ಕಿರು ಚಿತ್ರ `ಪ್ರಾಜೆಕ್ಟ್ ಸ್ವೀಟ್ ಲೈಮ್`
Posted date: 08 Fri, Mar 2019 – 09:37:05 AM

 ಕಿರುತೆರೆಯಲ್ಲಿ ಅನುಭವ ಪಡೆದ ಮಂದಿಯ ಮುಂದಿನ ಪಯಣ ಆರಂಭವಾಗೋದು ಹಿರಿತೆರೆಯಲ್ಲಿ. ಅದು ಕಲಾವಿದರಿಂದ ಹಿಡಿದು ತಂತ್ರಜ಼್ಞರವರೆಗೂ ಸಾಗುತ್ತದೆ. ಈಗಾಗಲೇ ಸಾಕಷ್ಟು  ಪ್ರತಿಭೆಗಳು ಕಿರುತೆರೆಯಿಂದ  ಹಿರಿತೆರೆಗೆ ಬಂದು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡು ಕೆಲವರು  ಸಫಲರಾಗಿರುವುದು ಉಂಟು. ಇದರ ಸಾಲಿಗೆ  ಅರ್ಜುನ್ ಕಿಶೋರ್‌ಚಂದ್ರ  ಸೇರ್ಪಡೆಯಾಗುತ್ತಾರೆ. ಹಾಗಂತ ಇವರಿಗೆ ಇದು ಹೊಸದಲ್ಲ. ೨೦೧೭ರಲ್ಲಿ ಲೈಫ್ ೩೬೦ ಎನ್ನುವ ಸಿನಿಮಾಕ್ಕೆ ನಿರ್ದೇಶನ ಮತ್ತು ನಾಯಕನಾಗಿ  ನಟಿಸಿದ ಅನುಭವವಿದೆ.  ಇದರ ಪ್ರೇರಣೆಯಿಂದಲೇ ಪ್ರಾಜೆಕ್ಟ್ ಸ್ವೀಟ್ ಲೈಮ್ ಎನ್ನುವ  ನೈಜ ಘಟನೆಯ ೨೩ ನಿಮಿಷದ ಕಿರುಚಿತ್ರವನ್ನು  ಸಿದ್ದಪಡಿಸಿದ್ದಾರೆ. ಕೆಲವು ತಿಂಗಳುಗಳ ಕೆಳಗೆ ಮಕ್ಕಳ ಅಪಹರಣಕಾರರೆಂದು ಅಮಾಯಕ ಮುಗ್ದರನ್ನು ಜನರು ಹೀನಾಯವಾಗಿ ಸಾಯಿಸಿದ್ದರು. ರಾಜಸ್ಥಾನದಿಂದ ಬಂದಿದ್ದ ಯುವಕ, ಹಾಗೂ ಹೈದರಬಾದ್‌ನ ವ್ಯಾಪರಸ್ಥ  ಇವರನ್ನು ಇದೇ ರೀತಿ ಅನುಮಾನಿಸಿದ ಹಿನ್ನಲೆಯಲ್ಲಿ  ಸಾರ್ವಜನಿಕರ ಕ್ರೂರರೂಪಕ್ಕೆ   ತುತ್ತಾದ ವರದಿ ಪ್ರಕಟವಾಗಿತ್ತು.
        ಇದನ್ನೆ ಆಧಾರವಾಗಿಟ್ಟುಕೊಂಡು  ಕಿರುಚಿತ್ರವನ್ನು ರಚಿಸಿದ್ದಾರೆ. ನಾಲ್ಕು ಜನರ ಸುತ್ತ ಕತೆ ಸಾಗುತ್ತದೆ. ಬೀದಿಬದಿ ಸಣ್ಣ ಅಂಗಡಿಗೆ ಗಿರಾಕಿಗಳು ಬರುತ್ತಿರುತ್ತಾರೆ. ಅದರಲ್ಲಿ ರೋಹಿತ್ ಎಂಬಾತ  ಅಂಗಡಿಯವನಿಗೆ ಹೆಚ್ಚು ಪರಿಚಯ. ಒಮ್ಮೆ ಭಿಕ್ಷುಕನೊಬ್ಬ ಅಲ್ಲಿಗೆ ಬಂದಾಗ ರೋಹಿತ್   ಸಂಶಯಗೊಂಡು  ಅವನನ್ನು ಹಿಂಬಾಲಿಸಿ, ಆತನ ಚಲನವಲನಗಳನ್ನು ಕಣ್ಣಾರೆ ಕಂಡು ಠಾಣೆಗೆ ದೂರನ್ನು ನೀಡುತ್ತಾನೆ. ವಿಷಯವನ್ನು ಗೆಳಯನಿಗೆ ತಿಳಿಸಿ ಈತ ಮಕ್ಕಳ ಕಳ್ಳ ಇರಬಹುದು. ಅಂಗಡಿ ಹತ್ತಿರ ಬಂದರೆ  ಎಚ್ಚರದಿಂದಿರು ಎಂದು ಹೇಳುತ್ತಾನೆ. ಇದನ್ನು ನಂಬಿ ಮಾರನೆ ದಿನ ಅಂಗಡಿಗೆ ಬಿಸ್ಕಟ್ ಕೇಳಲು ಬಂದಾಗ ಮಕ್ಕಳ ಕಳ್ಳನೆಂದು ಅಕ್ಕಪಕ್ಕದ ಜನರಿಗೆ ತಿಳಿಸಿದಂತೆ ಎಲ್ಲರು ಹೊಡೆದಾಗ ಪ್ರಾಣ ಕಳೆದುಕೊಳ್ಳುತ್ತಾನೆ. ಪೋಲೀಸರು ಇಬ್ಬರನ್ನು ತನಿಖೆಗೆ ಒಳಪಡಿಸಿದಾಗ ಹಿನ್ನಲೆಯನ್ನು ಹೇಳುವುದರೊಂದಿಗೆ ಸನ್ನಿವೇಶಗಳು  ತೆರೆದುಕೊಳ್ಳುತ್ತದೆ.  ಮುಂದೆ ಅಧಿಕಾರಿಯು ಅವರು ಭಿಕ್ಷುಕನಲ್ಲ.  ಕೆಲವು ದಿನಗಳಿಂದ ಡ್ರಗ್ಸ್ ದಂದೆ ನಿರಾಳವಾಗಿ ನಡೆಯುತ್ತಿರುವಾಗಿ ದೂರುಗಳು ಬಂದಿತ್ತು. ಇದನ್ನು ಕಂಡುಹಿಡಿಯಲು ನಿಷ್ಟಾವಂತ ಪೋಲೀಸ್ ಅಧಿಕಾರಿಯೊಬ್ಬನ್ನು ನಿಯುಕ್ತಿಗೊಳಿಸಲಾಗಿತ್ತು.  ಇದರ  ಜಾಲ ಹುಡುಕಲು  ಭಿಕ್ಷುಕನಾಗಿ ಮಾರುವೇಷದಲ್ಲಿ ಬಂದಿದ್ದರು. ಅವರನ್ನು ಕೊಂದು ಹಾಕಿದ್ದೀರಾ ಅಂತ ಬೇಸರ ವ್ಯಕ್ತಪಡಿಸುತ್ತಾರೆ. ಓಕೆ ಕೇಸ್ ಕಡತವನ್ನು  ಕ್ಲೋಸ್ ಮಾಡಿ ಎಂದು  ಹೇಳುತ್ತಾರೆ. ಪೇದೆಯು ಅದನ್ನು ತಗೆದುಕೊಳ್ಳಲು ಮುಂದೆ ಬಂದಾಗ ರೋಹಿತ್  ಕಡತ ತೆಗೆದುಕೊಂಡು ಅಧಿಕಾರಿ ಎದುರು ನಿಂತಾಗ ತೆರೆ ಬೀಳುತ್ತದೆ.

ಮೂರು ದಿನಗಳ ಕಾಲ ಬೆಂಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಧಿಕಾರಿಯಾಗಿ ಕೆ.ಎಸ್.ಶ್ರೀಧರ್, ಅಂಗಡಿಯವನಾಗಿ ಪ್ರಕಾಶ್ ತುಮ್ಮಿನಾಡು,  ಭಿಕ್ಷುಕನ ಪಾತ್ರಕ್ಕೆ ಕೇಶವಮೂರ್ತಿ, ಗೆಳಯನಾಗಿ ರೋಹಿತ್ ನಟಿಸಿದ್ದಾರೆ. ಛಾಯಾಗ್ರಹಣ ಅನಿಲ್‌ಕುಮಾರ್.ಕೆ, ಸಂಭಾಷಣೆ ಮದನ್‌ರಾಮ್‌ವೆಂಕಟೇಶ್, ಸಂಕಲನ ದುರ್ಗ.ಪಿ.ಎಸ್., ಸಂಗೀತ ಸಿದ್, ಕಾರ್ಯಕಾರಿ ನಿರ್ಮಾಪಕ ಮೈಸೂರುಶಿವು-ಕೌಶಿಕ್ ಅವರದಾಗಿದೆ.   ನಿರ್ದೇಶಕರ ಕನಸಿಗೆ ೩ ಪಾಂಡ ಪ್ರೊಡಕ್ಷನ್ ಸಂಸ್ಥೆಯು  ಬಂಡವಾಳ ಹೂಡಿದೆ.

ಇತ್ತೀಚೆಗೆ ಟಿಕೆಟ್ ದರದೊಂದಿಗೆ ಪ್ರದರ್ಶನ ಏರ್ಪಾಟು ಮಾಡಲಾಗಿತ್ತು.  ನಟ ವಿನಾಯಕ್‌ಜೋಷಿ, ಫೇಸ್ ಟು ಫೇಸ್ ನಾಯಕ ರೋಹಿತ್‌ನಾರಾಯಣ್, ಹಿರಿಯ ವಕೀಲ ಹರ್ಷಮುತಾಲಿಕ್ ಮುಂತಾದ ಗಣ್ಯರು ಚಿತ್ರ  ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿ, ಸಿನಿಮಾ ಮಾಡುವಂತೆ ಹುರಿದುಂಬಿಸಿದ್ದಾರೆ.  ಗಳಿಕೆ ಹಣವನ್ನು ಪುಲ್ವಾಮ ದುರಂತದಲ್ಲಿ ಮರಣಹೊಂದಿದ ಮಂಡ್ಯಾದ ಯೋಧ ಗುರು  ಊರಿನ ಬಡಕುಟುಂಬದ ಮಕ್ಕಳಿಗೆ ಲೇಖನಸಾಮಗ್ರಿಗಳನ್ನು ಉಚಿತವಾಗಿ  ನೀಡಲು ತಂಡವು ಯೋಜನೆ ಹಾಕಿಕೊಂಡಿದೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed