ಫ್ಯಾಂಟಸಿ ಪ್ರಪಂಚದೊಳಗೊಂದು ವಿಸ್ಮಯ ಕಥೆ
Posted date: 15 Thu, Oct 2020 – 04:15:09 PM

ಹೊಸಬರ ಹೊಸ ಹೊಸ ಆವಿಷ್ಕಾರಗಳು ಸ್ಯಾಂಡಲ್​ವುಡ್​ನಲ್ಲಿ ಸೃಷ್ಟಿಯಾಗುತ್ತಿವೆ. ಕಾಲ್ಪನಿಕ ಕಥೆಗಳನ್ನು ಹೆಣೆದು, ಅದಕ್ಕೆ ಫ್ಯಾಂಟಸಿ ಸ್ಪರ್ಶ ಕೊಡುವ ಕೆಲಸ ನಡೆಯುತ್ತಿದೆ. ಇದೀಗ ಅಂಥದ್ದೇ ಸೈಕಲಾಜಿಕಲ್​ ಥ್ರಿಲ್ಲರ್​ ಸಿನಿಮಾವೊಂದು ಚಂದನವನದಲ್ಲಿ ಸಿದ್ಧವಾಗಿದೆ. ಆ ಚಿತ್ರದ ಹೆಸರು ‘ಫ್ಯಾಂಟಸಿ’.
ಪವನ್​ ಡ್ರೀಮ್​ ಫಿಲಂಸ್​ ಲಾಂಛನದಲ್ಲಿ ಸಿದ್ಧವಾಗಿರುವ ‘ಫ್ಯಾಂಟಸಿ’ ಚಿತ್ರಕ್ಕೆ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಪವನ್ ಕುಮಾರ್ ಆರ್​. ನಿರ್ದೇಶಕರ ತಂದೆ ತಾಯಿಯವರಾದ ಎಂ. ಮಹಾದೇವಿ, ಟಿ. ರಂಗಸ್ವಾಮಿ ಸಹ- ನಿರ್ಮಾಪಕರಾಗಿದ್ದಾರೆ.
ಶೀರ್ಷಿಕೆಗೆ ತಕ್ಕಂತೆ ಭ್ರಮೆ ಮತ್ತು ವಾಸ್ತವದ ನಡುವೆ ಇಡೀ ಕಥೆ ತೆರೆದುಕೊಳ್ಳಲಿದ್ದು, ರೋಚಕ ಟ್ವಿಸ್ಟ್​ಗಳು ಕುತೂಹಲ ಮೂಡಿಸುತ್ತ ಸಾಗಲಿದೆ. ಸದ್ಯ ಸಂಕಲನದ ಕೆಲಸ ನಡೆಯುತ್ತಿದ್ದು, ಗುರುವಾರ ಪವನ್ ಡ್ರೀಮ್ ಫಿಲಂಸ್ ಯೂಟ್ಯೂಬ್ ಚಾನೆಲ್​ನಲ್ಲಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ನಿರ್ದೇಶಕ ಗುರು ದೇಶಪಾಂಡೆ ‘ಸಂಹಾರ’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಚಂದನವನಕ್ಕೆ ಬಂದ ಪವನ್, ಬಳಿಕ ‘ಅಮ್ಮ ಐ ಲವ್​ ಯೂ’, ‘ಆದ್ಯಾ’ ಸಿನಿಮಾಗಳಲ್ಲಿ ನಿರ್ದೇಶಕ ಕೆ.ಎಂ. ಚೈತನ್ಯ ಅವರೊಂದಿಗೆ ಕೆಲಸ ಮಾಡಿದ್ದಾರೆ. ಒಂದರ್ಥದಲ್ಲಿ ಸಿನಿಮಾರಂಗಕ್ಕೆ ಬರುವುದಕ್ಕೆ ಚಿರು ಸರ್ಜಾ ಅವರೇ ಕಾರಣರಾದರೆ, ನಿರ್ದೇಶನದ ಪಾಠವನ್ನು ಚೈತನ್ಯ ಅವರಿಂದ ಕಲಿತಿದ್ದಾರೆ.
ಡ್ರಾಮಾ ಜ್ಯೂನಿಯರ್ಸ್ ಸೀಸನ್​ 3ರಲ್ಲಿ ಅಂತಿಮ ಹಂತ ತಲುಪಿದ್ದ ಸ್ಪರ್ಧಿ ಅನುರಾಗ್​, ‘ಫ್ಯಾಂಟಸಿ’ ಸಿನಿಮಾದ ಕೇಂದ್ರ ಬಿಂದು. ಚಿತ್ರದಲ್ಲಿ ಆತನ ಮಾನಸಿಕ ಸ್ಥಿತಿಗತಿ ಹೇಗೆಲ್ಲ ಬದಲಾಗುತ್ತದೆ. ಅದರಿಂದ ಎದುರಾಗುವ ಅನಾಹುತಗಳೇನು ಎಂಬುದೇ ‘ಫ್ಯಾಂಟಸಿ’ ಚಿತ್ರದ ತಿರುಳು.
ಕಿರುತೆರೆ ಮತ್ತು ಬಿಗ್​ಬಾಸ್ ಮೂಲಕ ಮನೆಮಾತಾಗಿರುವ ನಟಿ ಪ್ರಿಯಾಂಕಾ ಈ ಸಿನಿಮಾದಲ್ಲಿ ನಟಿಸಿದ್ದು, ನೆಗೆಟಿವ್​ ರೀತಿಯ ಪಾತ್ರ ನಿಭಾಯಿಸಿದ್ದಾರೆ. ಇನ್ನುಳಿದಂತೆ ಮೈಸೂರು ಬಾಲ, ಹರಿಣಿ, ಗೋಲ್ಡನ್​ ಸ್ಟಾರ್​ ಗಣೇಶ್ ಅವರ ‘99’ ಚಿತ್ರದಲ್ಲಿ ಯಂಗರ್​ ಗಣೇಶ್​ ಪಾತ್ರ ಮಾಡಿದ್ದ ಹೇಮಂತ್​ ಮುಖ್ಯಭೂಮಿಕೆಯಲ್ಲಿದ್ದಾರೆ. ಇಡೀ ಸಿನಿಮಾ ಬೆಂಗಳೂರು ಸುತ್ತ ಮುತ್ತ 23 ದಿನಗಳ ಕಾಲ ಚಿತ್ರೀಕರಣವಾಗಿದ್ದು, ಮಡಿಕೇರಿಯಲ್ಲಿ 3 ದಿನ ಬೆಂಗಳೂರಿನಲ್ಲಿ ಒಂದು ದಿನದ ಚಿತ್ರೀಕರಣ ಬಾಕಿ ಇದೆ.
ತಾಂತ್ರಿಕ ವರ್ಗದಲ್ಲಿಯೂ ನುರಿತ ತಂತ್ರಜ್ಱರೇ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ. ಪಿ.ಕೆ.ಎಚ್. ದಾಸ್ ಛಾಯಾಗ್ರಹಣ, ಆರ್ ಎಸ್​. ಗಣೇಶ್​ ನಾರಾಯಣ್​ ಮತ್ತು ಶಶಿರಾಮ್​ ಎಂಬುವವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed