ಸೃಜನ್ ಲೋಕೇಶ್ - ಮೇಘನಾರಾಜ್ ಅಭಿನಯದ `ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ`
Posted date: 08 Fri, Nov 2019 – 09:46:15 AM

ಸೃಜನ್ ಲೋಕೇಶ್ - ಮೇಘನಾರಾಜ್ ಅಭಿನಯದ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’  ಚಿತ್ರತಂಡದಿಂದ ಮೊಬೈಲ್ ರೆಸ್ಟ್ ಡೇ
ಸಚಿವ ಸುರೇಶ್ ಕುಮಾರ್ ಅವರಿಂದ ಚಾಲನೆ .
ಆಕಾಶ ಬುಟ್ಟಿ ಸಿನಿಮಾಸ್ ನಿರ್ಮಾಣದ, ವಾಸ್ಕೋಡಿಗಾಮ ಖ್ಯಾತಿಯ ಮಧುಚಂದ್ರ ಅವರ ನಿರ್ದೇಶನದ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ‘ ಚಿತ್ರ  ತನ್ನ ಶೀರ್ಷಿಕೆಯಷ್ಟೇ ವಿಶೇಷವಾದ ಕಥಾನಕ ಹೊಂದಿದೆ. ಟಾಕಿಂಗ್‌ಸ್ಟಾರ್ ಸೃಜನ್ ಲೋಕೇಶ್ ಹಾಗೂ ಮೇಘನಾರಾಜ್ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಮಕ್ಕಳ ಮೊಬೈಲ್ ಗೇಮ್ಸ್ ಹವ್ಯಾಸದಿಂದ ಏನೆಲ್ಲ ದುಷ್ಪರಿಣಾಮಗಳುಂಟಾಗುತ್ತವೆ ಅದರಿಂದ ಪೋಷಕರು ಹೇಗೆ ಪರಿತಪಿಸಬೇಕಾಗುತ್ತೆ ಅಲ್ಲದೆ ತಂದೆ, ತಾಯಿಯ ಮೊಬೈಲ್ ಹವ್ಯಾಸ ಮಕ್ಕಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವ ಕಥೆ ಈ ಚಿತ್ರದಲ್ಲಿದೆ. ಸೃಜನ್ ಇದ್ದಮೇಲೆ ಅಲ್ಲಿ ಕಾಮಿಡಿ ಇರಲೇಬೇಕು ಅಲ್ಲವೆ, ನಿರ್ದೇಶಕರು ಕಾಮಿಡಿ ಕಥೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಗಂಭೀರ ವಿಷಯವನ್ನು ಈ ಚಿತ್ರದ ಮೂಲಕ ತೆರೆಮೇಲೆ ಹೇಳಲು ಪ್ರಯತ್ನಿಸಿದ್ದಾರೆ.  

ಮಕ್ಕಳು ಪಬ್‌ಜಿ, ಬ್ಲೂವೇಲ್‌ನಂತಹ ಆಟಗಳಿಂದ ತಮ್ಮ ಜೀವಗಳನ್ನೇ ಕಳೆದುಕೊಂಡ ಉದಾಹರಣೆಗಳು ಕೂಡ ನಮ್ಮ ಮುಂದಿದೆ. ಇದರಲ್ಲಿ ಪೋಷಕರ ಪಾತ್ರವೂ ಸಹ ಇರುತ್ತದೆ. ಮನೆಯಲ್ಲಿದ್ದಾಗ ತಮ್ಮ ಮಕ್ಕಳೊಂದಿಗೆ ಆಟ, ಪಾಠಗಳಲ್ಲಿ ಭಾಗಿಯಾಗುವುದನ್ನು ಬಿಟ್ಟು ಅವರೂ ಸಹ ವಾಟ್ಸಪ್, ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ನೋಡುವುದರಲ್ಲಿ ಮುಳುಗುವುದು  ನೇರವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ಇಂಥ ಹಲವಾರು ವಿಷಯಗಳನ್ನು  ಈ ಚಿತ್ರದಲ್ಲಿ ಹೇಳಲಾಗಿದೆ.  

ಡಿಸೆಂಬರ್ ಮೊದಲವಾರ ಬಿಡುಗಡೆಯಾಗಲು ಸಿದ್ದವಾಗಿರುವ ಈ ಚಿತ್ರದ ಕುರಿತಂತೆ ಜನರಿಗೆ ತಿಳಿಸಲು ಚಿತ್ರತಂಡ ವಿಶೇಷ ಪ್ರಚಾರವನ್ನು ಕೈಗೊಂಡಿದೆ. ಇತ್ತೀಚೆಗೆ ಕೆಂಗೇರಿಯ ಸೇಂಟ್ ಬೆನೆಡಿಕ್ಟ್ ಶಾಲೆಯ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರು ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ‘ ಚಿತ್ರತಂಡ ಏರ್ಪಡಿಸಿದ್ದ ಮೊಬೈಲ್ ರೆಸ್ಟ್‌ಡೇ’ ಇವೆಂಟ್‌ನ್ನು ೫೦ಕ್ಕೂ ಹೆಚ್ಚು ಶಾಲೆಗಳಿಂದ ಆಗಮಿಸಿದ್ದ ಸಾವಿರಾರು ಮಕ್ಕಳೊಡನೆ ವಾಕಥಾನ್ ಮಾಡುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಚಿವರು ಚಿತ್ರದ ಟೀಸರನ್ನು ಸಹ ಲಾಂಚ್ ಮಾಡಿದರು.

ಮೊಬೈಲ್ ವಿರಾಮ ದಿನಾಚರಣೆ(ಮೊಬೈಲ್ ರೆಸ್ಟ್‌ಡೇ)ಯನ್ನು ಜಾರಿಗೆ ತರಬೇಕೆಂದು ಚಿತ್ರತಂಡ ಸಲ್ಲಿಸಿದ ಮನವಿಗೆ ಸಿಎಂ ಸ್ಪಂದಿಸಿ, ಪರಿಶೀಲಿಸುವುದಾಗಿ ಹೇಳಿದ್ದಾರೆ. ಅಲ್ಲದೆ  ಜನರಲ್ಲಿ ಜಾಗೃತಿ ಮೂಡಿಸಲು ಮಾಡಿರುವ ಈ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಶಮಂತ್ ನಾಗ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ರವೀಂದ್ರನಾಥ್ ಛಾಯಾಗ್ರಹಣ ಹಾಗೂ ಸುರೇಶ್ ಆರ್ಮುಗಂ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಸೃಜಜ್ ಲೋಕೇಶ್, ಮೇಘನಾರಾಜ್, ಅಚ್ಯುತಕುಮಾರ್, ಗಿರಿಜಾ ಲೋಕೇಶ್, ದತ್ತಣ್ಣ, ಸುಂದರರಾಜ್, ಬೇಬಿಶ್ರೀ ಹಾಗೂ ಮಾಸ್ಟರ್ ಆಲಾಪ್, ಚಕ್ರವರ್ತಿ, ಅರುಣ್ ಲೋಕಿ, ಟೋನಿ, ತಿಲಕ್, ಸಿದ್ದು, ಮಂಥನ, ಕನ್ನಿಕಾ, ಅನಿತಾ, ಆರಾಧ್ಯ ಮುಂತಾದವರಿದ್ದಾರೆ. ವಿಶೇಷಪಾತ್ರದಲ್ಲಿ ಸುಧಾ ಬರಗೂರು ಅಭಿನಯಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed