ರಂಜಾನ್ ಹಸಿದವರ ಹೋರಾಟದ ಕಥೆ
Posted date: 27 Mon, Mar 2023 01:10:22 PM
ಕಿರುತೆರೆ ಅಲ್ಲದೆ ೩೫ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ  ಪೋಷಕಪಾತ್ರದ ಮೂಲಕ ಗುರುತಿಸಿಕೊಂಡಿದ್ದ  ಸಂಗಮೇಶ್ ಉಪಾಸೆ ಅವರು ಸರ್ಕಾರಿ ಹುದ್ದೆಯಲ್ಲಿದ್ದರೂ ಬಣ್ಣದ ಮೇಲಿನ ವ್ಯಾಮೋಹ ಬಿಟ್ಟಿಲ್ಲ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಜೊತೆಗೆ ಬಡ ಮುಸ್ಲಿಂ ಬಡರೈತನೊಬ್ಬನ ಜೀವನದ ಹೋರಾಟದ ಕಥೆಯನ್ನು ತೆರೆದಿಟ್ಟಿರುವ ರಂಜಾನ್  ಚಿತ್ರದಲ್ಲಿ  ನಾಯಕನಾಗಿ ನಟಿಸಿದ್ದಾರೆ. ರಾಜ್ಯಪ್ರಶಸ್ತಿ ವಿಜೇತ ಲೇಖಕ ಫಕೀರ್ ಮಹಮ್ಮದ್ ಕಟ್ಪಾಡಿ ಅವರ ನೋಂಬು ಕಥೆಯನ್ನಾಧರಿಸಿ  ಸಿ.ಈ. ಪಂಚಾಕ್ಷರಿ ಅವರು ನಿರ್ದೇಶಿಸಿರುವ ಈ ಚಿತ್ರ ಬಿಡುಗಡೆಗೆ  ಸಿದ್ದವಾಗಿದೆ. ಇತ್ತೀಚೆಗೆ ಈ ಚಿತ್ರದ  ಟ್ರೈಲರ್ ಬಿಡುಗಡೆಯಾಯಿತು. ಕೆ.ಎಂ. ಇಂದ್ರ ಅವರ ಸಂಗೀತ ಸಂಯೋಜನೆ, ರಂಗಸ್ವಾಮಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಂಗಳೂರು, ಉಡುಪಿ, ಕಟ್ಪಾಡಿ, ಗುಲ್ಪಾಡಿ, ಕುಂದಾಪುರ ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ.

ಪಕೀರ್ ಮಹಮದ್ ಅವರ ನೋಂಬು ಕಥೆಯನ್ನು ಓದಿ,  ಇದೇ ಸಬ್ಜೆಕ್ಟ್ ಮೇಲೆ ಚಿತ್ರ ಮಾಡಿದ್ದೇವೆ. ಇದನ್ನೇಕೆ ಸಿನಿಮಾ  ಮಾಡಹೊರಟಿದ್ದೀರಿ ಎಂದು ಬಹಳ ಜನ ಕೇಳಿದರು, ಹಸಿವು ಎನ್ನುವುದು ಎಲ್ಲರಿಗೂ ಒಂದೇ. ತನ್ನ ಮಗ, ನೆಲ ಎರಡನ್ನೂ ಕಳೆದುಕೊಂಡ ರಂಜಾನ್ ನೋವಿನ ಕಥೆಯಿದು,  ಮಡದಿಯ ಪಾತ್ರವನ್ನು ನನ್ನ ಪತ್ನಿ ಪ್ರೇಮಾವತಿ ಅವರೇ ಮಾಡಿದ್ದಾರೆ. ಮಗಳು ಈಶಾನಿ ಮಗಳಾಗೇ ಅಭಿನಯಿಸಿದ್ದಾಳೆ, ಮುಂದಿನ ತಿಂಗಳು ರಂಜಾನ್ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಹೇಳಿದರು. ನಿರ್ದೇಶಕ ಪಂಚಾಕ್ಷರಿ ಮಾತನಾಡಿ ಸಣ್ಣ ಕಥೆಗಳು ನನ್ನಂಥ ನಿರ್ದೇಶಕರಿಗೆ ಬಹಳ ಕುತೂಹಲ ಹಟ್ಟಿಸುತ್ತವೆ. ಮೂಲಕೃತಿಯ ತನ್ನ ಒಳಾರ್ಥವನ್ನು ಕಳೆದುಕೊಳ್ಳದ ಹಾಗೆ ಅದನ್ನು ತೆರೆಯಮೇಲೆ ತರುವುದು ನಿರ್ದೇಶಕನಿಗೆ ದೊಡ್ಡ ಸವಾಲಾಗಿರುತ್ತದೆ. ಎಲ್ಲರ ಪರಿಶ್ರಮ ಸೇರಿ ಈ ಚಿತ್ರ ನಿರ್ಮಾಣವಾಗಿದ್ದು ಮುಂದಿನ ತಿಂಗಳು ತೆರೆಗೆ ಬರುತ್ತಿದೆ ಎಂದು ಹೇಳಿದರು.
 
ಕಥಾಲೇಖಕ ಫಕೀರ್ ಮಹಮದ್ ಕಟ್ಪಾಡಿ ಮಾತನಾಡಿ ಈ ಕಥೆಯನ್ನು ಸಿನಿಮಾ ಮಾಡಲು ಬಹಳಷ್ಟು ಜನ ನನ್ನನ್ನು ಸಂಪರ್ಕಿಸಿದ್ದರು. ಮಲಯಾಳಂನ ದೊಡ್ಡ ನಟನೊಬ್ಬ ನಟಿಸುವ ಬೇಡಿಕೆಯೂ ಬಂದಿತ್ತು, ಅವರಾರ ಮಾತಿಗಳೂ ನನ್ನಲ್ಲಿ ನಂಬಿಕೆ ತರಲಿಲ್ಲ, ಆದರೆ ಈ ನಿರ್ದೇಶಕರ ಮಾತುಗಳು ಚಿತ್ರವನ್ನು ಚೆನ್ನಾಗಿ ಮಾಡುತ್ತಾರೆಂಬ ಭರವಸೆ ಮೂಡಿಸಿದವು. ಹಸಿವು ಬಡತನದಲ್ಲಿ, ಶ್ರೀಮಂತಿಕೆಯಲ್ಲಿ ಯಾವ ಯಾವ ರೀತಿ ಇರುತ್ತದೆ ಎಂದು ಈ ಕಥೆಯಲ್ಲಿ ಹೇಳಿದ್ದೇನೆ. ಹಸಿವಿನ ಸುತ್ತ ನಡೆಯುವ ಹಲವಾರು ಸಮಸ್ಯೆಗಳು, ಬದುಕಿನ ಮೌಲ್ಯಗಳನ್ನು ಈ ಕಥೆ ಹೇಳುತ್ತದೆ. ಮುಖ್ಯವಾಗಿ ನನ್ನ ಬದುಕಿಗೆ ತೀರ ಹತ್ತಿರವಾದ ಕಥೆಯೂ ಹೌದು ಎಂದು ಹೇಳಿದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed