವಿಠಲ್ ಮಲೆಕುಡಿಯ ಕಾನೂನು ಹೋರಾಟದ ರೋಚಕ ಕಥೆ
Posted date: 02 Thu, Mar 2023 04:12:10 PM
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಬಹು ನಿರೀಕ್ಷಿತ ಹಾಗೂ ನೈಜ ಘಟನೆ ಆಧಾರಿತ ಸಿನಿಮಾ ‘19.20.21’  ನಾಳೆ ಬಿಡುಗಡೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾವೆಂದು ಹೇಳಿಕೊಂಡು ಬಂದಿದ್ದ ಕಥೆ ಕೊನೆಗೂ ರಿವೀಲ್ ಆಗಿದೆ.

2012 ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಕಾನೂನು ಹೋರಾಟದ ಕಥೆಯೇ ಈ ಸಿನಿಮಾ.  ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ ಮಗನನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ವಿಠಲ್ ಮಂಗಳೂರಿನ ವಿವಿಯಲ್ಲಿ ಪತ್ರಿಕೋಧ್ಯಮ ಓದುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗ ಪೊಲೀಸರು ಕೈಯಲ್ಲಿದ್ದ ಕೋಳ ಕೂಡ ತೆಗೆದಿರಲಿಲ್ಲ. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ವಿಠಲ್ ಅವರಿಗೆ  2021ರಲ್ಲಿ ಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು. 

ವಿಠಲ್ ಮಲೆಕುಡಿಯ ಈ ಹೋರಾಟದ ಕಥೆಯೇ ‘19.20.21’ ಸಿನಿಮಾ. ಆಡಳಿತ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ವಿಠಲ್ ಅವರ ಕಾನೂನು ಹೋರಾಟದ ರೋಚಕ ಕಥೆಯನ್ನು ಸೋಶಿಯಲ್ ಥ್ರಿಲ್ಲರ್ ಕಹಾನಿಯೊಂದಿಗೆ ತೆರೆ ಮೇಲೆ ತರ್ತಿದ್ದಾರೆ ಮಂಸೋರೆ. ಚಿತ್ರದಲ್ಲಿ ವಿಠಲ್ ಮಲೆಕುಡಿಯ ಪಾತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ.ವಿ ನಟಿಸಿದ್ದಾರೆ. 

ಉಳಿದಂತೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed