ಸಂಧ್ಯಾರಾಗ ಕಲಾದೇಗುಲದಲ್ಲಿ ?ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್
Posted date: 19/December/2010

     ಅದೊಂದು ಮಧ್ಯಮ ವರ್ಗದ ಜನರೇ ವಾಸಿಸುವ ಕಾಲೋನಿ. ಅಲ್ಲಿನ ಜನರಿಗೆಲ್ಲಾ ‘ಜಾನಿ ಎಂದರೆ ಅಚ್ಚುಮೆಚ್ಚು. ಅವರೆಲ್ಲರ ಪ್ರೀತಿಗೆ ಪಾತ್ರನಾದ ಜಾನಿ ಕೂಡ ಅದೇ ಕಾಲೋನಿಯ ನಿವಾಸಿ. ಎಲ್ಲರ ಕಷ್ಟಸುಖಗಳಿಗೆ ಸ್ಪಂದಿಸುವ ಆತನ ಜೀವನದಲ್ಲಿ ಪ್ರಿಯ ಯಾವರೀತಿ ಬರುತ್ತಾಳೆ? ಎಲ್ಲರನ್ನು ಪ್ರೀತಿಸುವ ಜಾನಿಯ ಜೀವದಲ್ಲೂ ಪ್ರೀತಿಯ ಹೂಮಳೆ ಸುರಿಯಿತೆ? ಎಂಬ ಕಥೆ ಹೊಂದಿದ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಮ್‘ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಉದ್ಯಮಿ ದೇವರಾಜ್ ಅವರ ಎಸ್ಟೇಟ್‌ನಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಸಂಧ್ಯಾರಾಗ ಕಲಾದೇಗುಲ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಸುಮಾರು ೮೦ಲಕ್ಷ ವೆಚ್ಚದಲ್ಲಿ ಕಾಲೋನಿಯ ಸೆಟ್ ಹಾಕಿದ್ದರು. ಆಸ್ಪತ್ರೆ, ಚಿತ್ರಮಂದಿರ, ಬಟ್ಟೆ ಅಂಗಡಿ, ಮಲ್ಟಿಪ್ಲೆಕ್ಸ್ ಮೊಬೈಲ್ ಶೋ ರೂಂ ಹೀಗೆ ಎಲ್ಲಾ ರೀತಿಯ ಸೆಟ್‌ಗಳನ್ನು ನಿರ್ಮಿಸಲಾಗಿತ್ತು. ಅನೇಕ ಜನ ಕಾರ್ಮಿಕರ ಪರಿಶ್ರಮದಿಂದ ಸುಮಾರು ಎರಡು ತಿಂಗಳ ಅವಧಿಯಲ್ಲಿ ಈ ಸೆಟ್ ನಿರ್ಮಾಣವಾಗಿದೆ. ಚಿತ್ರದ ೮೦ರಷ್ಟು ಚಿತ್ರೀಕರಣ ಇಲ್ಲೇ ನಡೆಯಲಿದೆ.
     ‘ಹಾಗೆ ಸುಮ್ಮನೆ, ‘ಮಳೆಯಲಿ ಜೊತೆಯಲಿ ನಂತರ ಪ್ರೀತಂಗುಬ್ಬಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಮೂರನೇ ಚಿತ್ರವಿದು. ಗಾಂಧಿ ಕಾಲೋನಿ ಜನರ ಕಷ್ಟಗಳನ್ನು ಪರಿಹರಿಸುವುದೆ ನಾಯಕ ಜಾನಿಯ ಕೆಲಸ. ವಿಜಯ್ ಮನೆಗೆ ಹೋಗಿ ಕಥೆ ಹೇಳಿದಾಗ ಇದುವರೆಗೆ ಆಕ್ಷನ್ ಚಿತ್ರಗಳನ್ನೇ ಮಾಡುತ್ತಿದ ನನಗೆ ಈ ಚಿತ್ರ ಬೇರೆಯದೆ ರೀತಿಯ ಇಮೇಜ್ ನೀಡುತ್ತದೆ. ಮಾಸ್ ಹೀರೋಗೆ ಈತರದ ಪಾತ್ರ ಒಂದು ಬದಲಾವಣೆ ನೀಡುತ್ತದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಎಲ್ಲಾ ಕಲಾವಿದರನ್ನು ಓಪನ್ ಏರಿಯಾದಲ್ಲಿ ಕರೆದುಕೊಂಡು ಹೋಗಿ ಚಿತ್ರೀಕರಿಸುವುದು ಕಷ್ಟದ ಕೆಲಸ. ಜನರನ್ನು ನಿಯಂತ್ರಿಸುವ ಕಡೆ ಗಮನ ಹೋಗಿ ಕಲಾವಿದರಿಗೆ ಏಕಾಗ್ರತೆ ಹೊರಟು ಹೋಗುತ್ತದೆ. ಚಿತ್ರ ಉತ್ತಮವಾಗಿ ಮೂಡಿಬರುವಲ್ಲಿ ತಡೆಯುಂಟಾಗುತ್ತದೆ ಎಂಬ ಉದ್ದೇಶದಿಂದ ನಮ್ಮ ಈ ಯೋಜನೆಯನ್ನು ನಿರ್ಮಾಪಕ ಜಯಣ್ಣ ಅವರಿಗೆ ತಿಳಿಸಿದ್ದಾಗ ಅವರು ಒಪ್ಪಿಗೆ ಸೂಚಿಸಿದರು. ೫೫ದಿನಗಳ ಕಾಲ ಈ ಸೆಟ್‌ನಲ್ಲಿ ಮೂರು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಸಿ ಉಳಿದೆರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರಿಕರಿಸಲಾಗುವುದೆಂದು ಪ್ರೀತಂಗುಬ್ಬಿ ತಿಳಿಸಿದರು.
     ನಾಯಕ ವಿಜಯ್ ಮಾತನಾಡುತ್ತಾ ಜನರ ಮಧ್ಯೆ ಬೆರೆಯುವಂಥ ನನ್ನ ಪಾತ್ರಕ್ಕೆ ಬೆನ್ನೆಲುಬಾಗಿ ರಂಗಾಯಣರಘು, ಕಲರ್ ತುಂಬಲು ರಮ್ಯಾ, ಗೊತ್ತಿಲ್ಲದೆ ಸಹಾಯ ಮಾಡುವ ದತ್ತಣ್ಣ ಇದ್ದು, ಎಲ್ಲರೂ ಸೇರಿ ನನ್ನಂಥ ನಾಟಿ ಕೋಳಿಗೆ ಪಕ್ಕಾ ಬಣ್ಣ ಬಳಿದು ಕಲರ್‌ಫ಼ುಲ್ ಮಾಡಿ ನಿಲಿಸಿದ್ದಾರೆ. ನಟಿ ರಮ್ಯಾ ಜೊತೆ ಮೊದಲ ಬಾರಿಗೆ ಅಭಿನಯಿಸುತ್ತಿರುವುದು ಸಂತಸದ ವಿಷಯ. ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳಿದ್ದು, ಕೆ.ಡಿ.ವೆಂಕಟೇಶ್ ವಿಭಿನ್ನವಾಗಿ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ ಎಂದರು.
    ನಾಯಕಿ ರಮ್ಯಾ ಹೆಸರು ಚಿತ್ರದಲ್ಲಿ ಪ್ರಿಯಾ. ಎನ್.ಆರ್.ಐ ಹುಡುಗಿ ತಾತನನ್ನು ನೋಡಲೆಂದು ಹುಟ್ಟೂರಿಗೆ ಬಂದಿರುತ್ತಾಳೆ. ‘ಮದುವೆಯಾಗೆಂದು ಪೋಷಕರು ನನ್ನನ್ನು ಒತ್ತಾಯಿಸುತ್ತಿರುತ್ತಾರೆ. ಆದರೆ ನನ್ನ ಜೊತೆಗಾರ ಯಾರೆಂದು ನಾನೇ ಆಯ್ಕೆ ಮಾಡಿಕೊಂಡಿರುತ್ತೇನೆ ಎಂದು ರಮ್ಮಾ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು. ದತ್ತಣ್ಣ, ಶರಣ್, ಅಚ್ಯುತ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
    ಈ ಚಿತ್ರದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ‘ಫ಼ಾಂಟಮ್ ಅಲ್ಟ್ರಾ ಮೋಷನ್ ಕ್ಯಾಮೆರಾ ಬಳಸಲಾಗುವುದೆಂದು ಛಾಯಾಗ್ರಾಹಕ ಕೃಷ್ಣ ತಿಳಿಸಿದ್ದಾರೆ.
      ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ಎಸ್.ಕೃಷ್ಣ ಛಾಯಾಗ್ರಹಣ ಹಾಗೂ ಹರ್ಷರ ನೃತ್ಯ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ವಿಜಯ್, ರಮ್ಯಾ, ರಂಗಾಯಣ ರಘು, ದತ್ತಣ್ಣ, ಅಚ್ಯುತಕುಮಾರ್, ಸಾಧುಕೋಕಿಲಾ, ಶರಣ್ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed