ಮುಂಬಯಿಯಲ್ಲಿ ಸಿ ಅಶ್ವಥ್ - ಸ್ವರ ಮಾಂತ್ರಿಕ ಬಿರುದು ಪ್ರದಾನ, ಅಪೂರ್ವ ಸಂಗೀತ ಸಂಜೆ
Posted date: 21/April/2009

ಮುಂಬಯಿ, ಎಪ್ರಿಲ್ ೧೯: ಕನ್ನಡ ಸುಗಮ ಸಂಗೀತ ಲೋಕದ ಮಾಂತ್ರಿಕ, ಪ್ರಖ್ಯಾತ ಸಂಗೀತ ನಿರ್ದೇಶಕ- ಗಾಯಕ ಸಿ. ಅಶ್ವಥ್, ಇಂದು ಸಂಜೆ ಮುಂಬಯಿಯ ತುಂಬಿ ತುಳುಕುತ್ತಿದ್ದ ಷಣ್ಮುಖಾನಂದ ಸಭಾಗೃಹದಲ್ಲಿ ತನ್ನ ತಂಡದ ಜೊತೆ ಸುಮಾರು ಮೂರು ಗಂಟೆಗಳ ಕಾಲ ಸುಗಮ ಸಂಗೀತದ ಹೊಳೆ ಹರಿಸಿ, ಮುಂಬಯಿ ಕನ್ನಡಿಗರಲ್ಲಿ ಅಪೂರ್ವ ನೆನಪುಗಳನ್ನು ಉಳಿಸಿ, ಎಂದೆಂದೂ ಅಚ್ಚಳಿಯದ ರಸದೌತಣದ ಅನುಭವ ನೀಡಿದರು.
ಮುಂಬಯಿಯ ಕರ್ನಾಟಕ ಸಂಘವು, ತನ್ನ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಇಂದು ಸಂಜೆ, ಷಣ್ಮುಖಾನಂದ ಸಭಾಗೃಹದಲ್ಲಿ ಮುಂಬಯಿಯಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡ ಸುಗಮ ಸಂಗೀತದ ಬಾದ್‌ಶಾಹ್ ಸಿ. ಅಶ್ವಥ್ ರ ಕಾವ್ಯಗಾಯನ, ರಸಧಾರೆಯಿಂದ ಮುಂಬಯಿ ಕನ್ನಡಿಗ ಶ್ರೋತೃಗಳ ಮನ ತಣಿಸಿತು.
      ಬಾಲಿವುಡ್ ಹಾಗೂ ಮರಾಠಿ ಚಿತ್ರೋದ್ಯಮದ ಪ್ರಖ್ಯಾತ ನಿರ್ಮಾಪಕ - ನಿರ್ದೇಶಕ ಕಿರಣ್ ವಿ ಶಾಂತಾರಾಮ್, ಗೌರವ ಅತಿಥಿಯಾಗಿ ಆಗಮಿಸಿದ್ದು, ದೀಪ ಬೆಳಗಿಸಿ ಮುಂಬಯಿಯಲ್ಲಿ ಸಿ ಅಶ್ವಥ್ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಮೊದಲು ಕರ್ನಾಟಕ ಸಂಘ ಕ್ಕೆ, ಅದರ ಅಮೃತ ಮಹೊತ್ಸವದ ಸಂದರ್ಭದಲ್ಲಿ ಅಭಿನಂದಿಸಿದರು. ಮುಂಬಯಿಯ ಮಾಜಿ ಶೆರಿಫ್ ಆಗಿ ನಾನು ಸಿ ಅಶ್ವಥ್ ಹಾಗೂ ಅವರ ತಂಡವನ್ನು ಮುಂಬಯಿಗೆ ಸ್ವಾಗತಿಸುತ್ತಿದ್ದೆನೆ. ನನಗೆ ಕನ್ನಡ ಭಾಷೆ ಬಾರದಿದ್ದರೂ, ಸಂಗೀತಕ್ಕೆ ಭಾಷೆಯ ಬಂಧನವಿಲ್ಲ, ಹೀಗಾಗಿ ಅಶ್ವಥ್ ಅವರ ಹಾಡುಗಳ ರುಚಿಯನ್ನು ಆಸ್ವಾದಿಸುತ್ತಿದ್ದೇನೆ. ನನಗೆ ಬೇರೆ ತುರ್ತು ಕೆಲಸವಿತ್ತು, ಆದರೆ ಈ ಕಾರ್ಯಕ್ರಮವನ್ನು ಅರ್ಧದಲ್ಲಿ ಬಿಟ್ಟು ಹೋದರೆ, ಅದು ನನಗೆ ತುಂಬಲಾರದ ನಷ್ಟವಾದೀತು. ಹೀಗಾಗಿ ಸಂಪೂರ್ಣ ಕಾರ್ಯಕ್ರಮವನ್ನು ಕೇಳಿಯೇ ಹೋಗುತ್ತೇನೆ. ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವುದು ಸಂಘದ ಉದ್ದೇಶಗಳಲ್ಲೊಂದಾಗಿದೆ. ಈ ಕಾರ್ಯಕ್ರಮಕ್ಕೆ ಬಂದಿರುವ ವಿವಿಧ ಭಾಷೆಯ ಜನರನ್ನು ನೋಡಿದಾಗ, ಸಂಘದ ಉದ್ದೇಶ ನೆರೆವೇರಿದೆ ಎಂದು ನಾನು ಹೇಳಬಲ್ಲೆ ಎಂದು ನುಡಿದರು ಶ್ರೀ. ಕಿರಣ್ ಶಾಂತಾರಾಮ್.
      ಈ ಸಂದರ್ಭದಲ್ಲಿ ಗೌರವ ಅತಿಥಿ, ಬಾಲಿವುಡ್‌ನ ಪ್ರಖ್ಯಾತ ಸಂಗೀತ ನಿರ್ದೇಶಕ ರವೀಂದ್ರ ಜೈನ್ ಅವರು, ಸಿ ಅಶ್ವಥ್‌ರನ್ನು ಮುಂಬಯಿ ಕನ್ನಡಿಗರ ಪರವಾಗಿ ಶಾಲು, ಫಲ ತಾಂಬೂಲ, ನೆನಪಿನ ಕಾಣಿಕೆಯನ್ನಿತ್ತು, ಇನ್ನೋರ್ವ ಗೌರವ ಅತಿಥಿ ಜಸ್ಟಿಸ್ ಬಿ ಎನ್ ಶ್ರೀಕೃಷ್ಣ ಅವರ ಜೊತೆಗೂಡಿ ಸನ್ಮಾನಿಸಿದರು.
      ಸಿ. ಅಶ್ವಥ್ ಅವರಿಗೆ ಮುಂಬಯಿ ಕನ್ನಡಿಗರ ಪರವಾಗಿ ಜಸ್ಟಿಸ್ ಬಿ. ಎನ್ ಶ್ರೀಕೃಷ್ಣ ಅವರು ಸ್ವರ ಮಾಂತ್ರಿಕ ಎಂಬ ಬಿರುದನ್ನಿತ್ತು ಗೌರವಿಸಿದರು.
      ರವೀಂದ್ರ ಜೈನ್ ಅವರು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸುತ್ತ ಅಶ್ವಥ್ ಅವರ ಹಾಡುಗಳನ್ನು ಕೇಳುವುದೇ ಒಂದು ಸೌಭಾಗ್ಯ. ಅವರ ಕಂಠದಲ್ಲಿ ಒಂದು ಜಾದೂ ಇದೆ. ಮುಂಬಯಿಯಲ್ಲಿ ಅಶ್ವಥ್ ಮೊದಲ ಬಾರಿ ಹಾಡುತ್ತಿದ್ದಾರೆ. ಇಂದಿನ ಕೇಳುಗರು ನಿಜಕ್ಕೂ ಅದೃಷ್ಟವಂತರು ಎಂದು ಹೇಳಿದರು.
      ಗೌರವ ಅತಿಥಿ ಜಸ್ಟಿಸ್ ಬಿ. ಎನ್ ಶ್ರೀಕೃಷ್ಣ, ಅವರು ತಮ್ಮ ಭಾಷಣದಲ್ಲಿ ನಾನು ಸಾಕಷ್ಟು ಬಾರಿ ಈ ಸಭಾಗೃಹಕ್ಕೆ ಬಂದಿದ್ದರೂ, ಈ ರೀತಿ ಜನ ಕಿಕ್ಕಿರಿದು ತುಂಬಿರುವುದನ್ನು ಮೊದಲ ಬಾರಿ ನೋಡುತ್ತಿರುವೆ. ಬಹುಶಃ ಇದು ಅಶ್ವಥ್ ಅವರ ಕಂಠದ ಮಾಂತ್ರಿಕ ಶಕ್ತಿಯಿಂದ ಸಾಧ್ಯವಾಗಿದೆ. ಹೀಗಾಗಿ ಅಶ್ವಥ್ ಅವರಿಗೆ ಸಂದ ಸ್ವರ ಮಾಂತ್ರಿಕ ಎಂಬ ಬಿರುದು ಅತ್ಯಂತ ಅರ್ಥಪೂರ್ಣವಾಗಿದೆ. ಅಶ್ವಥ್ ಅವರು ಇದೇ ರೀತಿ ಇನ್ನೂ ಹಲವಾರು ವರ್ಷ ನಿರಂತರವಾಗಿ ಕನ್ನಡದ ಬಾವುಟವನ್ನು ದೇಶವಿದೇಶಗಳಲ್ಲಿ ಹಾರಿಸುತ್ತಿರಲಿ ಎಂದು ಹಾರೈಸಿದರು.
      ಕರ್ನಾಟಕ ಸಂಘ, ಮುಂಬಯಿ ಇದರ ಅಧ್ಯಕ್ಷ, ಮನೋಹರ್ ಎಂ ಕೋರಿ ಮತ್ತು ಗೌರವ ಕೋಷಾಧಿಕಾರಿ ಬಿ. ಈ. ನಾಯಕ್, ಅತಿಥಿಗಳನ್ನು ಗೌರವಿಸಿದರು. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ್ ಜಿ ಕಪ್ಪಣ್ಣ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯ ಅತಿಥಿಗಳನ್ನು ಪ್ರಖ್ಯಾತ ನಟಿ ಅಹಲ್ಯಾ ಬಲ್ಲಾಳ್ ಪರಿಚಯಿಸಿದರು. ಕರ್ನಾಟಕ ಸಂಘದ ಉಪಾಧ್ಯಕ್ಷ ಭರತ್ ಕುಮಾರ್ ಪೊಲಿಪು ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮದ ಸ್ಥೂಲ ವಿವರಗಳನ್ನು ತಿಳಿಸಿದರು. ಸಂಘದ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್, ಧನ್ಯವಾದಾರ್ಪಣೆಯನ್ನು ಮಾಡಿದರು.
      ಸಂಗೀತ ಕಾರ್ಯಕ್ರಮ ನಿರ್ವಹಣೆಯನ್ನು ವಿದುಷಿ ಶ್ಯಾಮಲಾ ಪ್ರಕಾಶ್ ಹಾಗೂ ಅಹಲ್ಯಾ ಬಲ್ಲಾಳ್ ನಿರ್ವಹಿಸಿದರು.
      ಅಶ್ವಥ್‌ರ ಕಾವ್ಯಗಾಯನದ ತಂಡದಲ್ಲಿ ಎಂ ಡಿ ಪಲ್ಲವಿ, ಸುಪ್ರಿಯಾ ಆಚಾರ್ಯ, ಕಿಕ್ಕೇರಿ ಕೃಷ್ಣಮೂರ್ತಿ, ರವಿ ಮೂರುರು, ಸಂಗೀತಾ ಕಟ್ಟಿ, ವಿನಯ ಕುಮರ್ ಮೊದಲಾದವರು ತಮ್ಮ ಸುಮಧುರ ಕಂಠದಿಂದ ಕನ್ನಡದ ಖ್ಯಾತನಾಮ ಕವಿಗಳಾದ ಶಿಶುನಾಳ ಶರೀಫ್, ಕುವೆಂಪು, ದ ರಾ ಬೇಂದ್ರೆ, ಹೆಚ್ ವೆಂಕಟೇಶಮೂರ್ತಿ, ಚಂ ಪಾ ಮುಂತಾದವರ ಕವನಗಳನ್ನು ಹಾಡಿದರು. ಅತಿಥಿಗಳು, ಮುಂಬಯಿ ಕನ್ನಡಿಗರು ಅಶ್ವಥ್‌ರ ಈ ಗಾಯನ ಕಾರ್ಯಕ್ರಮ, ಅಪೂರ್ವ- ಐತಿಹಾಸಿಕ ಘಟನೆ ಎಂದು ಮನದುಂಬಿ ಆಸ್ವಾದಿಸಿದರು

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed