ಐದು ವಿಭಿನ್ನ ಕಥೆಗಳ ಪೆಂಟಗನ್ ಟ್ರೈಲರ್
Posted date: 25 Sat, Mar 2023 09:31:02 AM
ಪೆಂಟಗನ್, ಒಂದೇ ಚಿತ್ರದಲ್ಲಿ ಐದು ಕಥೆಗಳನ್ನು ಹೇಳುವ ಅಂಥಾಲಜಿ ಸಿನಿಮಾ, ಈ ಚಿತ್ರವನ್ನು ನಿರ್ದೇಶಕ ಕಮ್ ನಿರ್ಮಾಪಕ ಗುರು ದೇಶಪಾಂಡೆ ಅವರು ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದು, ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಜಿ.ಅಕಾಡೆಮಿಯ ಒಂದಷ್ಟು ವಿದ್ಯಾರ್ಥಿಗಳು ಸಹ ಇದರಲ್ಲಿ ಕೆಲಸ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಹಾಗೂ ಮಹೇಶ್ ಸುಖಧರೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಐದು ವಿಭಿನ್ನ ಕಥೆಗಳನ್ನು ಒಳಗೊಂಡ ಈ ಚಿತ್ರದಲ್ಲಿ ಬರುವ ೫ ಕಥೆಗಳಿಗೆ ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಹೀಗೆ ಐದು ಜನ ನಿರ್ದೇಶಕರುಗಳು ಆ್ಯಕ್ಷನ್-ಕಟ್ ಹೇಳಿದ್ದಾರೆ. ಮೈಸೂರು ಪಾಕ್, ಕಾಮಾತುರಾಣಾ ನಭಯಂ, ನಲಜ್ಜ, ದೋಣಿಸಾಗಲಿ, ಮಿಸ್ಟರ್ ಗೋಪಿ ಕೆಫೆ ಸೇರಿ ಐದು ಕಥೆಗಳಿರುವ ಈ ಚಿತ್ರದಲ್ಲಿ ಹಿರಿಯನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅನುಷಾ ರೈ, ವಂಶಿಕೃಷ್ಣ, ಅಪೂರ್ವ ಮುಂತಾದವರು ಅಭಿನಯಿಸಿದ್ದು, ವೇದಿಕೆಯಲ್ಲಿ  ಹಾಜರಾದ ಅವರು ತಂತಮ್ಮ ಪಾತ್ರಗಳ ಕುರಿತಂತೆ ವಿವರಣೆ ನೀಡಿದರು, 

ನಂತರ ನಿರ್ದೇಶಕ ಮಹೇಶ್ ಸುಖಧರೆ ಮಾತನಾಡಿ ಗುರು ದೇಶಪಾಂಡೆ ನನ್ನ ಶಿಶ್ಯ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ, ಸೈನಿಕ ಚಿತ್ರದಲ್ಲಿ ನನ್ನಜೊತೆ ಅವರು ಕೆಲಸ ಮಾಡಿದ್ದಾರೆ. ನಾನು ಕೂಡ ಭಾರ್ಗವ ಅವರ ಜೊತೆ ಎಂಟು ವರ್ಷ ಕೆಲಸ ಮಾಡಿದ ನಂತರ ಸಂಭ್ರಮ ಚಿತ್ರದ ಮೂಲಕ ನಿರ್ದೇಶಕನಾದೆ. ಪ್ರಸ್ತುತ ಸಮಾಜಕ್ಕೇನು ಬೇಕೋ ಅದು ಈ ಐದೂ ಕಥೆಗಳಲ್ಲಿದೆ ಅಂತ ಕಾಣುತ್ತೆ, ನಾವುಗಳು ಒಂದು ಸಿನಿಮಾ ಮಾಡೋದೇ ದೊಡ್ಡ ಸಾಹಸವಾಗಿರುತ್ತೆ. ಆದರೆ ಗುರುಗೆ ಡಬಲ್ ಗುಂಡಿಗೆ ಇದೆ. ಐದುಜನ ನಿರ್ದೇಶಕರನ್ನು ಒಟ್ಟಿಗೇ ಸೇರಿಸಿ ಚಿತ್ರ ಮಾಡೋದು ಸುಲಭದ ಮಾತಲ್ಲ ಎಂದು ಹೇಳಿದರು. ನಂತರ ಟಿ.ಎಸ್. ನಾಗಾಭರಣ ಮಾತನಾಡಿ ಜನರಿಗೆ ಏನನ್ನಾದರೂ ಹೊಸದನ್ನು ನೀಡಬೇಕೆಂದರೆ ಈ ಥರದ ಪ್ರಯತ್ನಗಳು ಹೆಚ್ಚು ಹೆಚ್ಚು ನಡೆಯಬೇಕು, ಗುರು ದೇಶಪಾಂಡೆ ಅವರು ಈ ಸಿನಿಮಾದಲ್ಲಿ ಎಲ್ಲಾ ಥರದ ಎಮೋಷನ್‌ಗಳನ್ನು ತಂದಿದ್ದಾರೆ ಎಂದು ಹೇಳಿದರು,     

ಕೊನೆಯಲ್ಲಿ ಮಾತನಾಡಿದ ನಿರ್ಮಾಪಕ ಕಂ ನಿರ್ದೇಶಕ ಗುರು ದೇಶಪಾಂಡೆ, ಈ ಚಿತ್ರವನ್ನು ನಾವು ೨೦೨೦ರಲ್ಲಿ ಶುರು ಮಾಡಿದೆವು. ಎರಡೂ ಕೋವಿಡ್ ಅಲೆಗಳನ್ನು ದಾಟಿ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದೇವೆ. ಚಿತ್ರದಲ್ಲಿ ಬರುವ ಡೆತ್ ಥೀಮ್ ೫ ಕಥೆಗಳಲ್ಲೂ ಕಾಮನ್ ಆಗಿದ್ದು, ಈ ಐದೂ ಕತೆಗಳ ಕೊನೆಯಲ್ಲಿ ಕಾಗೆಯೊಂದು ಕತೆಗಳಿಗೆ ಲಿಂಕ್ ಮಾಡುತ್ತ ಹೋಗುತ್ತದೆ, ಅಲ್ಲದೆ ಸಾಕಷ್ಟು ಹೊಸ ಪ್ರತಿಭೆಗಳಿಗೆ ಈ ಚಿತ್ರದ ಮೂಲಕ ಅವಕಾಶ ನೀಡಿದ್ದೇವೆ ಎಂದು ಹೇಳಿದರು. 

ಗ್ರಾಮೀಣ ಸೊಗಡಿನ ದೋಣಿ ಸಾಗಲಿ ಕಥೆಯನ್ನು ಕಿರಣ್ ಕುಮಾರ್ ನಿರ್ದೇಶಿಸಿದ್ದು, ಇದರ ಮುಖ್ಯ ಪಾತ್ರದಲ್ಲಿ ನಿರ್ಮಾಪಕರ ಪತ್ನಿ ಕೃತಿಕಾ ದೇಶಪಾಂಡೆ, ರವಿಶಂಕರ್ ಇವರೊಂದಿಗೆ ವಂಶಿ, ಅನುಶಾ ರೈ ಮುಂತಾದವರು ನಟಿಸಿದ್ದಾರೆ. ಮತ್ತೊಂದು ಕಥೆಯ ಹೆಸರು ಮೈಸೂರುಪಾಕ್. ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ ಶ್ರೀವತ್ಸ ಇದನ್ನು ನಿರ್ದೇಶಿಸಿದ್ದಾರೆ. ಕೊರೋನಾ ಸಮಯದಲ್ಲಿ ಹಿರಿಯರಿಗೆ ಹೇಗಲ್ಲಾ  ತೊಂದರೆಯಾಯ್ತು ಎಂಬುದನ್ನು ಇದರಲ್ಲಿ ಹೇಳಲಾಗಿದೆ. ಹಿರಿಯನಟ ಬಿರಾದಾರ್ ಹಾಗೂ ಬಾಲನಟಿ ಆರಾಧ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡೇಟಿಂಗ್ ಆಪ್, ಸೋಷಿಯಲ್ ಮೀಡಿಯಾ ವಂಚನೆಗಳಿಗೆ ಯುವಜನತೆ ಹೇಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ರಾಘು ಶಿವಮೊಗ್ಗ ನಿರ್ದೇಶನದ ಕಾಮಾತುರಾಣಾ ನಭಯಂ, ನಲಜ್ಜ ಚಿತ್ರದಲ್ಲಿ ಹೇಳಲಾಗಿದೆ. ಪ್ರಕಾಶ್ ಬೆಳವಾಡಿ, ತನಿಶಾ, ಪ್ರೇರಣಾ ಕಂಬಂ, ಕಿರಣ್ ನಾಯಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಉಳಿದಂತೆ ಚಂದ್ರಮೋಹನ್ ನಿರ್ದೇಶನದ ಕಾಮಿಡಿ ಥ್ರಿಲ್ಲರ್ ಕಥೆ ಹೊಂದಿದ ಮಿಸ್ಟರ್ ಗೋಪಿಕೆಫೆ ಅಲ್ಲದೆ ಗುರು ದೇಶಪಾಂಡೆ ನಿರ್ದೇಶನದ ಚಿತ್ರದಲ್ಲಿ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಅಶ್ವಿನಿ, ನಟ ಪೃಥ್ವಿ ಅಂಬರ್ ಮುಂತಾದವರು ಅಭಿನಯಿಸಿದ್ದಾರೆ. ಯುವ ನಿರ್ದೇಶಕರುಗಳಾದ ಚೇತನ್‌ಕುಮಾರ್(ಜೇಮ್ಸ್), ಕಿರಣ್‌ಕುಮಾರ್(ಚಾರ್ಲಿ) ಜಡೇಶ್‌ಕುಮಾರ್ ಹಂಪಿ(ಜಂಟಲ್‌ಮ್ಯಾನ್), ಮಂಸೋರೆ ಹಾಗೂ ಅಲೆಮಾರಿ ಸಂತು ಹಾಜರಿದ್ದು, ಚಿತ್ರಕ್ಕೆ ಶುಭ ಹಾರೈಸಿದರು,
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed